ದಿಲ್ಲಿ ಪ್ರವಾಹಕ್ಕೆ ಜನಜೀವನ ಅಸ್ತವ್ಯಸ್ತ : ಉತ್ತರ ಭಾರತಾದ್ಯಂತ ಮಳೆ ಅನಾಹುತ
ಹೊಸದಿಲ್ಲಿ : ಭಾರಿ ಮಳೆಯಿಂದ ತತ್ತರಿಸಿರುವ ರಾಜಧಾನಿ ದಿಲ್ಲಿಯಲ್ಲಿ ಯಮುನಾ ನದಿ ಅಬ್ಬರಕ್ಕೆ ಜನಜೀವನ ಅಕ್ಷರಶಃ ನಲುಗಿದೆ. ನದಿ ನೀರಿನ ಪ್ರಮಾಣ ಇಳಿಕೆಯಾಗದೆ ತೊಂದರೆಗೆ ಸಿಲುಕಿದವರನ್ನು ಸ್ಥಳಾಂತರಿಸುವುದು ಬಿಟ್ಟರೆ ಪರಿಹಾರ ಕಾರ್ಯಗಳನ್ನು ಕೈಗೊಳ್ಳಲು ಆಗುತ್ತಿಲ್ಲ. ಕೆಂಪು ಕೋಟೆಯನ್ನು ತೋಯಿಸಿರುವ ಯಮುನೆ ಇಂದು ಸುಪ್ರೀಂ ಕೋರ್ಟಿನ ಬಾಗಿಲಿಗೆ ಬಂದಿದ್ದಾಳೆ. ಉತ್ತರ ಭಾರತದಲ್ಲಿ ಈಗಾಗಲೇ ಮಳೆ ಹಾನಿಗೆ 150 ಮಂದಿ ಮೃತಪಟ್ಟು ಭಾರಿ ಪ್ರಮಾಣದ ಹಾನಿ ಆಗಿದೆ. ಮತ್ತೆ ಸುರಿವ ಮಳೆ ಹಿಮಾಚಲ ಪ್ರದೇಶದಲ್ಲಿ ಆತಂಕ ಹುಟ್ಟು ಹಾಕಿದೆ.

ಸತತ ನಾಲ್ಕು ದಿನದಿಂದ ಯಮುನಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಗುರುವಾರ ರಾತ್ರಿಯೂ 208.63 ಮೀಟರ್ ಮೇಲ್ಮಟ್ಟದಲ್ಲಿ ಹರಿವಿನ ಪ್ರಮಾಣವಿತ್ತು. ಇದರಿಂದ ದೆಹಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಹಲವಾರು ಬಡಾವಣೆಗಳಿಗೆ ನೀರು ನುಗ್ಗಿ ಜನ ತೊಂದರೆ ಅನುಭವಿಸಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ನದಿ ಅಕ್ಕಪಕ್ಕದ ಪ್ರದೇಶದ 25 ಸಾವಿರಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.
ಜಲ ಪ್ರವಾಹದಿಂದ ಬಹಳಷ್ಟು ವಾಹನಗಳು ರಾತ್ರಿ ಬಹು ಹೊತ್ತಿನವರೆಗೂ ನಿಂತಲ್ಲೇ ನಿಂತಿದ್ದವು. ನೂರಾರು ವಾಹನಗಳು ನೀರಿನಲ್ಲಿ ಮುಳುಗಿವೆ.
ಎನ್‌ಡಿಆರ್‌ಆಫ್ ಹಾಗೂ ಇತರೆ ರಕ್ಷಣಾ ತಂಡಗಳು ಯುದ್ದೋಪಾದಿಯಲ್ಲಿ ಕೆಲಸ ಮಾಡುತ್ತಿವೆ. ಜಲಪ್ರವಾಹದಡಿ ಸಿಲುಕಿದವರನ್ನು ರಕ್ಷಿಸುವ ಕಾರ್ಯದಲ್ಲಿ ನಿರತವಾಗಿವೆ. ನೆರೆ ನೀರು ನುಗ್ಗಿರುವ ಕಾರಣ ಕೆಂಪು ಕೋಟೆ ಪ್ರವೇಶವನ್ನು ಎರಡು ದಿನ ಬಂದ್ ಮಾಡಲಾಗಿದೆ. ಮಳೆಯಿಂದ ಜನರಿಗೆ ತೊಂದರೆಯಾಗಿದ್ದು, ಪ್ರವಾಸಿಗರು ಸಂಕಷ್ಟಕ್ಕೆ ಸಿಲುಕದಂತೆ ಈ ಆದೇಶ ಮಾಡಲಾಗಿದೆ ಎಂದು ಭಾರತೀಯ ಪುರಾತತ್ವ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಈಗಾಗಲೇ ದೆಹಲಿಯಲ್ಲಿ ಶಾಲಾ, ಕಾಲೇಜು, ಸರ್ಕಾರಿ ಕಚೇರಿಗಳಿಗೆ ರಜೆ ಘೋಷಿಸಲಾಗಿದೆ.

ಹಿಮಾಚಲ ಪ್ರದೇಶ ಮಳೆಯಿಂದ ಅಲ್ಲಲ್ಲಿ ಸಿಲುಕಿದ್ದ ಪ್ರವಾಸಿಗರ ರಕ್ಷಣೆಗೆ ಐಎಎಫ್ ಹೆಲಿಕಾಪ್ಟರ್‌ಗಳನ್ನು ಬಳಸಲಾಗಿದೆ. ಈವರೆಗೂ 50 ಸಾವಿರ ಪ್ರವಾಸಿಗರನ್ನು ರಕ್ಷಿಸಲಾಗಿದೆ. ಇದರಲ್ಲಿ ಇಸ್ರೇಲ್, ರಷ್ಯಾ ಸೇರಿ ವಿದೇಶಿ ಪ್ರವಾಸಿಗರೂ ಇದ್ದಾರೆ. ಇನ್ನೂ ಸಾಕಷ್ಟು ಪ್ರವಾಸಿಗರು ಸಿಲುಕಿರುವ ಮಾಹಿತಿಯಿದ್ದು. ಎಲ್ಲರ ರಕ್ಷಣೆ ಮಾಡಲಾಗುವುದು ಎಂದು ಸಿಎಂ ಸುಖವಿಂದರ್ ಸಿಂಗ್ ಸುಖು ಹೇಳಿದ್ದಾರೆ.































































