ಬಿಹಾರ : ಶಿಕ್ಷಕರ ಹುದ್ದೆಗೆ ಸಂಬಂಧಿಸಿದಂತೆ ಪಾಟ್ನಾದಲ್ಲಿ ಬಿಜೆಪಿ ಕಾರ್ಯಕರ್ತರು ನಡೆಸಿದ ಪ್ರತಿಭಟನೆ ವೇಳೆ ಬಿಹಾರ ಪೊಲೀಸರು ನಡೆಸಿರುವ ಲಾಠಿ ಚಾರ್ಜ್ನಲ್ಲಿ ಬಿಜೆಪಿ ಮುಖಂಡರೊಬ್ಬರು ಸಾವನ್ನಪ್ಪಿದ್ದಾರೆ. ಬಿಜೆಪಿಯ ಜೆಹಾನಾಬಾದ್‌ನ ಪ್ರಧಾನ ಕಾರ್ಯದರ್ಶಿ ವಿಜಯ್‌ಕುಮಾರ್ ಸಿಂಗ್ ಮೇಲೆ ಪ್ರತಿಭಟನೆ ವೇಳೆ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ ಎಂದು ರಾಜ್ಯಸಭಾ ಸಂಸದ ಸುಶೀಲ್ ಕುಮಾರ್ ಮೋದಿ ಹೇಳಿದ್ದಾರೆ. ಲಾಠಿ ಏಟು ತಿಂದ ಬಳಿಕ ಅವರು ರಸ್ತೆಯಲ್ಲಿ ಬಿದ್ದಿದ್ದು, ಪರಿಣಾಮವಾಗಿ ಹಣೆಗೆ ಗಾಯವಾಗಿರುತ್ತದೆ. ನಂತರವೂ ಪೊಲೀಸರು ಲಾಠಿ ಚಾರ್ಜ್ ಮುಂದುವರಿಸಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ತಾರಾ ನರ್ಸಿಂಗ್ ಹೋಮ್‌ಗೆ ಕಳುಹಿಸಲಾಯಿತು, ಅಲ್ಲಿ ಪರೀಕ್ಷಿಸಿದ ವೈದ್ಯರು ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು.
ಲಾಠಿಚಾರ್ಜ್ ಸಂದರ್ಭದಲ್ಲಿ ಸಂಸದರಿಗೂ ಥಳಿಸಲಾಯಿತು , ಬಿಹಾರ ಪೊಲೀಸರು ಬಿಜೆಪಿ ಸಂಸದ ಜನಾರ್ದನ್ ಸಿಂಗ್ ಸಿಗ್ರಿವಾಲ್ ಮತ್ತು ಬಿಹಾರದ ವಿರೋಧ ಪಕ್ಷದ ನಾಯಕ ವಿಜಯ್ ಕುಮಾರ್ ಸಿನ್ಹಾ ಅವರ ಮೇಲೂ ಲಾಠಿಚಾರ್ಜ್ ಮಾಡಿದರು. ಜನಾರ್ದನ್ ಸಿಂಗ್ ಸಿಗ್ರಿವಾಲ್ ಗಂಭೀರ ಗಾಯಗೊಂಡಿದ್ದಾರೆ. ಸಿಗ್ರಿವಾಲ್ ತಲೆಗೆ ಗಾಯವಾಗಿದೆ ಎಂದು ಹೇಳಲಾಗುತ್ತಿದೆ.







































