ಪಡುಕುತ್ಯಾರು : ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠಾಧೀಶ್ವರ ಅನಂತಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳವರ ಚಾತುರ್ಮಾಸ್ಯ ಜು.3ರಿಂದ ಸೆ.29ರವರೆಗೆ ಪಡುಕುತ್ಯಾರಿನಲ್ಲಿ ನಡೆಯಲಿದೆ. ಆನೆಗುಂದಿ ಶ್ರೀಗಳವರ ಶೋಭಕೃತ್ ಸಂವತ್ಸರದ 19ನೇ ವರ್ಷದ ಚಾತುರ್ಮಾಸ್ಯವಾಗಿದ್ದು ಪಡುಕುತ್ಯಾರಿನ ಆನೆಗುಂದಿ ಮಠದಲ್ಲಿ 8ನೇ ಬಾರಿಗೆ ಸೆ.29ರಂದು ಸಂಪನ್ನಗೊಳ್ಳಲಿದೆ.
ಜುಲೈ 3ರಂದು ವಿಶ್ವಕರ್ಮ ಯಜ್ಞ, ವ್ಯಾಸ ಪೂಜೆಯೊಂದಿಗೆ ವ್ರತ ಸಂಕಲ್ಪ ನಡೆಯಲಿದ್ದು, ಗುರುಪಾದ ಪೂಜೆಯ ಬಳಿಕ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆಯು ನಡೆಯಲಿದೆ. ಅಪರಾಹ್ನ ಸಾಂಸ್ಕೃತಿಕ ಕಾರ್ಯಕ್ರಮದ ನಡೆಯಲಿದೆ.
ಪ್ರತಿದಿನ ಬೆಳಗ್ಗೆ ಭಜನಾ
ಸಂಕೀರ್ತಾನಾ ಸೇವೆ, ಗುರುಪಾದಪೂಜೆ, ಸಾಂಸ್ಕೃತಿಕ ಕಾರ್ಯಕ್ರಮ, ದುರ್ಗಾ ನಮಸ್ಕಾರ ಪೂಜೆ, ಪಾರಾಯಣ, ಭಾನುವಾರ ವಿಶೇಷ ಉಪನ್ಯಾಸ, ವಿಚಾರಗೋಷ್ಠಿಗಳು ನಡೆಯಲಿವೆ. ಜು.15ರಂದು ಆನೆಗುಂದಿಶ್ರೀಗಳವರ ಜನ್ಮವರ್ಧಂತಿಯು ನಡೆಯಲಿದ್ದು ವಿಶೇಷ ಹೋಮ ಹವನ ವೈದಿಕ ಕಾರ್ಯಕ್ರಮಗಳು, ಜಗದ್ಗುರುಗಳವರ ತುಲಾಭಾರ ಸೇವೆ ನಡೆಯಲಿದೆ. ಬಳಿಕ ನಡೆಯುವ ಧರ್ಮ ಸಂಸತ್ತಿನಲ್ಲಿ ವೇ. ಬ್ರ. ಶಂಕರ ಆಚಾರ್ಯ ಕಡ್ಲಾಸ್ಕರ್ ಪಂಡಿತ್ ಅವರಿಗೆ ವೈದಿಕ ವಿಭಾಗದಲ್ಲಿ ಮಹಾಸಂಸ್ತಾನದ ಆಸ್ಥಾನ ವಿದ್ವಾನ್ ಪದವಿಯನ್ನು ಪ್ರದಾನ ಮಾಡಲಾಗುವುದು.
ಬಳಿಕ ಶ್ರೀ ನಾಗಧರ್ಮೇಂದ್ರ ಸರಸ್ವತೀ ವಿದ್ಯಾರ್ಥಿ ಭವನದ ಉದ್ಘಾಟನೆ ನಡೆಯಲಿದ್ದು, ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್ ತಂಗಡಗಿ ಭಾಗವಹಿಸಲಿದ್ದಾರೆ. ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆ, ಕೋಟ ಶ್ರೀನಿವಾಸ ಪೂಜಾರಿ, ಸುನಿಲ್ ಕುಮಾರ್ ಕಾರ್ಕಳ, ಸ್ಥಳೀಯ ಶಾಸಕ ಗುರ್ಮೆ ಸುರೇಶ್ ಕುಮಾರ್ ಶೆಟ್ಟಿ, ಸಮಾಜ ಸೇವಕ ಮಿಥುನ್ ಕುಮಾರ್ ರೈ ಮುಂತಾದವರು ಭಾಗವಹಿಸಲಿದ್ದಾರೆ.


ಸೆ. 29ರಂದು ಚಾತುರ್ಮಾಸ್ಯದ ಸಮಾರೋಪವು ನಡೆಯಲಿದ್ದು ಸೀಮೋಲ್ಲಂಘನ ಧಾರ್ಮಿಕ ಸಭೆಯು ನಡೆಯಲಿದ್ದು ವಿವಿಧ ಸಚಿವರು ಗಣ್ಯರು ಭಾಗವಹಿಸಲಿದ್ದಾರೆ. ಈ ಬಗ್ಗೆ ಜೂ.29ರಂದು ನಡೆದ ಅಂತಿಮ ಸಿದ್ದತಾ ಸಭೆಯಲ್ಲಿ ಚಾತುರ್ಮಾಸ್ಯದ ಆಮಂತ್ರಣ ಪತ್ರಿಕೆ ವಿತರಣೆ, ಪ್ರಚಾರ, ಸ್ವಾಗತ ಸಮಿತಿ, ವೈದಿಕ ಸಮಿತಿ, ಪಾದಪೂಜಾ ಸಮಿತಿ, ಆಹಾರ ಹೊರೆಕಾಣಿಕೆ ಸಮಿತಿ, ಕಚೇರಿ ಸಮಿತಿ, ಭಜನಾ ಸಮಿತಿ, ಸ್ವಯಂ ಸೇವಕ ಸಮಿತಿ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಚರ್ಚೆ ನಡೆಸಿ ತೀರ್ಮಾನಗಳನ್ನು ಕೈಗೊಳ್ಳಲಾಯಿತು.
ಚಾತುರ್ಮಾಸ್ಯ ಪೂರ್ವಭಾವಿಯಾಗಿ ವಾಡಿಕೆಯಂತೆ ಕ್ಷೇತ್ರ ಸಂದರ್ಶನವನ್ನು ಶ್ರೀಗಳವರು ಆನೆಗುಂದಿ, ಅಂಕೋಲಾ, ಕೊಲಕಾಡಿ, ಪಡುಪಣಂಬೂರು, ಮಂಗಳೂರು, ಮಧೂರು, ಆರಿಕ್ಕಾಡಿ ಕಾರ್ಲೆ, ಬಂಗ್ರಮಂಜೇಶ್ವರ, ಕೋಟೆಕ್ಕಾರು, ಕಾರ್ಕಳ, ಮೂಡಬಿದ್ರೆ, ಗೋಕರ್ಣ, ಭಟ್ಕಳ,ಬಾರಕೂರು, ಉಪ್ರಳ್ಳಿ, ಕಟಪಾಡಿ, ಕಾಪು, ಹಳೆಯಂಗಡಿ ಮತ್ತು ಶೃಂಗೇರಿ ಕ್ಷೇತ್ರಗಳನ್ನು ಸಂದರ್ಶಿಸಿದ ಮಾಹಿತಿಯನ್ನು ಸಭೆಗೆ ತಿಳಿಸಲಾಯಿತು. ಅಲ್ಲದೆ ಸಮಿತಿ ಪದಾಧಿಕಾರಿಗಳು ಮುಂಬಯಿ ಪನ್ವೇಲ್, ಮುಂಬೈ ಮೀರಾ ರೋಡ್, ಕೊಂಯಂಬುತ್ತೂರು, ಬೆಂಗಳೂರು, ಹುಬ್ಬಳ್ಳಿ ಪ್ರದೇಶಗಳಿಗೆ ಸಂದರ್ಶಿಸಿ ಆಮಂತ್ರಣ ಪತ್ರಿಕೆಯನ್ನು ವಿತರಿಸಿದ್ದಾರೆ.
ಸಭೆಯಲ್ಲಿ ದಿವ್ಯ ಸಾನಿಧ್ಯವನ್ನು ವಹಿಸಿದ ಆನೆಗುಂದಿ ಶ್ರೀಗಳವರು ಅಗತ್ಯ ಮಾರ್ಗದರ್ಶನವನ್ನು ನೀಡಿದರು. ಅಧ್ಯಕ್ಷತೆಯನ್ನು ಚಾತುರ್ಮಾಸ್ಯ ವ್ರತ ನಿರ್ವಹಣಾ ಸಮಿತಿ ಉಪಾಧ್ಯಕ್ಷ ಕಳಿ ಚಂದ್ರಯ್ಯ ಆಚಾರ್ಯ ಉಪ್ರಳ್ಳಿ ವಹಿಸಿದ್ದರು. ಕೋಶಾಧಿಕಾರಿ ಅರವಿಂದ ವೈ. ಆಚಾರ್ಯ, ಉಪಾಧ್ಯಕ್ಷ ಕೋಟೆಕಾರು ಪ್ರಭಾಕರ ಆಚಾರ್ಯ ಮಧೂರು, ತ್ರಾಸಿ ಸುಧಾಕರ ಆಚಾರ್ಯ, ಸಂಧ್ಯಾ ಲಕ್ಷ್ಮಣ ಆಚಾರ್ಯ ಉಡುಪಿ, ಕರಂಬಳ್ಳಿ ಜಯಕರ ಆಚಾರ್ಯ, ಕಾರ್ಯದರ್ಶಿಗಳಾದ ಪ್ರಶಾಂತ್ ಡಿ. ಆಚಾರ್ಯ ಕಟಪಾಡಿ, ನಿಟ್ಟೆ ಸುರೇಶ್ ಆಚಾರ್ಯ ಕಾರ್ಕಳ, ರತ್ನಾಕರ ಆಚಾರ್ಯ ಉದ್ಯಾವರ, ರವೀಂದ್ರ ಆಚಾರ್ಯ ಕಟಪಾಡಿ, ಕನ್ಯಾನ ಜನಾರ್ಧನ ಆಚಾರ್ಯ, ರಾಜು ಎನ್. ಆಚಾರ್ಯ ಬೆಳ್ಳಂಪಳ್ಳಿ, ದಿನೇಶ್ ಆಚಾರ್ಯ ಕಿನ್ನಿಗೋಳಿ, ಯಜ್ಞೇಶ್ವರ ಆಚಾರ್ಯ ಕುತ್ಯಾರು, ಸುರೇಶ್ ಆಚಾರ್ಯ ಉಡುಪಿ, ರಮಾ ನವೀನ್ ಆಚಾರ್ಯ ಕಾರ್ಕಳ, ವಿವಿಧ ಸಮಿತಿ ಸದಸ್ಯರಾದ ಪೆರ್ಣೆ ಕೆ.ಎಂ ಮಧುಸೂಧನ ಆಚಾರ್ಯ ಕಾಸರಗೋಡು, ವಿಜಯಲಕ್ಷ್ಮಿ ಎಸ್. ಆಚಾರ್ಯ ಕಾಪು, ದೀಪಾ ಸುರೇಶ್ ಆಚಾರ್ಯ ಉಡುಪಿ, ಗಣೇಶ್ ಆಚಾರ್ಯ ಕೋಟ, ವಸಂತ ಆಚಾರ್ಯ ಮಜೂರು, ವಾದಿರಾಜ ಆಚಾರ್ಯ ಪಡುಕುತ್ಯಾರು ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಲೋಕೇಶ್ ಎಂ. ಬಿ. ಆಚಾರ್ ಕಂಬಾರು ಸ್ವಾಗತಿಸಿ, ಕಾರ್ಯದರ್ಶಿ ಕಾಡಬೆಟ್ಟು ನಾಗರಾಜ ಆಚಾರ್ಯ ಉಡುಪಿ ಧನ್ಯವಾದವಿತ್ತರು.



























