ಕಾರಿನಲ್ಲಿ ಹೋಗುವಾಗ ಅಡ್ಡಗಟ್ಟಿ ದಾಳಿ
ಹೊಸದಿಲ್ಲಿ: ಉತ್ತರ ಪ್ರದೇಶದಲ್ಲಿ ಪ್ರಬಲವಾಗಿರುವ ಭೀಮ್ ಆರ್ಮಿಯ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ರಾವಣ್ ಮೇಲೆ ನಿನ್ನೆ ಗುಂಡಿನ ದಾಳಿ ನಡೆದಿದ್ದು, ಅವರು ಸ್ವಲ್ಪದರಲ್ಲಿ ಅಪಾಯದಿಂದ ಪಾರಾಗಿದ್ದಾರೆ. ಘಟನೆ ಸಂಬಂಧ ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ದಾಳಿಗೆ ನಿಖರ ಕಾರಣ ತಿಳಿದುಬಂದಿಲ್ಲ.
ಚಂದ್ರಶೇಖರ್ ಆಜಾದ್ ಬುಧವಾರ ಸಂಜೆ ಖಾಸಗಿ ಕಾರ್ಯಕ್ರಮ ಮುಗಿಸಿಕೊಂಡು ಸಹೋದರ ಹಾಗೂ ಇತರ ಮೂವರ ಜತೆ ಕಾರಿನಲ್ಲಿ ಹೋಗುತ್ತಿರುವಾಗ ಉತ್ತರಪ್ರದೇಶದ ಸಹರನ್‌ಪುರ ಜಿಲ್ಲೆಯಲ್ಲಿ ಕಾರಿನಲ್ಲಿ ಬಂದವರು ಗುಂಡಿನ ದಾಳಿ ನಡೆಸಿದ್ದಾರೆ.
ಆಜಾದ್ ಹೊಟ್ಟೆಯ ಭಾಗಕ್ಕೆ ಗುಂಡೇಟು ತಾಗಿ ಗಾಯವಾಗಿದೆ. ಗುಂಡುಗಳು ಕಾರಿನ ಸೀಟುಗಳ ಮೇಲೆ ಬಿದ್ದಿವೆ.
ಕೂಡಲೇ ಆಜಾದ್ ಅವರನ್ನು ಸಹರನ್‌ಪುರ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗಿದೆ. ನಾಲ್ಕರಿಂದ ಐದು ಮಂದಿ ದಾಳಿ ವೇಳೆ ಇದ್ದರು ಎನ್ನುವ ಮಾಹಿತಿ ಇದ್ದು ತಂಡಗಳನ್ನು ರಚಿಸಲಾಗಿದೆ ಎಂದು ಹಿರಿಯ ಅಧಿಕಾರಿ ತಿಳಿಸಿದ್ದಾರೆ.







































