ಕೊನೆಗೂ ಸಿಗದ ಜಲಾಂತರ್ಗಾಮಿ
ಲಂಡನ್ : ಅಟ್ಲಾಂಟಿಕ್ ಮಹಾಸಾಗರದಲ್ಲಿ ಮುಳುಗಿದ್ದ ಟೈಟಾನಿಕ್ ಹಡಗಿನ ಅವಶೇಷಗಳನ್ನು ನೋಡಲು ಕಿರು ಜಲಾಂತರ್ಗಾಮಿ ನೌಕೆಯಲ್ಲಿ ತೆರಳಿದ್ದ ಐವರು ಪ್ರವಾಸಿಗರು ಮೃತಪಟ್ಟಿದ್ದಾರೆ. ಓರ್ವ ಪೈಲಟ್, ನಾಲ್ವರು ಮಹಾಸಾಗರದಲ್ಲಿ ಜಲ ಸಮಾಧಿಯಾಗಿದ್ದಾರೆ. ಬ್ರಿಟನ್ನ ಹಮೀಶ್ ಹಾರ್ಡಿಂಗ್, ಸ್ಟೋಕ್ಟನ್ ರಶ್, ಪಾಲ್ ಹೆನ್ರಿ, ಪಾಕಿಸ್ಥಾನದ ಉದ್ಯಮಿ ಶಹಜಾದ್ ದಾವೂದ್ ಹಾಗೂ ಪುತ್ರ ಸುಲೇಮಾನ್ ಮೃತಪಟ್ಟಿದ್ದಾರೆ ಎಂದು ಘೋಷಿಸಲಾಗಿದೆ.
ಕಳೆದ 3-4 ದಿನಗಳಿಂದ ಅಮೆರಿಕ ಹಾಗೂ ಕೆನಡಾ ಕರಾವಳಿಯಲ್ಲಿ ನಡೆಯುತ್ತಿರುವ ಕಾರ್ಯಾಚರಣೆ ಫಲ ಕೊಡಲಿಲ್ಲ, ಕೆನಡದ ನ್ಯೂಫೌಂಡ್ಲ್ಯಾಂಡ್ ಕರಾವಳಿಯ ಭಾಗದಿಂದ 400 ಮೈಲಿ ದೂರದಲ್ಲಿ ಹಡಗು ಟೈಟಾನಿಕ್ನ ಅವಶೇಷಗಳು ಬಿದ್ದಿವೆ. ಇಲ್ಲಿನ ಅವಶೇಷಗಳನ್ನು ನೋಡಲು ಹೋಗಿದ್ದವರು ಮೃತಪಟ್ಟಿದ್ದಾರೆ.
ಅಮೆರಿಕ ನೌಕಾಪಡೆಯ ಸಿಬ್ಬಂದಿಗೆ ನಾಪತ್ತೆಯಾಗಿರುವ ಜಲಾಂತರ್ಗಾಮಿಯ ಅವಶೇಷಗಳು ಕಾಣಿಸಿವೆ ಎನ್ನುವ ಮಾಹಿತಿ ಲಭ್ಯವಾಗಿದೆ. ಜಲಾಂತರ್ಗಾಮಿಯಲ್ಲಿ ಆಮ್ಲಜನಕ ಖಾಲಿಯಾಗಿ ಅದರಲ್ಲಿದ್ದ ಐವರು ಸಮುದ್ರದಾಳದಲ್ಲೇ ಸಾವನ್ನಪ್ಪಿದ್ದಾರೆ. ಜಲಾಂತ್ಗಾಮಿಯಲ್ಲಿ ಉಸಿರಾಡಲು ಗುರುವಾರ ಸಂಜೆ 7 ಗಂಟೆಯವರೆಗೆ ಸಾಕಾಗುವಷ್ಟು ಮಾತ್ರ ಆಮ್ಲಜನಕವಿತ್ತು.
ಕೆನಡಾದ ನ್ಯೂಫೌಂಡ್ಲ್ಯಾಂಡ್ನ ಕರಾವಳಿಯಿಂದ 400 ಮೈಲಿ ದೂರದಲ್ಲಿ ಟೈಟಾನಿಕ್ ಹಡಗುಗಳ ಅವಶೇಷಗಳಿವೆ. 100 ವರ್ಷಕ್ಕೂ ಹೆಚ್ಚು ಕಾಲದಿಂದ ಸಮುದ್ರದ 12,600 ಅಡಿ ಆಳದಲ್ಲಿ ಟೈಟಾನಿಕ್ ಅವಶೇಷಗಳಿವೆ. 1912ರ ಏಪ್ರಿಲ್ 14ರಂದು ಬೃಹತ್ ಟೈಟಾನಿಕ್ ಹಡಗು ಅಪಘಾತಕ್ಕೀಡಾಗಿತ್ತು, 1,500ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದರು.ಈ ಹಡಗಿನ ಅವಶೇಷವನ್ನು ನೋಡುವುದು ಪ್ರವಾಸೋದ್ಯಮವಾಗಿ ಬದಲಾಗಿತ್ತು. ಒಬ್ಬ ಪ್ರವಾಸಿಗ ಸುಮಾರು 2 ಕೋ. ರೂ. ತೆತ್ತು ವಿಶೇಷ ಕಿರು ಜಲಾಂತರ್ಗಾಮಿ ನೌಕೆಯಲ್ಲಿ ಹೋಗಿ ನೋಡಿ ಬರಬಹುದು. ಇದು ಕೆಲವೇ ಗಮಟೆಗಳ ಪ್ರವಾಸ. ಹೀಗೆ ಹೋದ ಜಲಾಂತರ್ಗಾಮಿ ಸಂಪರ್ಕ ಕಳೆದುಕೊಂಡು ನಾಪತ್ತೆಯಾಗಿದೆ.





































