ರಾಜ್ಯಪಾಲರ ವಿರುದ್ಧವೂ ಅವಹೇಳನಕಾರಿಯಾಗಿ ಮಾತನಾಡಿದ್ದ ನಾಯಕ
ಚೆನ್ನೈ: ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಹಾಗೂ ಬಿಜೆಪಿ ನಾಯಕಿ ಖುಷ್ಬೂ ಮತ್ತು ತಮಿಳುನಾಡು ರಾಜ್ಯಪಾಲ ಆರ್.ಎನ್. ರವಿ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಸಂಬಂಧ ಕೇಸ್ ದಾಖಲಾದ ನಂತರ ಡಿಎಂಕೆ ಮಾಜಿ ವಕ್ತಾರ ಶಿವಾಜಿ ಕೃಷ್ಣಮೂರ್ತಿ ಅವರನ್ನು ಪಕ್ಷದಿಂದ ಉಚ್ಛಾಟಿಸಿದ ಬೆನ್ನಲ್ಲೆ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಕೃಷ್ಣಮೂರ್ತಿ ಅವರ ವಿವಾದಾತ್ಮಕ ಹೇಳಿಕೆ ವ್ಯಾಪಕ ಟೀಕೆಗಳಿಗೆ ಗುರಿಗಳಿಗೆ ಗುರಿಯಾಗಿತ್ತು. ಕೀಳುಮಟ್ಟದ ಹೇಳಿಕೆ ನೀಡಿರುವುದು ದೃಢಪಟ್ಟ ನಂತರ ಅವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗಿದೆ. ಖುಷ್ಬೂ ಬಗ್ಗೆ ಟೀಕೆ ಮಾಡಿದ ಆರೋಪದ ಮೇಲೆ ಕೃಷ್ಣಮೂರ್ತಿಯನ್ನು ಪಕ್ಷದಿಂದ ಹೊರಹಾಕಲಾಗಿದೆ.
ರಾಜ್ಯಪಾಲ ರವಿ ಅವರನ್ನು ಅವಹೇಳನ ಮಾಡಿರುವ ವಿಡಿಯೋವನ್ನು ಟ್ವೀಟರ್‌ನಲ್ಲಿ ಹಂಚಿಕೊಂಡಿದ್ದ ಬಿಜೆಪಿಯ ಅಮರ್ ಪ್ರಸಾದ್ ರೆಡ್ಡಿ, ಪೊಲೀಸರಿಗೆ ಡಿಎಂಕೆ ವಕ್ತಾರರ ವಿರುದ್ಧ ದೂರು ನೀಡಿದ್ದರು. ಇದಾದ ಕೆಲ ಗಂಟೆಗಳ ನಂತರ ಟ್ವೀಟ್ ಮಾಡಿ, ಸುದ್ದಿಗೋಷ್ಠಿ ನಡೆಸಿದ ಖುಷ್ಬೂ ಕಣ್ಣೀರು ಸುರಿಸಿದ್ದರು.
ಮಹಿಳೆಯರನ್ನು ನಿಂದಿಸುವುದು, ಅವರ ಬಗ್ಗೆ ಅಸಭ್ಯವಾದ ಹೇಳಿಕೆ ನೀಡುವುದು ಡಿಎಂಕೆ ನಾಯಕರ ಚಾಳಿಯಾಗಿದೆ. ಇಂತಹ ಗೂಂಡಾಗಳಿಗೆ ಡಿಎಂಕೆ ಸುರಕ್ಷಿತ ತಾಣವಾಗಿದೆ. ಇದು ನಾಚಿಕೆಗೇಡಿನ ಸಂಗತಿ ಎಂದು ಮುಖ್ಯಮಂತ್ರಿ ಸ್ಟಾಲಿನ್‌ಗೆ ತಮ್ಮ ಟ್ವೀಟ್ ಖುಷ್ಬೂ ಟ್ಯಾಗ್ ಮಾಡಿದ್ದರು.
























