ನಳಿನ್‌ ಕುಮಾರ್‌ ಕಟೀಲ್‌ ಮನೆಯಲ್ಲಿ ರಹಸ್ಯವಾಗಿ ನಡೆಯುತ್ತಿದೆ ಭಾರಿ ಹೋಮ

ಆರು ದಿನಗಳಿಂದ ನಡೆಯುತ್ತಿರುವ ಧಾರ್ಮಿಕ ಕಾರ್ಯ; 18ಕ್ಕೆ ಪೂರ್ಣಾಹುತಿ

ಮಂಗಳೂರು : ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ರಹಸ್ಯವಾಗಿ ದೊಡ್ಡ ಹೋಮವೊಂದನ್ನು ನಡೆಸುತ್ತಿದ್ದಾರೆ. ಹೋಮದ ವಿಚಾರವನ್ನು ಬಹಳ ಗೌಪ್ಯವಾಗಿಟ್ಟದ್ದರೂ ಮಾಹಿತಿ ಮಾಧ್ಯಮಗಳಿಗೆ ಸೋರಿಕೆಯಾಗಿದೆ. ನಳಿನ್‌ ಕುಮಾರ್‌ ಕಟೀಲ್‌ ಅವರ ಮೂಲ ಊರಾದ ಪುತ್ತೂರು ಸಮೀಪದ ಸವಣೂರಿನಲ್ಲಿರುವ ಬಂಗಲೆಯಲ್ಲಿ ವಿಶೇಷ ಹೋಮ ನಡೆಯುತ್ತಿದೆ. 9 ದಿನಗಳ ಕಾಲ ಈ ವಿಶಿಷ್ಟ ಹವನ ನಡೆಯಲಿದ್ದು, ಜೂ.11ರಂದು ಪ್ರಾರಂಭವಾಗಿದೆ. ಜೂ.18ರಂದು ಸಮಾಪ್ತಿಯಾಗಲಿದೆ ತಿಳಿದು ಬಂದಿದೆ.
ಈ ಹೋಮದ ನೇತೃತ್ವವನ್ನು ವಿದ್ವಾನ್ ಬಾಲಕೃಷ್ಣ ಕಾರಂತ್ ವಹಿಸಿದ್ದು, ಅತ್ಯಂತ ಗೌಪ್ಯವಾಗಿ ಈ ಹವನವನ್ನು ನಡೆಸಲಾಗುತ್ತಿದೆ. ಯಾವ ಉದ್ದೇಶ ಪ್ರಾಪ್ತಿಗಾಗಿ ಈ ಹೋಮ ನಡೆಸಲಾಗುತ್ತಿದೆ ಎಂಬ ವಿಚಾರವನ್ನು ಗುಟ್ಟಾಗಿ ಇಡಲಾಗಿದೆ. ಒಳಗೆ ನಡೆಸಲಾಗುತ್ತಿರುವ ಧಾರ್ಮಿಕ ಕಾರ್ಯಕ್ರಮದ ವಿವರ ಹೊರ ಹೋಗಬಾರದೆಂಬ ಉದ್ದೇಶದಿಂದ ಜಮೀನಿನ ದ್ವಾರಗಳನ್ನು ಸಂಪೂರ್ಣವಾಗಿ ಮುಚ್ಚಲಾಗಿದೆ. ಇದು ಸ್ಥಳೀಯರ ತೀವ್ರ ಕುತೂಹಲಕ್ಕೆ ಕಾರಣವಾಗಿ ಮಾಹಿತಿ ಸೋರಿಕೆಯಾಗಿದೆ. ಧಾರ್ಮಿಕ ಕಾರ್ಯಕ್ರಮಗಳು ನಡೆಯುವಾಗ ಅಕ್ಕಪಕ್ಕದ ಮನೆಯವರಿಗೆ ಹಾಗೂ ನೆಂಟರಿಷ್ಟರಿಗೆ ಹೇಳಿ ಮಾಡುವುದು ವಾಡಿಕೆ. ಬಚ್ಚಿಟ್ಟು ಮಾಡುತ್ತಿರುವುದು ಯಾವ ಹೋಮಎನ್ನುವುದು ಕುತೂಹಲ ಕೆರಳಿಸಿದೆ.
ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಹೀನಾಯ ಸೋಲು ಕಂಡಿದ್ದು, ಪಕ್ಷದ ಪ್ರಮುಖ ನಾಯಕರುಗಳ ತಪ್ಪುಗಳು, ಎಡವಟ್ಟು ನಿರ್ಣಯಗಳು, ಅಹಂಕಾರ ಪ್ರವೃತ್ತಿ ಸೋಲಿಗೆ ಕಾರಣವೆಂಬ ಆಕ್ರೋಶ ಪಕ್ಷದ ಕಾರ್ಯಕರ್ತರಲ್ಲಿದೆ. ಪಕ್ಷದ ನಾಯಕತ್ವದಲ್ಲಿ ಮೂಲದಿಂದ ಪರಿವರ್ತನೆ ಮಾಡುವ ಮೂಲಕ ಪಕ್ಷವನ್ನು ಲೋಕಸಭೆ ಚುನಾವಣೆಗೆ ಸಿದ್ದಗೊಳಿಸಬೇಕು ಎಂಬ ಅಗ್ರಹ ಕಾರ್ಯಕರ್ತರ ವಲಯದಿಂದ ಕೇಳಿ ಬರುತ್ತಿದೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಕೂಡ ನಡೆಯುತ್ತಿದೆ. ಬಿಜೆಪಿ ರಾಜ್ಯಾಧ್ಯಕ್ಷರು ಕೂಡ ಬದಲಾಗುತ್ತಾರೆ ಏನ್ನುವ ವದಂತಿ ಹರಡಿದೆ. ಮಾತ್ರವಲ್ಲ ಲೋಕಸಭಾ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಕ್ಷೇತ್ರದಿಂದ ನಳಿನ್ ಕುಮಾರ್ ಕಟೀಲ್‌ಗೆ ಟಿಕೆಟ್‌ ಸಿಗುವುದು ಕೂಡ ಅನುಮಾನ ಎನ್ನಲಾಗುತ್ತಿದೆ. ಅವರಿಗೆ ಟಿಕೆಟ್‌ ಕೊಡಬಾರದು, ಅಭ್ಯರ್ಥಿ ಬದಲಾಗಬೇಕು ಎನ್ನುವ ಆಗ್ರಹ ಕೂಡ ಕೇಳಿ ಬರುತ್ತಿದೆ. ಈ ಹಿನ್ನೆಲೆಯಲ್ಲಿ ನಳಿನ್ ಕುಮಾರ್ ಕಟೀಲ್ ತಮ್ಮ ರಾಜಕೀಯ ಯಶಸ್ಸಿಗಾಗಿ ದೇವರ ಮೊರೆ ಹೋಗಿದ್ದು, ತಮ್ಮ ನಿವಾಸದಲ್ಲಿ ಹೋಮ-ಹವನ ನಡೆಸುತ್ತಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ.































































error: Content is protected !!
Scroll to Top