ಮಸ್ಕತ್‌ನಲ್ಲಿದ್ದುಕೊಂಡೇ ವ್ಯವಹಾರ ನಡೆಸಿದ ಇಮ್ರಾನ್ ಖಾನ್
ಉಡುಪಿ : ಗಾಂಜಾ ವ್ಯವಹಾರಕ್ಕೆ ಸಂಬಂಧಿಸಿದಂತೆ ಕಾರ್ಕಳದ ಮೂವರನ್ನು ಜೂ. 14ರಂದು ಮಣಿಪಾಲ ಪೊಲೀಸರು ಬಂಧಿಸಿದ್ದಾರೆ. ಹೆರ್ಗಾ ಗ್ರಾಮದ ಹೈ-ಪಾಯಿಂಟ್ ಹೈಟ್ಸ್ ಅಪಾರ್ಟ್ಮೆಂಟ್ ಮೇಲೆ ದಾಳಿ ಮಾಡಿದ ಪೊಲೀಸರು ಅಪಾರ್ಟ್ಮೆಂಟ್‌ನಲ್ಲಿ ವಾಸವಾಗಿದ್ದ ಮಣಿಪಾಲದ ಎಂ.ಐ.ಟಿ. ವಿದ್ಯಾರ್ಥಿ ಕಾರ್ಕಳದ ಶಶಾಂಕ (25) ಹಾಗೂ ಆತನ ಜೊತೆಯಿದ್ದ ಕಾರ್ಕಳದ ಆದಿಲ್ (36)ನನ್ನು ವಶಕ್ಕೆ ಪಡೆದಿದ್ದಾರೆ. ಈ ವೇಳೆ ಸುಮಾರು 300 ಗ್ರಾಂ. ಗಾಂಜಾ ವಶಕ್ಕೆ ಪಡೆಯಲಾಗಿದೆ. ಆದಿಲ್ ನೀಡಿದ ಮಾಹಿತಿಯಂತೆ ನೌಶದ್(27) ಎಂಬಾತನನ್ನು ವಶಕ್ಕೆ ಪಡೆದು ಆತನಿಂದ ಸುಮಾರು 1 ಕೆಜಿ 100 ಗ್ರಾಂ.ನಷ್ಟು ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ. ಒಟ್ಟು 75 ಸಾವಿರ ರೂ. ಮೌಲ್ಯದ 1.5 ಕೆ.ಜಿ. ಗಾಂಜಾ ಅವರ ಬಳಿಯಿತ್ತು.
ಮಸ್ಕತ್‌ನಲ್ಲಿದ್ದುಕೊಂಡು ವ್ಯವಹಾರ
ಆದಿಲ್ ಮತ್ತು ನೌಶದ್ ಎಂಬ ಗಾಂಜಾ ಪೆಡ್ಲರ್‌ಗಳು ಆತನ ಸ್ನೇಹಿತ ಓಮನ್‌ನಲ್ಲಿರುವ ಮೂಲತಃ ಕಾರ್ಕಳದ ಇಮ್ರಾನ್ ಖಾನ್ ಯಾನೆ ಶಕೀಲ್ ಎಂಬುವವನು ಗಾಂಜಾ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದ. ಈತನು ಕಾಸರಗೋಡಿನ ಉಪ್ಪಳದಲ್ಲಿ ಗಾಂಜಾ ಮಾರಾಟಕ್ಕೆ ಬೇಕಾದ ವ್ಯವಸ್ಥೆ ಮಾಡುತ್ತಿದ್ದನು.
ಪ್ರಕರಣದ ಮುಖ್ಯ ಆರೋಪಿ ಇಮ್ರಾನ್ ಖಾನ್ ನ ಪತ್ತೆಗೆ ಉಡುಪಿ ಎಸ್.ಪಿ. ಮತ್ತು ಮಣಿಪಾಲ ಪೊಲೀಸ್ ನಿರೀಕ್ಷಕರ ನೇತೃತ್ವದಲ್ಲಿ ತಂಡ ರಚಿಸಿ ಆತನ ವಿರುದ್ಧ ಲುಕ್ ಔಟ್ ನೋಟೀಸ್ (ಎಲ್‌ಓಸಿ) ಹೊರಡಿಸಿರುತ್ತಾರೆ. ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹಾಕೆ ಅಕ್ಷಯ್ ಮಚ್ಚಿಂದ್ರ ಅವರ ಮಾರ್ಗದರ್ಶನದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸಿದ್ಧಲಿಂಗಪ್ಪ ಮತ್ತು ಅವರ ತಂಡದವರಾದ ಉಡುಪಿ ಡಿ.ವೈ.ಎಸ್.ಪಿ. ದಿನಕರ ಕೆ.ಪಿ., ಮಣಿಪಾಲ ಪೊಲೀಸ್ ನಿರೀಕ್ಷಕ ದೇವರಾಜ ಟಿ.ವಿ., ಸಿಬ್ಬಂದಿ ಎ.ಎಸ್.ಐ ಶೈಲೇಶ್ ಕುಮಾರ್, ಹೆಚ್.ಸಿ. ಸುಕುಮಾರ್ ಶೆಟ್ಟಿ, ಹೆಚ್.ಸಿ. ಅಬ್ದುಲ್ ರಜಾಕ್, ಹೆಚ್.ಸಿ. ಇಮ್ರಾನ್ , ಪಿ.ಸಿ. ಚೆನ್ನೇಶ್ , ಪಿ.ಸಿ. ಆನಂದಯ್ಯ ಕಾರ್ಯಾಚರಣೆಯಲ್ಲಿದ್ದರು.




































