ಒಂದು ದಿನಕ್ಕೆ ಸೀಮಿತವಾಗದಿರಲಿ ಪರಿಸರ ಕಾಳಜಿ
ವಿಶೇಷ ವರದಿ
ಕಾರ್ಕಳ : ಪರಿಸರ ರಕ್ಷಣೆ, ಸಂರಕ್ಷಣೆ ಕುರಿತು ಜೂ. 5ರಂದು ಎಲ್ಲೆಡೆ ಭಾಷಣ, ಘೋಷಣೆ ಕೇಳಿಬರುತ್ತಿದೆ. ಪ್ರತಿ ವರ್ಷವೂ ವಿಶ್ವ ಪರಿಸರ ದಿನದಂದು ಪರಿಸರದ ಮಹತ್ವ ಅರಿಯುವ, ಪರಿಸರಕ್ಕಾಗುವ ಹಾನಿ ಕುರಿತು ತಿಳಿಸಿಕೊಡುವ ಕಾರ್ಯ ಮಾಡಲಾಗುತ್ತಿದೆ. ಆದರೆ, ವಾಸ್ತವ ಸಂಗತಿಯೇ ಬೇರೆ.

ಪರಿಸರದ ಕುರಿತಾದ ವಿಶೇಷ ಕಾಳಜಿ, ಪ್ರೀತಿ ಒಂದೇ ದಿನಕ್ಕೆ ಸೀಮಿತವಾಗಿ ಗೋಚರಿಸುತ್ತಿದೆ. ಪ್ರತಿಯೊಬ್ಬ ನಾಗರಿಕನೂ ಸ್ವಯಂ ಪ್ರೇರಣೆಯಿಂದ ಪರಿಸರ ಸ್ವಚ್ಛವಾಗಿಟ್ಟುಕೊಳ್ಳುವ ದೃಢ ಸಂಕಲ್ಪ ಹೊಂದದೇ ಇದ್ದಲ್ಲಿ ಪರಿಸರ ಸ್ವಚ್ಛತೆಯಂತು ಕನಸಿನ ಮಾತೇ ಸರಿ.
ಸ್ವಚ್ಛತೆ ಕಾಯ್ದುಕೊಳ್ಳದ ಹೊರತು ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯವಿಲ್ಲ. ಉತ್ತಮ ಪರಿಸರವಿದ್ದಲ್ಲಿ ಮಾತ್ರ ಆರೋಗ್ಯಕರ ಜೀವನ ನಡೆಸಬಹುದಾಗಿದೆ. ಪ್ರತಿಯೋರ್ವರು ತಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಂಡಲ್ಲಿ ಇಡೀ ದೇಶವೇ ಸುಂದರವಾಗಿರಲಿದೆ. ಎಲ್ಲೆಂದರಲ್ಲಿ ಕಸ, ಪ್ಲಾಸ್ಟಿಕ್, ತ್ಯಾಜ್ಯ ಸುರಿಯದೇ ಇದ್ದಲ್ಲಿ ಕಸ ಹೆಕ್ಕುವ ಪ್ರಮೇಯವೂ ಇರುವುದಿಲ್ಲ.
ದಂಡದ ಹೊರತು ಸ್ವಚ್ಛತೆ ಅಸಾಧ್ಯ
ಸಿಕ್ಕ ಸಿಕ್ಕಲ್ಲಿ ಕಸ ಬಿಸಾಡುವ, ತ್ಯಾಜ್ಯ ಸುರಿಯುವ ಅಪ್ಪಟ ಅನಾಗರಿಕರಂತೆ ವರ್ತಿಸುವವರ ಮೇಲೆ ದಂಡ ಹಾಕದ ಹೊರತು ಪರಿಸರವನ್ನು ಸ್ವಚ್ಛವಾಗಿಡುವುದು ಅಸಾಧ್ಯದ ಮಾತು. ಕೇವಲ ಜಾಗೃತಿ ಮೂಡಿಸಿದಲ್ಲಿ ಪರಿಣಾಮವಾಗದು. ಪಂಚಾಯತ್ ವ್ಯಾಪ್ತಿಯಲ್ಲಿ ಪಿಡಿಒಗಳು, ಪುರಸಭೆ ವ್ಯಾಪ್ತಿಯಲ್ಲಿ ಮುಖ್ಯಾಧಿಕಾರಿ, ಪರಿಸರ ಅಭಿಯಂತರರು, ಆರೋಗ್ಯ ನಿರೀಕ್ಷಕರು ದಂಡ ವಿಧಿಸುವ ಅಧಿಕಾರ ಹೊಂದಿದ್ದು, ಪರಿಸರ ಸ್ವಚ್ಛವಾಗಿಟ್ಟುಕೊಳ್ಳದವರ ವಿರುದ್ಧ ದೊಡ್ಡ ಮೊತ್ತದ ದಂಡವೇ ವಿಧಿಸಬೇಕಾಗಿದೆ. ಪೊಲೀಸರು ಇಂತವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕೇಸ್ ಜಡಿಯಬೇಕಾಗಿದೆ. ಈ ಮೂಲಕ ಸ್ವಚ್ಛತೆಯ ಪಾಠ ತಿಳಿಸಿಕೊಡುವ ಕೆಲಸವಾಗಬೇಕಿದೆ. ಅನುಮತಿ ರಹಿತವಾಗಿ ಎಲ್ಲೆಂದರಲ್ಲಿ ರಾರಾಜಿಸುವ ಬ್ಯಾನರ್‌ಗಳನ್ನು ತೆರವುಗೊಳಿಸುವ ಕಾರ್ಯವೂ ನೆಡೆಯಬೇಕಿದೆ.
ಸ್ವಚ್ಛ ಬ್ರಿಗೇಡ್ ಕಾರ್ಕಳ ತಂಡದ ಅನನ್ಯ ಕಾರ್ಯ
ಕಾರ್ಕಳ ನಗರವನ್ನು ಸ್ವಚ್ಛವಾಗಿಟ್ಟುಕೊಳ್ಳುವಲ್ಲಿ ಸ್ವಚ್ಛ ಬ್ರಿಗೇಡ್ ಕಾರ್ಯ ಅನನ್ಯವಾದುದು. ಕಳೆದ 4 ವರ್ಷಗಳಿಂದ ಸ್ವಚ್ಛ ಬ್ರಿಗೇಡ್ ತಂಡ ಪ್ರತಿ ಭಾನುವಾರ ಬೆಳಿಗ್ಗೆ 6ಗಂಟೆಯಿಂದ 8 ಗಂಟೆಯ ತನಕ ಸ್ವಚ್ಛತಾ ಕೈಂಕರ್ಯದಲ್ಲಿ ತೊಡಗಿಸಿಕೊಂಡು ಸಂಘಗಳಿಗೆ ಮೇಲ್ಪಂಕ್ತಿ ಹಾಕಿಕೊಟ್ಟಿದೆ. ಈ ಒಂದು ಅಭಿಯಾನದಲ್ಲಿ ಸುಮಾರು ಸರಾಸರಿ 70 ಮಂದಿ ಸದಸ್ಯರು ಸೇವೆ ಸಲ್ಲಿಸುತ್ತಿದ್ದು, ಸ್ಥಳೀಯರೂ ಕೈಜೋಡಿಸಿಕೊಳ್ಳುತ್ತಿದ್ದಾರೆ. ರಸ್ತೆ ಬದಿ, ಧಾರ್ಮಿಕ ಕೇಂದ್ರಗಳು, ಕೆರೆ, ನದಿಮೂಲ, ಚರಂಡಿ ಸ್ವಚ್ಛಗೊಳಿಸುವ ಕಾರ್ಯ ಮಾತ್ರವಲ್ಲದೇ ಸಾಮಾಜಿಕ ಕಾರ್ಯಗಳಲ್ಲಿ ಸಕ್ರಿಯವಾಗಿದ್ದು ಸಮಾಜಕ್ಕೆ ತನ್ನನ್ನು ಅರ್ಪಿಸಿಕೊಂಡಿದೆ. ಇವರೊಂದಿಗೆ ಎಲ್ಲರಿಗೂ ಕೈಜೋಡಿಕೊಳ್ಳಲು ಸಾಧ್ಯವಾಗದೇ ಇದ್ದರೂ ಇವರ ಪರಿಸರ ಪ್ರೇಮ ಒಂದಷ್ಟು ಮಂದಿಗೆ ಸ್ಪೂರ್ತಿ, ಪ್ರೇರಣಾದಾಯಕ.
ಈಡೇರಲಿ ಸ್ವಚ್ಛ ಕಾರ್ಕಳ ಕನಸು
ಕ್ಷೇತ್ರದ ಶಾಸಕ ವಿ. ಸುನಿಲ್ ಕುಮಾರ್ ಅವರು ಸ್ವಚ್ಛ ಕಾರ್ಕಳ – ಸ್ವರ್ಣ ಕಾರ್ಕಳ ಎಂಬುದನ್ನೇ ಧ್ಯೇಯವಾಗಿಟ್ಟುಕೊಂಡು ಕಾರ್ಯನಿರ್ವಹಿಸುತ್ತಿದ್ದಾರೆ. ಸ್ವಚ್ಛತೆಗೆ ವಿಶೇಷ ಆದ್ಯತೆ ನೀಡುವ ಅವರ ಕಾರ್ಯ ಸಫಲಗೊಳ್ಳಬೇಕಾದರೆ ಅಧಿಕಾರಿಗಳು ಎಚ್ಚೆತ್ತುಕೊಂಡು ಕರ್ತವ್ಯ ಬದ್ಧತೆ ತೋರುವುದು ಅಗತ್ಯ.
ಪರಿಸರ ರಕ್ಷಣೆ ಮೂಲಕ ಜನತೆ ದೇಶ ಭಕ್ತಿ ಮೆರೆಯಬೇಕು. ಪರಿಸರದ ಕುರಿತು ನಿರಂತರವಾಗಿ ಶಾಲಾ, ಕಾಲೇಜು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಕಾರ್ಯವಾಗಬೇಕು. ಸಾರ್ವಜನಿಕರು ಕಸವನ್ನು ಎಸ್‌ಎಲ್‌ಆರ್‌ಎಂ ಘಟಕಕ್ಕೆ ನೀಡಬೇಕು. ಈ ನಿಟ್ಟಿನಲ್ಲಿ ನಮ್ಮ ಸಿಬ್ಬಂದಿ ಮನೆ ಮನೆಗೆ ತೆರಳಿ ಕಸ ಸಂಗ್ರಹಿಸುತ್ತಾರೆ.
ಗುರುದತ್ ಎಂ.ಎನ್.
ಇಒ, ತಾಲೂಕು ಪಂಚಾಯತ್
ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ. ಪುರಸಭಾ ವ್ಯಾಪ್ತಿಯಲ್ಲಿ ಸ್ವಚ್ಛತೆಗೆ ವಿಶೇಷ ಆದ್ಯತೆ ನೀಡಲಾಗುವುದು. ಕಂಡ ಕಂಡಲ್ಲಿ ಕಸ ಹಾಕುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು.
ರೂಪಾ ಟಿ. ಶೆಟ್ಟಿ
ಮುಖ್ಯಾಧಿಕಾರಿ, ಪುರಸಭೆ ಕಾರ್ಕಳ




































