ಕಾರ್ಕಳ ಕಂದಾಯ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ

ಕಾರ್ಕಳ : ಸರಕಾರಿ ಇಲಾಖೆಗಳಲ್ಲಿ ಕಂದಾಯ ಇಲಾಖೆಯೇ ಪ್ರಮುಖವಾದುದು. ಪ್ರತಿಯೋರ್ವರೂ ಒಂದಲ್ಲ ಒಂದು ಕಾರಣಕ್ಕಾಗಿ ಕಂದಾಯ ಇಲಾಖೆಯನ್ನು ಅವಲಂಬಿಸಬೇಕಿದೆ. ಜನನ ಪ್ರಮಾಣ ಪತ್ರ, ಜಾತಿ ಆದಾಯ ಪ್ರಮಾಣ ಪತ್ರ, ಸಂಧ್ಯಾ ಸುರಕ್ಷಾ, ವೃದ್ಧಾಪ್ಯ ವೇತನ, ವಿಕಲಚೇತನ, ವಿಧವಾ ವೇತನ, ಮನೆ, ಜಮೀನಿಗೆ ಸಂಬಂಧಪಟ್ಟ ದಾಖಲೆ, ಆಧಾರ್‌ ತಿದ್ದುಪಡಿ, ಮತದಾರರ ಗುರುತಿನ ಚೀಟಿ, ಪಡಿತರ ಚೀಟಿ, ಭೂ ದಾಖಲೆಗಳ ನಕ್ಷೆ, ಮರಣ ಪ್ರಮಾಣ ಪತ್ರ ಹೀಗೆ ಬಹುತೇಕ ಕಾರ್ಯಗಳಿಗೂ ಸಾರ್ವಜನಿಕರು ಎಲ್ಲ ಇಲಾಖೆಗಳ ಮಾತೃ ಇಲಾಖೆಯಾಗಿರುವ ಕಂದಾಯ ಇಲಾಖೆಯನ್ನು ಎಡತಾಕಬೇಕು. ಇಂತಹ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಕಂಡುಬಂದಲ್ಲಿ ಸಹಜವಾಗಿ ಜನಸಾಮಾನ್ಯರ ಕೆಲಸ ಕಾರ್ಯಗಳು ವಿಳಂಬವಾಗುವುದು. ಬಾಪೂಜಿ ಸೇವಾ ಕೇಂದ್ರ, ಗ್ರಾಮ ವನ್‌ ಮೂಲಕ ಒಂದಷ್ಟು ಕಂದಾಯ ಇಲಾಖೆಯ ಕಾರ್ಯಗಳು ಆಗುತ್ತಿದ್ದರೂ ಕಂದಾಯ ಇಲಾಖೆಗೆ ಓಡಾಟ ನಡೆಸುವುದು ಅನಿವಾರ್ಯವಾಗಿದೆ.

27 ಗ್ರಾಮ ಪಂಚಾಯತ್‌ ವ್ಯಾಪ್ತಿಯ 38 ಗ್ರಾಮಗಳ ಗ್ರಾಮಸ್ಥರು, ಪುರಸಭಾ ವ್ಯಾಪ್ತಿಯ ಕಸಬಾ ವ್ಯಾಪ್ತಿಯವರು ಕಂದಾಯ ಇಲಾಖೆ ಕೆಲಸ ಕಾರ್ಯಗಳಿಗೆ ಕಾರ್ಕಳ ತಹಶೀಲ್ದಾರ್‌ ಕಚೇರಿಯನ್ನು ಅವಲಂಬಿಸಬೇಕಿದೆ. ಪ್ರಸ್ತುತ ಇಲ್ಲಿ ಸಾಮಾಜಿಕ ಭದ್ರತೆಯ ಪ್ರಥಮ ದರ್ಜೆ ಸಹಾಯಕ ಹುದ್ದೆ, ಚುನಾವಣಾ ಶಾಖಾ ದ್ವಿತೀಯ ದರ್ಜೆ ಸಹಾಯಕ ಹುದ್ದೆ, ಆಹಾರ ಶಾಖೆಯ ಶಿರಸ್ತೇದಾರ (ಡಿಟಿ) ಹಾಗೂ ಆಹಾರ ನಿರೀಕ್ಷಕರ ಹುದ್ದೆ, ದ್ವಿತೀಯ ದರ್ಜೆ ಸಹಾಯಕ ಹುದ್ದೆ ಸೇರಿದಂತೆ, ದಫೆದಾರ್, ಅಟೆಂಡರ್, 4 – ಡಿ ದರ್ಜೆ ಹುದ್ದೆ ಖಾಲಿ ಇದೆ.

9 ಗ್ರಾಮ ಪಂಚಾಯತ್‌ 16 ಗ್ರಾಮಗಳನ್ನು ಒಳಗೊಂಡಂತೆ 2017ರಲ್ಲಿ ಘೋಷಣೆಯಾದ ಹೆಬ್ರಿ ತಾಲೂಕಿಗೆ ನೂತನ ಆಡಳಿತ ಕಚೇರಿ ನಿರ್ಮಾಣಗೊಂಡಿದ್ದಾಗ್ಯೂ ಅಲ್ಲಿ ಪ್ರಸ್ತುತ ದ್ವಿತೀಯ ದರ್ಜೆ ಸಹಾಯಕರ ಹುದ್ದೆ ಖಾಲಿಯಿದೆ. ಅಜೆಕಾರು ಕಂದಾಯ ನಿರೀಕ್ಷಕರು ಹೆಚ್ಚುವರಿಯಾಗಿ ಹೆಬ್ರಿ ಹೋಬಳಿಯ ಪ್ರಭಾರ ನೆಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಾರ್ಕಳದಲ್ಲಿ ಆಧಾರ್‌ ತಿದ್ದುಪಡಿ ಕೇಂದ್ರವಿದ್ದರೂ ಹೆಬ್ರಿಯಲ್ಲಿಲ್ಲ.

ಕಾರ್ಕಳ ತಾಲೂಕಿನ ಒಟ್ಟು ವಿಸ್ತೀರ್ಣ 1091.2 ಚ.ಕಿ.ಮೀ. 4 ಜಿಲ್ಲಾ ಪಂಚಾಯತ್ ಹಾಗೂ 16 ತಾಲೂಕು ಪಂಚಾಯತ್ ಕ್ಷೇತ್ರಗಳು ತಾಲೂಕಿನಲ್ಲಿದೆ. ಹೆಬ್ರಿ ತಾಲೂಕು 896 ಚ.ಕಿ.ಮೀ. ವಿಸ್ತೀರ್ಣ ಹೊಂದಿದ್ದು, 1 ಜಿಲ್ಲಾ ಪಂಚಾಯತ್ ಕ್ಷೇತ್ರ ಸೇರಿದಂತೆ 5 ತಾಲೂಕು ಪಂಚಾಯತ್ ಕ್ಷೇತ್ರಗಳನ್ನು ಹೊಂದಿದೆ.

ಕಂದಾಯ ಇಲಾಖೆಯ ಕೆಲಸ ಕಾರ್ಯಗಳು ನಿಗದಿತ ಅವಧಿಯಲ್ಲಿ ಸುಸೂತ್ರವಾಗಿ ನಡೆಯುವಂತಾಗಲು ಖಾಲಿಯಿರುವ ಹುದ್ದೆಗಳು ಭರ್ತಿಯಾಗಬೇಕು. ಹೊಸ ಸರಕಾರ ಅಗತ್ಯ ಸಿಬ್ಬಂದಿ ನೇಮಕಗೊಳಿಸುವ ಮೂಲಕ ಸಾರ್ವಜನಿಕರ ಅಲೆದಾಟ, ಪರದಾಟವನ್ನು ಕೊನೆಗಾಣಿಸಬೇಕಿದೆ. ಅಣ್ಣಪ್ಪ ಜಿ. ಭಟ್‌ ಕಾರ್ಕಳ

































































error: Content is protected !!
Scroll to Top