ಸವದಿ, ಶೆಟ್ಟರ್‌ಗಿಲ್ಲ ಸಚಿವ ಸ್ಥಾನ

ಕಾಂಗ್ರೆಸ್‌ ಸೇರಿ ಮೂಲೆಗುಂಪಾದ ಪ್ರಭಾವಿ ಲಿಂಗಾಯತ ನಾಯಕರು

ಬೆಂಗಳೂರು: ಮೊದಲ ಹಂತದಲ್ಲಿ ಸಿಎಂ, ಡಿಸಿಎಂ ಜತೆ 8 ಮಂದಿ ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದು, ಇಂದು ಉಳಿದ 24 ಮಂದಿ ಸಚಿವರಾಗುವುದರೊಂದಿಗೆ 34 ಮಂದಿಯ ಮಂತ್ರಿಮಂಡಲ ಪೂರ್ಣಗೊಂಡಿದೆ. ಆದರೆ ಬಿಜೆಪಿ ಟಿಕೆಟ್‌ ಕೊಡಲಿಲ್ಲ ಎಂಬ ಸಿಟ್ಟಿನಲ್ಲಿ ಕಾಂಗ್ರೆಸ್‌ ಸೇರಿರುವ ಲಿಂಗಾಯತ ನಾಯಕರಾಗಿರುವ ಲಕ್ಷ್ಮಣ ಸವದಿ ಮತ್ತು ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ಗೆ ಸರಕಾರದಲ್ಲಿ ಯಾವ ಸ್ಥಾನವೂ ಸಿಕ್ಕಿಲ್ಲ. ಗೆದ್ದ ಸವದಿ ಮತ್ತು ಸೋತ ಶೆಟ್ಟರ್‌ ಇಬ್ಬರನ್ನೂ ಕಾಂಗ್ರೆಸ್‌ ಕಡೆಗಣಿಸಿದೆ.
ಕಾಂಗ್ರೆಸ್‌ ಲಿಂಗಾಯತ ಮತಬ್ಯಾಂಕ್ ಓಲೈಸಲು ಬಿಜೆಪಿ ಜತೆ ಮುನಿಸಿಕೊಂಡಿದ್ದ ಇವರಿಬ್ಬರನ್ನು ರತ್ನಗಂಬಳಿ ಹಾಸಿ ಆತುರದಲ್ಲಿ ಸ್ವಾಗತಿಸಿ ಟಿಕೆಟ್‌ ನೀಡಿತ್ತು. ಇವರಿಂದಾಗಿ ದೊಡ್ಡ ಪ್ರಮಾಣದಲ್ಲಿ ಲಿಂಗಾಯತ ಸಮುದಾಯದ ಮತ ಕಾಂಗ್ರೆಸ್‌ನತ್ತ ವಾಲಿತ್ತು. ಬಿಜೆಪಿ ಲಿಂಗಾಯತರನ್ನು ಬಳಸಿ ಬಿಸಾಕುತ್ತದೆ ಎಂದು ಆರೋಪಿಸಲು ಕಾಂಗ್ರೆಸ್‌ ನಾಯಕರು ಶೆಟ್ಟರ್‌ ಮತ್ತು ಸವದಿಯನ್ನು ಬಳಸಿಕೊಂಡಿದ್ದರು. ಆದರೆ ಕಾಂಗ್ರೆಸ್‌ನಲ್ಲಿ ಕೂಡ ಈ ಇಬ್ಬರು ನಾಯಕರಿಗೆ ಈಗ ಆ ಗತಿಯಾದಂತಾಗಿದೆ.
ಎರಡನೇ ಪಟ್ಟಿಯಲ್ಲಿ ಆರು ಲಿಂಗಾಯತರು, ನಾಲ್ವರು ಒಕ್ಕಲಿಗರು, ಐವರು ಒಬಿಸಿಗಳು, ಮೂರು ಎಸ್‌ಸಿಗಳು, ಇಬ್ಬರು ಎಸ್‌ಟಿಗಳು, ಬ್ರಾಹ್ಮಣ, ಮುಸ್ಲಿಂ, ಜೈನ ಮತ್ತು ರೆಡ್ಡಿ ಸಮುದಾಯದ ತಲಾ ಒಬ್ಬರು ಸಂಪುಟ ಸ್ಥಾನ ಪಡೆದಿದ್ದಾರೆ. ಲಿಂಗಾಯತ ಸಮುದಾಯದ ಎಲ್ಲ ಉಪಜಾತಿಗಳನ್ನು ಪರಿಗಣನೆಗೆ ತೆಗೆದುಕೊಂಡು ಎಂಟು ಕ್ಯಾಬಿನೆಟ್ ಸ್ಥಾನಗಳನ್ನು ನೀಡಲಾಗಿದೆ. ಒಕ್ಕಲಿಗರಿಗೆ ಉಪ ಮುಖ್ಯಮಂತ್ರಿ ಸ್ಥಾನ ಸೇರಿ ಐದು ಪ್ರಾತಿನಿಧ್ಯ ಸಿಕ್ಕಿದೆ. ದಲಿತರಿಗೆ ಒಂಬತ್ತು ಕ್ಯಾಬಿನೆಟ್ ಸ್ಥಾನಗಳು ದೊರೆತಿವೆ. ಎಡ ಮತ್ತು ಬಲ ಉಪಗುಂಪುಗಳಿಗೆ ಸಮಾನ ಪ್ರಾತಿನಿಧ್ಯ ನೀಡಲಾಗಿದೆ. ಎಸ್ಟಿ ಸಮುದಾಯದ ಮೂವರಿಗೆ ಕ್ಯಾಬಿನೆಟ್ ಸ್ಥಾನ ನೀಡಲಾಗಿದೆ. ರಾಜು ಬೋಸರಾಜು ಕ್ಷತ್ರಿಯ ಮತ್ತು ಮಂಕಾಳ ವೈದ್ಯ ಮೀನುಗಾರರಂತಹ ಸಣ್ಣ ಸಮುದಾಯಗಳನ್ನು ಪ್ರತಿನಿಧಿಸುತ್ತಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರು ಕುರುಬ ಸಮುದಾಯದವರಾಗಿರುವುದರಿಂದ ಕುರುಬ ಸಮುದಾಯಕ್ಕೆ ಸುರೇಶ್ ಅವರಿಗೆ ಒಂದು ಸ್ಥಾನ ಮಾತ್ರ ನೀಡಲಾಗಿದೆ. ಮುಸ್ಲಿಂ ಸಮುದಾಯವನ್ನು ಇಬ್ಬರು ಮಂತ್ರಿಗಳು ಬಿ.ಝಡ್. ಜಮೀರ್ ಅಹ್ಮದ್ ಖಾನ್, ರಹೀಮ್ ಖಾನ್ ಪ್ರತಿನಿಧಿಸಿದರೆ, ಯು.ಟಿ. ಖಾದರ್ ಅವರನ್ನು ಸ್ಪೀಕರ್ ಮಾಡಲಾಗಿದೆ. ಕ್ರಿಶ್ಚಿಯನ್ ಕೆ.ಜೆ. ಜಾರ್ಜ್ ಮತ್ತು ಜೈನ ಸಮುದಾಯಗಳಿಗೆ ಡಿ. ಸುಧಾಕರ್ ಒಂದು ಸ್ಥಾನ ನೀಡಲಾಗಿದೆ.































































error: Content is protected !!
Scroll to Top