ಹಿಂದಿನಿಂದ ಡಿಕ್ಕಿ ಹೊಡೆದು ಪಲಾಯನ ಮಾಡಿದ ವಾಹನ
ಕಾರ್ಕಳ : ಪಡುಬಿದ್ರಿ-ಕಾರ್ಕಳ ಹೆದ್ದಾರಿಯಲ್ಲಿ ಮಂಜರಪಲ್ಕೆ ಸಮೀಪ ಕೆದಿಂಜೆ ಬಿ.ಎಸ್.ಕೆ. ಕ್ಯಾಶ್ಯೂ ಫ್ಯಾಕ್ಟರಿ ಬಳಿ ಪಾದಚಾರಿಗಳಿಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದು ಓರ್ವ ಮೃತಪಟ್ಟು, ಇನ್ನೋರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ಗುರುವಾರ ರಾತ್ರಿ ಸಂಭವಿಸಿದೆ.
ರಾತ್ರಿ ಸುಮಾರು 8.40ರ ಹೊತ್ತಿಗೆ ಮೂಲತಃ ಒಡಿಶಾದವರಾದ ಲಕ್ಷ್ಮಣ್ ಮುರ್ಮು, ಘನಶ್ಯಾಮ್ ಮುರ್ಮು ಮತ್ತು ಕರಣ್ ಮುರ್ಮು ಎಂಬವರು ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಕಾರ್ಕಳ ಕಡೆಗೆ ಸಿಕ್ಕಾಪಟ್ಟೆ ವೇಗದಲ್ಲಿ ಹೋಗುತ್ತಿದ್ದ ವಾಹನ ಘನಶ್ಯಾಮ್ ಮತ್ತು ಕರಣ್‌ಗೆ ಹಿಂದಿನಿಂದ ಡಿಕ್ಕಿ ಹೊಡೆದಿದೆ. ಘನಶ್ಯಾಮ್ ಮತ್ತು ಕರಣ್‌ಗೆ ಗಂಭೀರ ಸ್ವರೂಪದ ಗಾಯವಾಗಿ ಪ್ರಜ್ಞೆ ಕಳೆದುಕೊಂಡಿದ್ದರು. ಕಾರ್ಕಳ ಸರಕಾರಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಘನಶ್ಯಾಮ್ ಅವರನ್ನು ಉಡುಪಿ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗುತ್ತಿರುವಾಗ ದಾರಿಮಧ್ಯೆ ಕೊನೆಯುಸಿರೆಳೆದಿದ್ದಾರೆ.
ಡಿಕ್ಕಿ ಹೊಡೆದು ವಾಹನ ನಿಲ್ಲದೆ ಪಲಾಯನ ಮಾಡಿದ್ದು, ಲಕ್ಷಣ್ ಮುರ್ಮು ನೀಡಿದ ದೂರಿನ ಪ್ರಕಾರ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






























