ಗ್ಯಾರಂಟಿ ಯೋಜನೆಗಳನ್ನು ಜನತೆಗೆ ನೀಡದಿದ್ದಲ್ಲಿ ಬಿಜೆಪಿಯಿಂದ ಹೋರಾಟ – ಸುನಿಲ್ ಕುಮಾರ್
ಹೆಬ್ರಿ : ಐದು ಗ್ಯಾರಂಟಿ ಯೋಜನೆಗಳ ಮೂಲಕ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಆ ಭರವಸೆಗಳನ್ನು ಈಡೇರಿಸದೆ ಇದ್ದಲ್ಲಿ ಬಿಜೆಪಿಯಿಂದ ತೀವ್ರ ಸ್ವರೂಪದ ಹೋರಾಟ ನಡೆಯಲಿದೆ ಎಂದು ಶಾಸಕ ವಿ. ಸುನಿಲ್ ಕುಮಾರ್ ತಿಳಿಸಿದರು.
ಅವರು ಮೇ 21 ರಂದು ಹೆಬ್ರಿ ಬಸ್ ನಿಲ್ದಾಣದಲ್ಲಿ ನಡೆದ ಬಿಜೆಪಿ ವಿಜಯೋತ್ಸವ, ಮತದಾರರಿಗೆ ವಂದನೆ ಹಾಗೂ ಕಾರ್ಯಕರ್ತರಿಗೆ ಅಭಿನಂದನೆ ಕಾರ್ಯಕ್ರಮದಲ್ಲಿ ಮಾತನಾಡಿ, ಪ್ರಮಾಣ ವಚನ ಸ್ವೀಕರಿಸಿದ ಮೊದಲ ದಿನವೇ ಕಾಂಗ್ರೆಸ್ ಸರಕಾರ ಜನತೆಗೆ ನೀಡಿದ ಭರವಸೆಯನ್ನು ಅನುಷ್ಠಾನಗೊಳಿಸುವಲ್ಲಿ ಹಿಂಜರಿಯುವ ಲಕ್ಷಣಗಳು ಗೋಚರಿಸಿವೆ ಎಂದು ಹೇಳಿದರು.

ಖಾಸಗಿ ಬಸ್ನಲ್ಲೂ ಉಚಿತ ಪ್ರಯಾಣವಿರಲಿ
ಗ್ಯಾರಂಟಿ ಕಾರ್ಡ್ನಲ್ಲಿ ಮಹಿಳೆಯರಿಗೆ ಸರಕಾರಿ ಬಸ್ನಲ್ಲಿ ಉಚಿತ ಪ್ರಯಾಣ ಎಂದು ಘೋಷಿಸಿದ್ದು, ಇದೀಗ ಕೆಂಪು ಬಣ್ಣದ ಸರಕಾರಿ ಬಸ್ನಲ್ಲಿ ಮಾತ್ರ ಉಚಿತ ಪ್ರಯಾಣ ಎಂದು ಶರತ್ತು ವಿಧಿಸಿದೆ. ಉಡುಪಿ, ದ. ಕ. ಜಿಲ್ಲೆ ಸೇರಿದಂತೆ ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಸರಕಾರಿ ಬಸ್ಗಳ ಓಡಾಟ ಅತಿ ವಿರಳವಿದ್ದು, ಈ ಭಾಗದ ಮಹಿಳೆಯರಿಗೆ ಖಾಸಗಿ ಬಸ್ನಲ್ಲಿ ಉಚಿತ ಪ್ರಯಾಣದ ಅವಕಾಶ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ವಾರದಲ್ಲಿ ಎರಡು ದಿನ ಹೆಬ್ರಿಯಲ್ಲಿ
ವಿರೋಧ ಪಕ್ಷದ ಶಾಸಕನಾಗಿ ಕಾರ್ಕಳ ವಿಧಾನ ಸಭಾ ಕ್ಷೇತ್ರದ ಅಭಿವೃದ್ಧಿಗಾಗಿ ಕೆಲಸ ಮಾಡುವೆ ಎಂದ ಸುನಿಲ್ ಕುಮಾರ್, ವಾರದಲ್ಲಿ 2 ದಿನ ಹೆಬ್ರಿ ತಾಲೂಕು ಕಚೇರಿಗೆ ಭೇಟಿ ನೀಡಲಿದ್ದೇನೆ ಮತ್ತು ಈ ಭಾಗದ ಜನರ ಅಗತ್ಯ ಕೆಲಸ ಹಾಗೂ ಸಮಸ್ಯೆ ಆಲಿಸುವ ಕೆಲಸ ಮಾಡುತ್ತೇನೆ ಎಂದರು.
ಪ್ರಜ್ಞಾವಂತ ಮತದಾರರದ ಆಶೀರ್ವಾದ
ಈ ಬಾರಿಯ ಚುನಾವಣೆ ಅಭಿವೃದ್ದಿ ಮತ್ತು ಸಿದ್ಧಾಂತದ ನಡುವೆ ನಡೆಯಲೇ ಇಲ್ಲ. ಬದಲಾಗಿ, ಅಪಪ್ರಚಾರದ ನಡುವೆ ಈ ಚುನಾವಣೆ ನಡೆದಿದೆ. ಆದರೆ ಪ್ರಜ್ಞಾವಂತ ಮತದಾರರು ಆಶೀರ್ವಾದ ಮಾಡಿದ್ದರಿಂದ ನಾಲ್ಕನೇ ಬಾರಿಗೆ ಶಾಸಕನಾಗಿ ಆಯ್ಕೆಯಾಗಿದ್ದೇನೆ ಎಂದು ಹರ್ಷ ವ್ಯಕ್ತಪಡಿಸಿದರು.
ವಿಜಯೋತ್ಸವ ಮೆರವಣಿಗೆ
ಹೆಬ್ರಿ ಅನಂತ ಪದ್ಮನಾಭ ದೇವಸ್ಥಾನದಿಂದ ಬಸ್ ನಿಲ್ದಾಣದವರೆಗೆ ವಿಜಯೋತ್ಸವ ಮೆರವಣಿಗೆ ನಡೆಯಿತು. ಈ ಸಂದರ್ಭ ಹುತಾತ್ಮ ಯೋಧ ಉದಯ ಪೂಜಾರಿಯವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.
ಕಾರ್ಕಳ ಬಿಜೆಪಿ ಕ್ಷೇತ್ರಾಧ್ಯಕ್ಷ ಮಹಾವೀರ ಹೆಗ್ಡೆ, ಪಕ್ಷದ ಮುಖಂಡರಾದ ಎಂ. ಕೆ. ವಿಜಯ್ ಕುಮಾರ್, ಗುರುದಾಸ್ ಶೆಣೈ, ಹೆಬ್ರಿ ತಾ. ಪಂ. ಮಾಜಿ ಅಧ್ಯಕ್ಷ ರಮೇಶ್ ಕುಮಾರ್ ಶಿವಪುರ, ಶಿವಪುರ ಗ್ರಾ. ಪಂ. ಮಾಜಿ ಅಧ್ಯಕ್ಷ ಸುರೇಶ್ ಶೆಟ್ಟಿ, ಕಾರ್ಕಳ ಎಪಿಎಂಸಿ ಮಾಜಿ ಅಧ್ಯಕ್ಷ ಮುಟ್ಲುಪಾಡಿ ಸತೀಶ್ ಶೆಟ್ಟಿ, ಹೆಬ್ರಿ ಗ್ರಾ. ಪಂ. ಅಧ್ಯಕ್ಷೆ ಮಾಲತಿ, ನಾಡ್ಪಾಲು ಗ್ರಾ. ಪಂ. ಅಧ್ಯಕ್ಷ ದಿನೇಶ್ ಹೆಗ್ಡೆ, ಚಾರ ಗ್ರಾ. ಪಂ. ಅಧ್ಯಕ್ಷೆ ಕುಸುಮಾ ಫ್ರಭು ಉಪಸ್ಥಿತರಿದ್ದರು. ಪ್ರಸನ್ನ ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು.









































