ಮೇ 20 ರಂದು ಪ್ರಮಾಣ ವಚನ ಸ್ವೀಕಾರ
ಕಾರ್ಕಳ : ಕಾಂಗ್ರೆಸ್ ಬಹುಮತ ಗಳಿಕೆಯೊಂದಿಗೆ ಗೆಲುವು ಸಾಧಿಸಿದ್ದರೂ, ಮುಖ್ಯಮಂತ್ರಿ ಆಯ್ಕೆಯ ವಿಚಾರವಾಗಿ ರಾಜ್ಯದಲ್ಲಿ ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು. ಕಳೆದ ನಾಲ್ಕೈದು ದಿನಗಳಿಂದ ರಾಷ್ಟ್ರರಾಜಧಾನಿಯಲ್ಲಿ ಮುಖ್ಯಮಂತ್ರಿ ಹುದ್ದೆ ಆಯ್ಕೆಗಾಗಿ ಬಹಳಷ್ಟು ಹಿರಿಯ ನಾಯಕರೊಂದಿಗೆ ಬಹಳಷ್ಟು ಮಾತುಕತೆ, ಚರ್ಚೆಗಳು ನಡೆದಿದ್ದು, ಕೊನೆಗೂ ಮುಖ್ಯಮಂತ್ರಿ ಆಯ್ಕೆ ಬಿಕ್ಕಟ್ಟನ್ನು ಬಗೆಹರಿಸುವಲ್ಲಿ ಕಾಂಗ್ರೆಸ್ ಹೈಕಮಾಂಡ್ ಯಶಸ್ಸು ಕಂಡಿದೆ.
ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಸಿದ್ದರಾಮಯ್ಯ ಅವರನ್ನು ನೂತನ ಮುಖ್ಯಮಂತ್ರಿಯನ್ನಾಗಿ ಹಾಗೂ ಡಿಕೆ ಶಿವಕುಮಾರ್ ಅವರನ್ನು ಉಪಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಗುರುವಾರ ದೆಹಲಿಯ ಕೆಪಿಸಿಸಿ ಕಚೇರಿಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಹಾಗೂ ರಣದೀಪ್ ಸಿಂಗ್ ಸುರ್ಜೆವಾಲ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಘೋಷಿಸಿದ್ದಾರೆ. ಡಿಕೆ ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷರಾಗಿಯೂ ಮುಂದುವರಿಯಲಿದ್ದಾರೆ. ಮೇ 20ರಂದು ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಈ ಸಂದರ್ಭದಲ್ಲಿ ತಿಳಿಸಿದ್ದಾರೆ.

ಕನ್ನಡಿಗರ ಹಿತ ರಕ್ಷಣೆಗೆ ನಮ್ಮ ಕೈಗಳು ಸದಾ ಒಂದಾಗಿರಲಿದೆ
ಸಿಎಂ ಘೋಷಣೆ ಮುನ್ನ ರಾಜ್ಯದಲ್ಲಿ ಗ್ಯಾರಂಟಿ ಯೋಜನೆಯ ಬಗ್ಗೆ ನಾನಾ ಚರ್ಚೆಗಳು ನಡೆಯುತ್ತಿದ್ದು, ಸಿಎಂ ಗ್ಯಾರಟಿಯೇ ಆಗಿಲ್ಲ. ಈ ಗ್ಯಾರಂಟಿಗಳು ಯಾವಾಗ ಜಾರಿ ಮಾಡುತ್ತಾರೆ ಎನ್ನುವ ವ್ಯಂಗ್ಯದ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಇದೀಗ ಇವುಗಳಿಗೆ ಸಿದ್ದರಾಮಯ್ಯ ಒಂದೇ ಮಾತಿನಲ್ಲಿ ಖಡಕ್ ಆಗಿ ಹೇಳಿದ್ದಾರೆ. ಸಿಎಂ ಘೋಷಣೆ ಬಳಿಕ ಮೊದಲ ಬಾರಿಗೆ ಟ್ವೀಟ್ ಮೂಲಕ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ, ಕನ್ನಡಿಗರ ಹಿತ ರಕ್ಷಣೆಗೆ ನಮ್ಮ ಕೈಗಳು ಸದಾ ಒಂದಾಗಿರಲಿದೆ. ಜನಪರ, ಪಾರದರ್ಶಕ, ಭ್ರಷ್ಟಾಚಾರ ರಹಿತ ಆಡಳಿತ ನೀಡುವ ಜೊತೆಗೆ ನಮ್ಮ ಎಲ್ಲಾ ಗ್ಯಾರೆಂಟಿಗಳನ್ನು ಈಡೇರಿಸಲು ಕಾಂಗ್ರೆಸ್ ಪಕ್ಷ ಒಂದು ಕುಟುಂಬವಾಗಿ ಕೆಲಸ ಮಾಡಲಿದೆ ಎಂದು ಬರೆದುಕೊಂಡಿದ್ದಾರೆ.





































