ಕಾರ್ಯಕರ್ತರ ಕೊಲೆ, ಹಲ್ಲೆ : ಬಿಜೆಪಿ ಖಂಡನೆ

ಹಿಂಸಾಚಾರ ಖಾತ್ರಿ ಯೋಜನೆ ಜಾರಿ ಎಂದು ನಳಿನ್‌ ಕಿಡಿ

ಬೆಂಗಳೂರು: ವಿಧಾನಸಭೆ ಚುನಾವಣೆಯ ಫಲಿತಾಂಶ ಪ್ರಕಟವಾದ ನಂತರ ರಾಜ್ಯದಾದ್ಯಂತ ಪಕ್ಷದ ಕಾರ್ಯಕರ್ತರ ಮೇಲೆ ನಡೆದ ಹಲ್ಲೆ ಘಟನೆಗಳನ್ನು ಬಿಜೆಪಿ ಖಂಡಿಸಿದೆ.ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕಾಂಗ್ರೆಸ್ ಸಂಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬಂದ ನಂತರ ಹಿಂಸಾಚಾರ ಖಾತ್ರಿ ಯೋಜನೆ ಜಾರಿಗೊಳಿಸುತ್ತಿದೆ ಎಂದು ಕಿಡಿಕಾರಿದ್ದಾರೆ.
ಹೊಸಕೋಟೆಯಲ್ಲಿ ಬಿಜೆಪಿ ಕಾರ್ಯಕರ್ತನ ಹತ್ಯೆಯಾಗಿದ್ದು, ಮತ್ತಿಬ್ಬರು ಕಾರ್ಯಕರ್ತರಿಗೆ ಗಂಭೀರ ಗಾಯಗಳಾಗಿವೆ. ಶಿವಮೊಗ್ಗದಲ್ಲಿ ಬಿಜೆಪಿಗೆ ಬೆಂಬಲ ನೀಡಿದ್ದಕ್ಕೆ ಆಟೋರಿಕ್ಷಾ ಚಾಲಕನ ಮೇಲೆ ಹಲ್ಲೆ ನಡೆಸಲಾಗಿದೆ. ರಾಜ್ಯಾದ್ಯಂತ ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ಪ್ರಕರಣಗಳು ವರದಿಯಾಗುತ್ತಿವೆ. ಕಾಂಗ್ರೆಸ್ ನಾಯಕರು ಹಿಂಸಾಚಾರಕ್ಕೆ ಅವಕಾಶ ನೀಡಬಾರದು. ರಾಜ್ಯದಲ್ಲಿ ಹಲವಾರು ದೇಶ ವಿರೋಧಿ ಚಟುವಟಿಕೆಗಳು ನಡೆಯುತ್ತಿವೆ. ಪಾಕಿಸ್ಥಾನದ ಧ್ವಜಾರೋಹಣ (ಭಟ್ಕಳ) ಮಾಡಲಾಗಿದೆ. ಇದು ದೇಶ ವಿರೋಧಿ ಕೃತ್ಯವಾಗಿದ್ದು, ಇದನ್ನು ತಡೆಯಬೇಕಿತ್ತು. ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸಬಾರದು. ಕಾಂಗ್ರೆಸ್ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಜನರಿಗೆ ನೀಡಿದ ಆಶ್ವಾಸನೆಗಳನ್ನು ಜಾರಿಗೆ ತರಬೇಕೆಂದು ಆಗ್ರಹಿಸಿದರು.
ಟ್ವಿಟರ್‌ನಲ್ಲಿಯೂ ಕಾಂಗ್ರೆಸ್ ವಿರುದ್ಧ ಬಿಜೆಪಿ ಕಿಡಿಕಾರಿದೆ. ರಾಜ್ಯ ಕಾಂಗ್ರೆಸ್ ನಾಯಕರು ಆಗಲೇ ಸ್ಥಿಮಿತ ಕಳೆದುಕೊಂಡಿದ್ದು, ಹೊಸಕೋಟೆಯಲ್ಲಿ ವಿಜಯೋತ್ಸವದ ವೇಳೆ ನಮ್ಮ ಕಾರ್ಯಕರ್ತನೊಬ್ಬನ ಹತ್ಯೆಗೈಯಲಾಗಿದೆ. ರಾಜ್ಯಕ್ಕೆ ಗೂಂಡಾರಾಜ್ ತರಲಿರುವ ಕಾಂಗ್ರೆಸ್ಸಿನ ಮುಂದಿನ 5 ವರ್ಷಗಳ ಕಾನೂನು ಸುವ್ಯವಸ್ಥೆಯ ಚಿತ್ರಣ ಮೊದಲ ದಿನವೇ ಜನತೆಗೆ ಗೊತ್ತಾಗಿದೆ ಎಂದು ಹೇಳಿದೆ.
ನಮ್ಮ ಪಕ್ಷವನ್ನು ಬೆಂಬಲಿಸಿದ್ದಕ್ಕಾಗಿ ದುಡಿದು ತಿನ್ನುವ ಶ್ರಮಜೀವಿಯೊಬ್ಬನ ಆಟೋವನ್ನು ಜಖಂ ಮಾಡುವ ಕಾಂಗ್ರೆಸ್‌ನ ಕ್ರೂರ ಮನಸ್ಥಿತಿ, ಸರ್ಕಾರ ರಚನೆಯಾಗುವ ಮೊದಲೇ ಹೊರಬಿದ್ದಿದೆ. ಕಾಂಗ್ರೆಸ್ ರಾಜ್ಯದಲ್ಲಿ ಮತೀಯ ಶಕ್ತಿಗಳಿಗೆ ಮೊದಲ ದಿನದಿಂದಲೇ ಬೆಂಗಾವಲಾಗಿ ನಿಂತಿರುವುದು ಸಾಮಾಜಿಕ ಸಾಮರಸ್ಯದ ದೃಷ್ಟಿಯಿಂದ ಒಳ್ಳೆಯ ಸೂಚನೆಯಲ್ಲ. ಪ್ರಜಾಪ್ರಭುತ್ವದಲ್ಲಿ ಗೆಲುವು, ಸೋಲು ಸಾಮಾನ್ಯ. ಆದರೆ ಗೆಲುವಿನ ಮದದಲ್ಲಿ ಕಾಂಗ್ರೆಸ್ ಗೂಂಡಾಗಳು ಬಿಜೆಪಿ ಕಾರ್ಯಕರ್ತರ ಪ್ರಾಣಹಾನಿ, ಆಸ್ತಿಪಾಸ್ತಿ ನಷ್ಟ ಉಂಟು ಮಾಡುವುದನ್ನು ನೋಡಿಯೂ ಪೊಲೀಸ್ ಇಲಾಖೆ ಕ್ರಮ ತೆಗೆದುಕೊಳ್ಳದೆ ಹೋದರೆ ನಮ್ನ ಕಾರ್ಯಕರ್ತರ ಸಹನೆ ಮೀರಿದರೆ ಅದಕ್ಕೆ ರಾಜ್ಯ ಸರಕಾರ ಹೊಣೆ ಎಂದು ಎಚ್ಚರಿಸಿದೆ.
ಮಾಜಿ ಸಚಿವ ಡಾ.ಸಿಎನ್.ಅಶ್ವತ್ಥ್ ನಾರಾಯಣ್ ಅವರು ಪ್ರತಿಕ್ರಿಯೆ ನೀಡಿ, ಹೊಸಕೋಟೆಯಲ್ಲಿ ನಮ್ಮ ಪಕ್ಷದ ಕಾರ್ಯಕರ್ತನ ಮೇಲೆ ನಡೆದ ಹಲ್ಲೆ ಮತ್ತು ಹತ್ಯೆ ಖಂಡನೀಯ, ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸುತ್ತೇನೆಂದು ತಿಳಿಸಿದ್ದಾರೆ.
ಕೋಲಾರದ ಹೊಸಕೋಟೆಯಲ್ಲಿ ಶರತ್ ಬಚ್ಚೇಗೌಡ ವಿಜಯಶಾಲಿ ಎಂದು ಘೋಷಿಸಿದ ಕೂಡಲೇ ಕಾಂಗ್ರೆಸ್ ಕಾರ್ಯಕರ್ತರು ಸಂಭ್ರಮಾಚರಣೆ ಪ್ರಾರಂಭಿಸಿದರು. ಮಾಜಿ ಸಚಿವ ಎಂಟಿಬಿ ನಾಗರಾಜ್ ವಿರುದ್ಧ ಎರಡನೇ ಬಾರಿ ಸ್ಪರ್ಧಿಸಿದ್ದ ಶರತ್ ಅವರು ಗೆಲುವು ಸಾಧಿಸಿದ್ದರು. ಎಂಟಿಬಿ ನಾಗರಾಜ್ ಅವರ ಪ್ರಚಾರ ಮಾಡಿದ್ದ ಬಿಜೆಪಿ ಕಾರ್ಯಕರ್ತ ಕೃಷ್ಣಪ್ಪ (55) ಅವರ ಮನೆ ಮುಂದೆಯೂ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿದ್ದರು. ಈ ವೇಳೆ ತೀವ್ರ ವಾಗ್ವಾದ ಶುರುವಾಗಿದೆ. ಈ ವೇಳೆ ಕೃಷ್ಣಪ್ಪ ಅವರ ಮೇಲೆ ಮಾರಾಕಾಸ್ತ್ರಗಳಿಂದ ಹಲ್ಲೆ ನಡೆಸಲಾಗಿದೆ. ಕೂಡಲೇ ಮಧ್ಯೆ ಪ್ರವೇಶಿಸಿದ ಕೃಷ್ಣಪ್ಪ ಅವರ ಪತ್ನಿ ಹಾಗೂ ಮಗ ಬಾಬು ಅವರು, ಕೃಷ್ಣಪ್ಪ ಅವರನ್ನು ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಕೃಷ್ಣಪ್ಪ ಅವರು ಸಾವನ್ನಪ್ಪಿದ್ದಾರೆ.
ಆರೋಪಿಗಳನ್ನು ಬಂಧನಕ್ಕೊಳಪಡಿಸುವಂತೆ ಒತ್ತಾಯಿಸಿ ಬಿಜೆಪಿಯ ಹಿರಿಯ ಮುಖಂಡರು ನಂದಗುಡಿ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದರು. ಘಟನೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆಯೇ ಎಚ್ಚೆತ್ತ ಪೊಲೀಸರು, ನಾಲ್ವರು ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.









































































































error: Content is protected !!
Scroll to Top