ಬಿಜೆಪಿ ಪ್ರಣಾಳಿಕೆ ಬಿಡುಗಡೆ; ಭರ್ಜರಿ ಕೊಡುಗೆಗಳು
ಬೆಂಗಳೂರು : ಆಡಳಿತಾರೂಢ ಬಿಜೆಪಿಯ ಚುನಾವಣಾ ಪ್ರಣಾಳಿಕೆ ಬಿಡುಗಡೆಯಾಗಿದೆ. ಖಾಸಗಿ ಹೋಟೆಲಿಲ್ಲಿ ನಡೆದ ಸಮಾರಂಭದಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಈ ಪ್ರಣಾಳಿಕೆ ಬಿಡುಗಡೆಗೊಳಿಸಿದ್ದಾರೆ. ಜನಪರ ಪ್ರಣಾಳಿಕೆ ಹೆಸರಿನಲ್ಲಿ ಬಿಜೆಪಿಯ ಚುನಾವಣಾ ಪ್ರಣಾಳಿಕೆ ಬಿಡುಗಡೆಯಾಗಿದೆ. ಕಾಂಗ್ರೆಸ್ ಪಕ್ಷ ಗ್ಯಾರಂಟಿ ಹೆಸರಿನಲ್ಲಿ ನೀಡಿರುವ ಭರವಸೆಗಳ ಬಗ್ಗೆ ಸಾಕಷ್ಟು ಟೀಕೆಗಳನ್ನು ಮಾಡಿರುವ ಬಿಜೆಪಿಯು ಇದೀಗ ಮತದಾರರನ್ನು ಓಲೈಸಲು ಭರಪೂರ ಯೋಜನೆಗಳನ್ನು ಘೋಷಿಸಿದೆ. ವಿವಿಧ ಕ್ಷೇತ್ರಗಳ ಗಣ್ಯರ ಸಲಹೆ ಪಡೆದು ಈ ಪ್ರಣಾಳಿಕೆ ತಯಾರು ಮಾಡಲಾಗಿದೆ. ಈ ಮೂಲಕ ಕಾಂಗ್ರೆಸ್ ಗ್ಯಾರಂಟಿಗಳಿಗೆ ಸೆಡ್ಡು ಹೊಡೆದಿದೆ.
- ಪ್ರತಿ ವಾರ್ಡ್‌ನಲ್ಲಿ ಅಟಲ್ ಆಹಾರ ಕೇಂದ್ರ
- ಪೋಷಣಾ ಯೋಜನೆಯಡಿ ಬಿಪಿಎಲ್ ಕುಟುಂಬಕ್ಕೆ ಅರ್ಧ ಲೀಟರ್ ನಂದಿನಿ ಹಾಲು
- ಪ್ರತಿ ಕುಟುಂಬಕ್ಕೆ ಪಡಿತರದಲ್ಲಿ 5 ಕೆಜಿ ಸಿರಿಧಾನ್ಯ
- ಬಿಪಿಎಲ್ ಕುಟುಂಬಕ್ಕೆ ಯುಗಾದಿ, ದೀಪಾವಳಿ ಗಣೇಶ ಹಬ್ಬಕ್ಕೆ 3 ಉಚಿತ ಸಿಲಿಂಡರ್
- ವಿಶ್ವೇಶ್ವರಯ್ಯ ವಿದ್ಯಾ ಯೋಜನೆಯಡಿ ಸರ್ಕಾರಿ ಶಾಲೆಗಳ ಉನ್ನತೀಕರಣ
ಪ್ರಣಾಳಿಕೆಯಲ್ಲಿ ಕೃಷಿಗೆ ಹೆಚ್ಚು ಆದ್ಯತೆ ನೀಡಿದ್ದೇವೆ. ಈಗಾಗಲೇ ಬಜೆಟ್ನಲ್ಲೂ ಕೃಷಿಗೂ ಹೆಚ್ಚು ಆದ್ಯತೆ ನೀಡಿದ್ದೇವೆ. ಸಿರಿಧಾನ್ಯಗಳ ಉತ್ಪಾದನೆ, ಮೀನುಗಾರಿಕೆ ಉತ್ಪಾದನೆಗೆ ಹೆಚ್ಚಿನ ಆದ್ಯತೆ ನೀಡಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಯಿಯವರು ಹೇಳಿದರು. ಪ್ರಣಾಳಿಕೆ ಬಿಡುಗಡೆ ಗೂ ಮುನ್ನ ಮಾತನಾಡಿದ ಸಚಿವ ಡಾ. ಸುಧಾಕರ್ , 179 ಕ್ಷೇತ್ರದಿಂದ ಅಭಿಪ್ರಾಯ ಸಂಗ್ರಹ ಮಾಡಲಾಗಿದೆ. 6 ಲಕ್ಷ ಸಲಹೆ ಬಂದಿದೆ. 17 ರಾಷ್ಟ್ರೀಯ ನಾಯಕರು ಪ್ರಣಾಳಿಕೆ ಸಿದ್ಧತಾ ಸಭೆಯಲ್ಲಿ ಭಾಗಿಯಾಗಿದ್ದರು. 900 ಸಲಹೆಗಳು ತಜ್ಞರಿಂದ ಬಂದಿದೆ. ಬೇರೆಯವರ ರೀತಿ ನಾವು ಸುಳ್ಳು ಭರವಸೆ ನೀಡುವುದಿಲ್ಲ. ನಮ್ಮ ಭರವಸೆ ಮೇಲೆ ಜನರಿಗೆ ನಂಬಿಕೆ ಇದೆ. ಕಾಂಗ್ರೆಸ್ 13 ರಾಜ್ಯಗಳಲ್ಲಿ ಇದೇ ರೀತಿ ಭರವಸೆ ನೀಡಿದ್ರು ಅವರ ಭರವಸೆ ಜನ ನಂಬೋದಿಲ್ಲ. ಮಧ್ಯ ಪ್ರದೇಶ, ರಾಜಸ್ಥಾನ ಮತ್ತು ಕೆಲ ದಿನ ಮಹಾರಾಷ್ಟ್ರ ಇಲ್ಲಿ ಯಾವುದೇ ಭರವಸೆ ಈಡೇರಿಸಿಲ್ಲ ಎಂದು ಹೇಳಿದರು.
ಪಕ್ಷದ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಚುನಾವಣಾ ಉಸ್ತುವಾರಿ ಧರ್ಮೇಂದ್ರ ಪ್ರಧಾನ್, ಚುನಾವಣಾ ನಿರ್ವಹಣಾ ಸಮಿತಿ ಸಂಚಾಲಕಿ ಶೋಭಾ ಕರಂದ್ಲಾಜೆ, ಪ್ರಹ್ಲಾದ್ ಜೋಶಿ, ಸಚಿವ ಡಾ. ಸುಧಾಕರ್ ಸೇರಿದಂತೆ ಪ್ರಮುಖ ನಾಯಕರು ಈ ವೇಳೆ ಉಪಸ್ಥಿತರಿದ್ದರು.
























