ಸುಬ್ರಹ್ಮಣ್ಯ ಮಠಾಧೀಶ ಶ್ರೀ ವಿದ್ಯಾಪ್ರಸನ್ನ ಸ್ವಾಮೀಜಿಗೆ ಡಾಕ್ಟರೇಟ್

ಮುಕ್ಕ ಶ್ರೀನಿವಾಸ ವಿಶ್ವವಿದ್ಯಾಲಯದಿಂದ ಪ್ರದಾನ

ಕಾರ್ಕಳ : ಶ್ರೀನಿವಾಸ ವಿಶ್ವವಿದ್ಯಾಲಯದ ಮುಕ್ಕ ಕ್ಯಾಂಪಸ್‌ನಲ್ಲಿ ಏ. 20ರಂದು ನಡೆದ 5ನೇ ಘಟಿಕೋತ್ಸವದಲ್ಲಿ ಶ್ರೀ ಸುಬ್ರಹ್ಮಣ್ಯ ಮಠಾಧೀಶರಾದ ಶ್ರೀ ವಿದ್ಯಾಪ್ರಸನ್ನತೀರ್ಥ ಶ್ರೀಪಾದರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಯಿತು. ಶ್ರೀಪಾದರು ಶ್ರೀನಿವಾಸ ಸಂಸ್ಥೆಯಲ್ಲಿ ದೀಪ ಪ್ರಜ್ವಲಿಸುವ ಮೂಲಕ 5ನೇ ಘಟಿಕೋತ್ಸವಕ್ಕೆ ಚಾಲನೆ ನೀಡಿದರು. ಕರ್ಣಾಟಕ ಬ್ಯಾಂಕ್‌ನ ನಿವೃತ್ತ ಸಿಇಒ ಎಂ. ಎಸ್. ಮಹಾಬಲೇಶ್ವರ ಡಾಕ್ಟರೇಟ್ ಆಫ್ ಲೆಟರ್ಸ್ ಪದವಿ ಪ್ರದಾನ ಮಾಡಿದರು. ಶ್ರೀನಿವಾಸ ವಿಶ್ವವಿದ್ಯಾಲಯ ಕುಲಾಧಿಪತಿ ಡಾ. ರಾಘವೇಂದ್ರ ರಾವ್ ಅಧ್ಯಕ್ಷತೆ ವಹಿಸಿದ್ದರು. ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಕುಲಪತಿ ಡಾ. ಎಂ.ಕೆ. ರಮೇಶ್ ಅತಿಥಿಯಾಗಿ ಭಾಗವಹಿಸಿದ್ದರು.
ವಿದ್ಯಾಪ್ರಸನ್ನ ತೀರ್ಥಶ್ರೀಪಾದರು 5ನೇ ಘಟಿಕೋತ್ಸವದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಭಗವಂತ ಮನುಷ್ಯ ಜೀವಿಗೆ ಕೊಟ್ಟ ವಿಶೇಷವಾದ ಉಡುಗೊರೆ ಕ್ರಿಯಾಶೀಲವಾದ ಕೈ ಬೆರಳು ಹಾಗೂ ವಿಶಿಷ್ಟವಾದ ಬುದ್ಧಿಶಕ್ತಿ. ಸೂಜಿಗೆ ದಾರವನ್ನು ಪೋಣಿಸಲು ಮನುಷ್ಯನನ್ನು ಬಿಟ್ಟು ಬೇರೆ ಯಾರಿಂದಲೂ ಸಾಧ್ಯವಿಲ್ಲ. ಪ್ರಪಂಚ ಬೆಳೆದಿದ್ದು ಕೈಗಾರಿಕೆಯಿಂದ, ಅದನ್ನು ಬೆಳೆಸಿದ್ದು ಕ್ರಿಯಾಶೀಲವಾದ ಕೈ ಬೆರಳುಗಳಿಂದ. ಯೋಚನೆ ಮಾಡಿದ್ದು ವಿಶಿಷ್ಟವಾದ ಬುದ್ಧಿಶಕ್ತಿಯಿಂದ ಎಂದರು.
ಸಾಮಾಜಿಕ ಮೌಲ್ಯಗಳ ಮೇಲೆ ಗೌರವ ಇರುವ ವ್ಯಕ್ತಿಯ ಬೆಂಬಲದಲ್ಲಿ ಶಿಕ್ಷಣ ಸಂಸ್ಥೆ ನಡೆದರೆ ಒಬ್ಬ ವ್ಯಕ್ತಿಯ ಸರ್ವಾಂಗೀಣ ವಿಕಾಸ ಬೌದ್ಧಿಕವಾಗಿ ಮತ್ತು ಮಾನಸಿಕವಾಗಿ ನಡೆಯಲು ಸಾಧ್ಯ. ಸಂಸ್ಕೃತಿಯ ಬೆಂಬಲದಲ್ಲಿ ನಡೆಯುವ ವಿದ್ಯೆ ಸಮಾಜಕ್ಕೆ ಪೂರಕವಾಗಿರುತ್ತದೆ. ಶ್ರೀನಿವಾಸ ಕಾಲೇಜಿನಲ್ಲಿ ಕಲಿತ ಮಕ್ಕಳು ಸಮಾಜಕ್ಕೆ ಉನ್ನತವಾದ ಶಿಕ್ಷಣವನ್ನು ನೀಡಲಿ, ಶಿಕ್ಷಣ ಸಂಸ್ಥೆ ಇನ್ನಷ್ಟು ಉನ್ನತಿಯನ್ನು ಪಡೆಯಲಿ ಎಂದು ಆಶೀರ್ವಚನ ನೀಡಿದರು.

















































error: Content is protected !!
Scroll to Top