ಪೂಂಛ್‌ ದಾಳಿ ಭಯೋತ್ಪಾದಕರ ಕೃತ್ಯ

ವಾಹನಕ್ಕೆ ಬೆಂಕಿ ಹತ್ತಿಕೊಂಡು ಐವರು ಯೋಧರು ಹುತಾತ್ಮ

ಹೊಸದಿಲ್ಲಿ : ಜಮ್ಮು ಮತ್ತು ಕಾಶ್ಮೀರದ ಪೂಂಛ್‌ ಜಿಲ್ಲೆಯಲ್ಲಿ ಗುರುವಾರ ನಡೆದ ಭಯೋತ್ಪಾದನಾ ದಾಳಿ ಪಾಕಿಸ್ಥಾನದ ಜೈಶ್‌ -ಎ-ಅಹ್ಮದ್‌ ಭಯೋತ್ಪದನಾ ಸಂಘಟನೆಯ ಕೃತ್ಯ ಎಂದು ತಿಳಿದುಬಂದಿದೆ. ಈ ದಾಳಿಯಲ್ಲಿ ಐವರು ಯೋಧರು ಹುತಾತ್ಮರಾಗಿದ್ದಾರೆ. ಜೈಶ್ ಬೆಂಬಲಿತ ಭಯೋತ್ಪಾದಕ ಗುಂಪು ಪೀಪಲ್ಸ್ ಆಂಟಿ-ಫ್ಯಾಸಿಸ್ಟ್ ಫ್ರಂಟ್ (ಪಿಎಎಫ್ಎಫ್) ಸೈನಿಕರ ಮೇಲೆ ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ ಎಂದು ಮೂಲಗಳು ತಿಳಿಸಿವೆ.
ಪೂಂಚ್ ಜಿಲ್ಲೆಯ ಭಿಂಬರ್ ಗಲಿಯಿಂದ ಸಾಂಗಿಯೋಟ್‌ಗೆ ತೆರಳುತ್ತಿದ್ದ ಸೇನಾ ವಾಹನದ ಮೇಲೆ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಓರ್ವ ಸೇನಾ ಸಿಬ್ಬಂದಿ ಗಾಯಗೊಂಡಿದ್ದು, ತಕ್ಷಣವೇ ಅವರನ್ನು ರಾಜೌರಿಯ ಸೇನಾ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿದೆ.
ಉಗ್ರರಿಗಾಗಿ ಸೇನಾ ಪಡೆಗಳು ತೀವ್ರ ಶೋಧ ಕಾರ್ಯ ನಡೆಸುತ್ತಿವೆ. ರಜೌರಿ ಸೆಕ್ಟರ್‌ನಲ್ಲಿ ಮಧ್ಯಾಹ್ನ 3 ಸುಮಾರಿಗೆ ಈ ಘಟನೆ ನಡೆದಿದೆ. ಸೇನಾ ವಾಹನದ ಮೇಲೆ ಗ್ರೆನೇಡ್‌ ಮೂಲಕ ದಾಳಿ ಮಾಡಿರುವುದರಿಂದ ವಾಹನಕ್ಕೆ ತಕ್ಷಣವೇ ಬೆಂಕಿ ಹೊತ್ತಿಕೊಂಡಿದೆ.
ಈ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿರುವ ಕಾರಣ ಸಾಕಷ್ಟು ದೂರದವರೆಗೆ ಸ್ಪಷ್ಟವಾಗಿ ಏನೂ ಕಾಣಿಸುವುದಿಲ್ಲ. ಈ ಪರಿಸ್ಥಿತಿಯ ಲಾಭ ಪಡೆದಿರುವ ಉಗ್ರರು ಸೇನಾ ವಾಹನದ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ ಎಂದು ಉತ್ತರ ಕಮಾಂಡ್ ತಿಳಿಸಿದೆ. ಗುಂಡಿನ ದಾಳಿಯಲ್ಲಿ ರಾಷ್ಟ್ರೀಯ ರೈಫಲ್ಸ್ ಘಟಕದ ಯೋಧರು ಹುತಾತ್ಮರಾಗಿದ್ದಾರೆ, ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗಾಗಿ ಅವರನ್ನು ನಿಯೋಜಿಸಲಾಗಿತ್ತು.

















































error: Content is protected !!
Scroll to Top