ಉಡುಪಿ : ಹೆರ್ಗ ಬಬ್ಬುಸ್ವಾಮಿ ಲೇಔಟ್ ʼಸರ್ವರಿಗೂ ಸೂರುʼ ಯೋಜನೆಯ ಮೊದಲ ಹಂತದಲ್ಲಿ 240 ಫಲಾನುಭವಿಗಳಿಗೆ ಮನೆಯ ಹಕ್ಕುಪತ್ರವನ್ನು ಶಾಸಕ ರಘುಪತಿ ಭಟ್ ವಿತರಿಸಿದರು. ಅವರ ಮಹತ್ವಾಕಾಂಕ್ಷೆಯ ಯೋಜನೆ, ರಾಜ್ಯದಲ್ಲಿ ಪ್ರಥಮವಾಗಿ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿಯಲ್ಲಿ ಸರ್ವರಿಗೂ ಸೂರು ಕಾರ್ಯಕ್ರಮದಡಿ ಉಡುಪಿ ನಗರಸಭಾ ವ್ಯಾಪ್ತಿಯ ಫಲಾನುಭವಿಗಳಿಗೆ ಹೆರ್ಗ ಗ್ರಾಮದ ಬಬ್ಬುಸ್ವಾಮಿ ಲೇಔಟ್ ನಲ್ಲಿ G+3 ಮಾದರಿಯಲ್ಲಿ 460 ಮನೆಗಳನ್ನು ಒಳಗೊಂಡ ವಸತಿ ಸಮುಚ್ಛಯ ನಿರ್ಮಿಸಲಾಗುತ್ತಿದ್ದು, ಮೊದಲ ಹಂತದಲ್ಲಿ 240 ಮನೆಗಳ ಫಲಾನುಭವಿಗಳಿಗೆ ಹಕ್ಕುಪತ್ರವನ್ನು ಮಾ.24ರಂದು ಕೆ. ರಘುಪತಿ ಭಟ್ ವಿತರಿಸಿದರು.
ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ವಾಸವಿರುವ ನಿರಾಶ್ರಿತರಿಗೆ ಮಾತ್ರ ಈ ಯೋಜನೆಯಲ್ಲಿ ಮನೆಯನ್ನು ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಒಂದು ಮನೆಗೆ 7,42,994 ರೂ. ವೆಚ್ಚವಾಗುತ್ತಿದ್ದು, ಇದರಲ್ಲಿ ಸಾಮಾನ್ಯ ವರ್ಗದ ಫಲಾನುಭವಿಗಳಿಗೆ ಕೇಂದ್ರ ಸರ್ಕಾರ 1,50,000ರೂ., ರಾಜ್ಯ ಸರ್ಕಾರ ರೂ. 1,20,000ರೂ., ನಗರ ಸಭೆಯ ಯೋಜನಾ ವೆಚ್ಚದಡಿ ಶೇ.10 ರಷ್ಟು ಅಂದರೆ ರೂ. 74,299 ರೂ. ಸಹಾಯ ಧನದ ರೂಪದಲ್ಲಿ ನೀಡಲಾಗುತ್ತಿದೆ. ಫಲಾನುಭವಿ ವಂತಿಗೆ ರೂಪದಲ್ಲಿ ರೂ. 90,000 ರೂ. ಮೊತ್ತದ ಡಿಡಿ ಮಾಡಿ ಪಾವತಿಸಬೇಕು. ಉಳಿದ ಮೊತ್ತ 3,08,695 ರೂ. ಬ್ಯಾಂಕ್ ಸಾಲವಾಗಿ ನೀಡುತ್ತಿದ್ದು, ತಿಂಗಳ ಕಂತಿನಂತೆ ಪಾವತಿಸುವ ಅನುಕೂಲ ಕಲ್ಪಿಸಲಾಗಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಕೇಂದ್ರ ಸರಕಾರ 1,50,000 ರೂ., ರಾಜ್ಯ ಸರಕಾರ 2 ಲಕ್ಷ ರೂ., ನಗರಸಭೆಯ ಯೋಜನಾ ವೆಚ್ಚದಡಿ ಶೇ.10ರಷ್ಟು ಅಂದರೆ 74,299 ರೂ. ಸಹಾಯಧನದ ರೂಪದಲ್ಲಿ ನೀಡಲಾಗುತ್ತಿದೆ. ಫಲಾನುಭವಿಯು ವಂತಿಗೆ ರೂಪದಲ್ಲಿ ರೂ. 60,000 ರೂ. ಮೊತ್ತದ ಡಿಡಿ ಮಾಡಿ ಪಾವತಿಸಬೇಕು. ಉಳಿದ ಮೊತ್ತ 2,58,695 ರೂ. ಬ್ಯಾಂಕ್ ಸಾಲವಾಗಿ ನೀಡುತ್ತಿದ್ದು, ತಿಂಗಳ ಕಂತಿನಂತೆ ಪಾವತಿಸುವ ಅನುಕೂಲ ಕಲ್ಪಿಸಲಾಗಿದೆ. ಮನೆಗಾಗಿ ಅರ್ಜಿ ಹಾಕಿ ಆಯ್ಕೆಯಾದ ಫಲಾನುಭವಿಗಳಿಗೆ ಶಾಸಕ ಕೆ. ರಘುಪತಿ ಭಟ್ ಅವರ ಉಪಸ್ಥಿತಿಯಲ್ಲಿ ಚೀಟಿ ಎತ್ತುವ ಪ್ರಕ್ರಿಯೆ ಮೂಲಕ ಮನೆ ಹಂಚಿಕೆ ಮಾಡಲಾಗಿದೆ.
ಉಡುಪಿ ನಗರ ಸಭೆ ಅಧ್ಯಕ್ಷೆ ಸುಮಿತ್ರಾ ಆರ್. ನಾಯಕ್, ಉಪಾಧ್ಯಕ್ಷೆ ಲಕ್ಷ್ಮೀ ಮಂಜುನಾಥ ಕೊಳ, ಸ್ಥಾಯಿ ಸಮಿತಿ ಅಧ್ಯಕ್ಷ ಶ್ರೀಶ ಕೊಡವೂರು, ನಗರಸಭೆ ಸದಸ್ಯೆ ವಿಜಯಲಕ್ಷ್ಮಿ, ನಗರ ಆಶ್ರಯ ಸಮಿತಿ ಸದಸ್ಯರಾದ ಮುರಳಿ ಭಟ್, ಡೆನ್ನಿಸ್, ನಗರಸಭೆಯ ಪೌರಾಯುಕ್ತ ಆರ್.ಪಿ ನಾಯ್ಕ್, ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ ಸಹಾಯಕ ಕಾರ್ಯಪಾಲಕ ಅಭಿಯಂತರ ಪ್ರಸನ್ನ ಕುಮಾರ್, ಬ್ಯಾಂಕ್ ಆಫ್ ಬರೋಡ ಮಣಿಪಾಲ ಶಾಖೆ ಪ್ರಬಂಧಕ ಕಮಲೇಶ್, ನಗರ ಸಭೆಯ ಸದಸ್ಯರು, ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಉಪಸ್ಥಿತರಿದ್ದರು.
240 ಫಲಾನುಭವಿಗಳಿಗೆ ಮನೆ ಹಕ್ಕುಪತ್ರ ವಿತರಣೆ










































