ಕೇರಳ ಹೈಕೋರ್ಟ್ ಆದೇಶ
ತಿರುವನಂತಪುರಂ: ಅಯ್ಯಪ್ಪ ಭಕ್ತರು ವ್ರತಾಚರಣೆ ಮಾಡಿಕೊಂಡು ಬುರುವಾಗ ಶಬರಿಮಲೆ ದೇವಸ್ಥಾನದ ಒಳಗೆ ಸೆಲೆಬ್ರಿಟಿಗಳು ಮತ್ತು ರಾಜಕಾರಣಿಗಳ ಪೋಸ್ಟರ್‌ಗಳು ಮತ್ತು ದೊಡ್ಡ ಛಾಯಾಚಿತ್ರಗಳನ್ನು ತರುವುದನ್ನು ತಡೆಯಬೇಕೆಂದು ಶಬರಿಮಲೆ ದೇವಸ್ಥಾನದ ಆಡಳಿತ ನಡೆಸುತ್ತಿರುವ ತಿರುವಾಂಕೂರು ದೇವಸ್ವಂ ಮಂಡಳಿಗೆ ಕೇರಳದ ಹೈಕೋರ್ಟ್ ಆದೇಶಿಸಿದೆ.
ಭಕ್ತರು ಚಲನಚಿತ್ರ ತಾರೆಯರು ಮತ್ತು ರಾಜಕಾರಣಿಗಳ ಪೋಸ್ಟರ್‌ಗಳನ್ನು ಹಿಡಿದು ಸಂಗೀತ ವಾದ್ಯಗಳೊಂದಿಗೆ ಪ್ರದರ್ಶನ ನೀಡುತ್ತಿರುವ ವರದಿಗಳ ಹಿನ್ನೆಲೆಯಲ್ಲಿ ನ್ಯಾಯಮೂರ್ತಿ ಅನಿಲ್ ಕೆ. ನರೇಂದ್ರನ್ ಮತ್ತು ನ್ಯಾಯಮೂರ್ತಿ ಪಿ.ಜಿ. ಅಜಿತ್ ಕುಮಾರ್ ಅವರ ವಿಭಾಗೀಯ ಪೀಠ ಈ ಆದೇಶ ನೀಡಿದೆ.
ಅಯ್ಯಪ್ಪನಿಗೆ ಭಕ್ತರು ಶಬರಿಮಲೆಯ ಸಂಪ್ರದಾಯ ಮತ್ತು ಸಂಪ್ರದಾಯದ ಪ್ರಕಾರ ಪೂಜೆ ಮ್ತು ಆರಾಧನೆ ಮಾಡಬೇಕೆ ಹೊರತು ಸೆಲೆಬ್ರಿಟಿಗಳ ಮತ್ತು ರಾಜಕಾರಣಿಗಳ ಫೋಟೊ ತರುವುದು ಸೂಕ್ತವಲ್ಲ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.
ಶಬರಿಮಲೆಯ ಗರ್ಭಗುಡಿ ಉದ್ಘಾಟನೆ ವೇಳೆ ಡೋಲು ವಾದಕ ಶಿವಮಣಿ ಅವರಿಗೆ ಡೋಲು ಬಾರಿಸಲು ಅವಕಾಶ ನೀಡಿರುವ ಬಗ್ಗೆ ಕೇರಳ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದ್ದು, ಯಾವುದೇ ಯಾತ್ರಿಕರಿಗೆ ಸೋಪಾನದ ಮುಂದೆ ಡೋಲು ಅಥವಾ ಇತರ ವಾದ್ಯಗಳನ್ನು ಬಾರಿಸಲು ಅವಕಾಶವಿಲ್ಲ ಎಂದು ಹೇಳಿದೆ.





















