ಡಬ್ಬಲ್‌ ಎಂಜಿನ್‌ ಸರಕಾರದಿಂದ ಕನ್ನಡಕ್ಕೆ ಕೊಡುಗೆಯಿಲ್ಲ

ಸಾಹಿತ್ಯ ಸಮ್ಮಳನಾಧ್ಯಕ್ಷ ದೊಡ್ಡರಂಗೇಗೌಡ ತರಾಟೆ

ಹಾವೇರಿ : ಹಾವೇರಿಯಲ್ಲಿ ನಡೆಯುತ್ತಿರುವ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಭಾಷಣದಲ್ಲಿ ಸಮ್ಮೇಳನದ ಸರ್ವಾದ್ಯಕ್ಷ ಸಾಹಿತಿ ದೊಡ್ಡರಂಗೇಗೌಡ ಅವರು ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡು ಕನ್ನಡ ಭಾಷೆ ವಿಚಾರವಾಗಿ ಸರ್ಕಾರ ನಡೆದುಕೊಂಡ ರೀತಿಯನ್ನು ಖಂಡಿಸಿದ್ದಾರೆ.
ಬಿಜೆಪಿ ‘ಡಬಲ್‌ ಎಂಜಿನ್‌ ಸರ್ಕಾರದ’ ಅನುಕೂಲತೆಗಳ ಬಗ್ಗೆ ಪದೇಪದೆ ಹೇಳುತ್ತಿರುತ್ತದೆ. ಆದರೆ ಈ ಸರ್ಕಾರ ಕನ್ನಡ ಭಾಷೆಗೆ ಏನು ಮಾಡಿದೆ ಎಂದು ಪ್ರಶ್ನಿಸಿದರು. ಕನ್ನಡ ಅಭಿವೃದ್ದಿಗೆ ಸಾಕಷ್ಟು ಅನುದಾನ ಬಂದಿಲ್ಲ. ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕನ್ನಡ ಭಾಷಾ ಅಭಿವೃದ್ದಿಗೆ ಸಾಕಷ್ಟು ಹಣ ನೀಡಿಲ್ಲ. ಕನ್ನಡ ಶಾಸ್ತ್ರೀಯ ಭಾಷೆಯಾಗಿ ಪ್ರಚಾರ ಮಾಡುವ ನಿಟ್ಟಿನಲ್ಲಿ ಸರ್ಕಾರ ನಿರ್ಲಕ್ಷ್ಯ ತೋರಿದೆ ಎಂದು ದೊಡ್ಡರಂಗೇಗೌಡರು ಹರಿಹಾಯ್ದರು.
ತಮಿಳು ಹಾಗೂ ಸಂಸ್ಕೃತ ಭಾಷೆಗಳ ಅಭಿವೃದ್ದಿಗೆ ಸಾಕಷ್ಟು ಅನುದಾನವನ್ನು ಕೇಂದ್ರ ಸರ್ಕಾರ ನೀಡಿದೆ. ಕಳೆದ ಮೂರು ವರ್ಷಗಳಲ್ಲಿ ಸುಮಾರು 40-50 ಕೋಟಿ ರೂ. ನೀಡಲಾಗಿದೆ. ಕನ್ನಡಕ್ಕೆ ಕನಿಷ್ಟ ಮಟ್ಟದ ಹಣವನ್ನೂ ನೀಡಿಲ್ಲ. ಕೇವಲ ನಾಲ್ಕಾರು ಕೋಟಿ ಹಣ ನೀಡಿ ಕೈತೊಳೆದುಕೊಂಡಿದೆ. ಕನ್ನಡ ಶಾಸ್ತ್ರೀಯ ಭಾಷೆಯ ಅಧ್ಯಯನಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸುವಲ್ಲಿಯೂ ಸರ್ಕಾರ ವಿಪಲವಾಗಿದೆ. ಇದು ನಮ್ಮ ಜಡತ್ವದ ಕುರುಹು ಅಲ್ಲವೇ ಎಂದು ಪ್ರಶ್ನಿಸಿದರು.
ಗಡಿ ವಿಚಾರವಾಗಿ ಮಹಾರಾಷ್ಟ್ರ ಸರ್ಕಾರ ಪದೇಪದೆ ತಂಟೆ ತೆಗೆಯುತ್ತಲೇ ಇರುತ್ತದೆ. ಬೆಳಗಾವಿಯ ಒಂದಿಂಚು ಜಾಗವನ್ನೂ ಬಿಟ್ಟು ಕೊಡಲಾರೆವು ಎಂದು ದೊಡ್ಡರಂಗೇಗೌಡ ಗುಡುಗಿದರು. ನಾವೀಗ ಸಂಯಮದಿಂದ ಸಮಸ್ಯೆಯನ್ನು ಪರಿಹರಿಸಿಕೊಳ್ಳಬೇಕು. ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಮಹಾರಾಷ್ಟ್ರದವರು ಸೊಲ್ಲೆತ್ತದಂತೆ ಮಾಡಬೇಕು ಎಂದರು. ವೇದಿಕೆಯಲ್ಲಿ ಈ ಇಬ್ಬರು ನಾಯಕರು ಉಪಸ್ಥಿತರಿದ್ದರು.
ಕನ್ನಡ, ಕನ್ನಡಿಗ ಹಾಗೂ ಕರ್ನಾಟಕ ಒಂದೇ ತಂತಿಯಲ್ಲಿರಬೇಕು. ಈ ತಂತಿಗಳು ಮೂರಾಗದಂತೆ ನಾವೆಲ್ಲ ಶ್ರಮಿಸಬೇಕಿದೆ. ಕಾಸರಗೋಡಿನ ಕನ್ನಡಿಗರ ಮಕ್ಕಳು ಮಲಯಾಳಂ ಕಲಿಯುವ ಅನಿವಾರ್ಯತೆ ಇದೆ. ಅಲ್ಲಿ ಕರ್ನಾಟಕ ಸರ್ಕಾರ ಕನ್ನಡ ಶಾಲೆಗಳನ್ನು ತೆರೆಯಬೇಕು ಎಂದು ಒತ್ತಾಯಿಸಿದರು. ಕರ್ನಾಟಕದಲ್ಲಿ ಮುಚ್ಚಿ ಹೋಗಿರುವ ಶಾಲೆಗಳನ್ನು ಮತ್ತೆ ತೆರೆಯುವ ನಿಟ್ಟಿನಲ್ಲಿ ಸರ್ಕಾರ ಕ್ರಮಗಳನ್ನು ತೆಗೆದುಕೊಳ್ಳಬೇಕು. ಜನಪ್ರತಿನಿಧಿಗಳು ಮೂರು ಶಾಲೆಗಳನ್ನು ದತ್ತಕ್ಕೆ ಪಡೆದರೂ ಈ ಕೆಲಸ ಸುಲಭವಾಗುತ್ತದೆ ಎಂದು ಅವರು ಒತ್ತಾಯಿಸಿದರು.

















































error: Content is protected !!
Scroll to Top