ಹೆಬ್ರಿ : ಹೆಬ್ರಿ ಹೋಬಳಿ ಕೇಂದ್ರಕ್ಕೆ ಉಪತಹಶೀಲ್ದಾರ್ ಕಚೇರಿಯನ್ನು ಪ್ರಾರಂಭಿಸಲು ಅವಶ್ಯವಿರುವ ಉಪತಹಶೀಲ್ದಾರ್, ಕಂದಾಯ ನಿರೀಕ್ಷಕ, ದ್ವಿತೀಯ ದರ್ಜೆ ಸಹಾಯಕ, ಡಾಟಾ ಎಂಟ್ರಿ ಆಪರೇಟರ್ ಹಾಗೂ ಗ್ರೂಪ್ ಡಿ ಹುದ್ದೆಯನ್ನು ಸೃಜನೆ ಮಾಡಿ ಸರಕಾರ ಆದೇಶ ಹೊರಡಿಸಿದೆ.
ಅಜೆಕಾರು ಹೋಬಳಿಯಿಂದ 12 ಗ್ರಾಮಗಳು ಹಾಗೂ ಕುಂದಾಪುರ ಹೋಬಳಿಯ 4 ಗ್ರಾಮಗಳನ್ನು ಸೇರಿ ಹೆಬ್ರಿ ತಾಲೂಕು ರಚನೆಯಾಗಿದೆ. ನೂತನವಾಗಿ ರಚನೆಯಾದ ಹೆಬ್ರಿ ತಾಲೂಕಿನಲ್ಲಿ ಆಡಳಿತಾತ್ಮಕ ಹಾಗೂ ಸಾರ್ವಜನಿಕ ಹಿತದೃಷ್ಟಿಯಿಂದ ಹೋಬಳಿ ಕೇಂದ್ರ ಸ್ಥಾಪಿಸಲಾಗಿದ್ದು, ಈ ಹೋಬಳಿಯಲ್ಲಿ ಉಪ ತಹಶೀಲ್ದಾರ್ ಕಚೇರಿಯನ್ನು ಪ್ರಾರಂಭಿಸಲು ಅನುವಾಗುವಂತೆ ಅಗತ್ಯ ಹುದ್ದೆಗಳನ್ನು ಸೃಜಿಸುವಂತೆ ಜಿಲ್ಲಾಧಿಕಾರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು. ಈ ನಿಟ್ಟಿನಲ್ಲಿ ಹೋಬಳಿ ಉಪತಹಶೀಲ್ದಾರ್ ಕಚೇರಿಯನ್ನು ಪ್ರಾರಂಭಿಸಲು ಅವಶ್ಯವಿರುವ ಐದು ಹುದ್ದೆಗಳನ್ನು ಸರಕಾರ ಸೃಜನೆ ಮಾಡಿದೆ ಎಂದು ಕಂದಾಯ ಇಲಾಖೆಯ ಅಧೀನ ಕಾರ್ಯದರ್ಶಿ ಎಸ್ . ಗುರುಮೂರ್ತಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.




















