ಕಾನೂನು ಕಣಜ : ಜಾತಿ – ಧರ್ಮಕ್ಕೆ ಸಂಬಂಧಿಸಿದ ವಿವಿಧ ಅಪರಾಧಗಳು

ಭಾರತೀಯ ದಂಡ ಸಂಹಿತೆ (ಇಂಡಿಯನ್ ಪೆನಲ್ ಕೋಡ್) 1860 ಕಾನೂನಿನ ಪ್ರಕಾರ ಭಾರತ ದೇಶದ ಯಾವುದೇ ವರ್ಗಕ್ಕೆ ಸೇರಿದ ವ್ಯಕ್ತಿಗಳು ಅನುಸರಿಸುತ್ತಿರುವ ಧರ್ಮಕ್ಕೆ ಯಾವುದೇ ರೀತಿಯಲ್ಲಿ ಅಪಮಾನ ಮಾಡುವ ದುರುದ್ದೇಶದಿಂದ ಪೂಜಾಸ್ಥಳಕ್ಕೆ ಕ್ಷತಿಯುಂಟು ಮಾಡುವುದಾಗಲಿ ಅಥವಾ ಅದನ್ನು ಅಪವಿತ್ರಗೊಳಿಸುವ ಕೃತ್ಯವಾಗಲೀ ಶಿಕ್ಷಾರ್ಹ ಅಪರಾಧವಾಗಿರುತ್ತದೆ. ಈ ಪ್ರಕಾರ ಯಾರಾದರೂ ಯಾವುದೇ ವರ್ಗಕ್ಕೆ ಸೇರಿದ ವ್ಯಕ್ತಿಗಳ ಧರ್ಮಕ್ಕೆ ಅಪಮಾನ ಮಾಡುವ ದುರುದ್ದೇಶದಿಂದ ಯಾವುದೇ ಪೂಜಾ ಸ್ಥಳವನ್ನು ಅಥವಾ ಅವರು ಪವಿತ್ರವೆಂದು ಭಾವಿಸಿರುವ ಯಾವುದೇ ವಸ್ತುವನ್ನು ನಾಶಪಡಿಸಿದರೆ, ಹಾನಿಗೊಳಿಸಿದರೆ, ಅಥವಾ ಅಪವಿತ್ರಗೊಳಿಸಿದರೆ ಅಥವಾ ಆ ರೀತಿಯ ನಾಶ, ಹಾನಿ ಅಥವಾ ಅಪವಿತ್ರತೆಯು ತಮ್ಮ ಧರ್ಮಕ್ಕೆ ಅಪಮಾನಕರವೆಂದು ಅಂತಹ ವ್ಯಕ್ತಿಗಳ ವರ್ಗವು ಪರಿಗಣಿಸುವ ಸಂಭವವಿದೆಯೆಂದು ಗೊತ್ತಿದ್ದೂ, ತಿಳಿದೂ ಆ ರೀತಿಯ ಅಪರಾಧ ಮಾಡಿದರೆ, ಅಪರಾಧಗೈದ ವ್ಯಕ್ತಿಯು ಎರಡು ವರ್ಷಗಳವರೆಗಿನ ಅವಧಿಯ ಜೈಲು ಶಿಕ್ಷೆ ಅಥವಾ ಜುಲ್ಮಾನೆಯಿಂದ ಅಥವಾ ಎರಡರಲ್ಲೊಂದರ ಪೈಕಿ ಜೈಲು ಶಿಕ್ಷೆಯಿಂದ ಅಥವಾ ಜುಲ್ಮಾನೆಯಿಂದ ಅಥವಾ ಅವೆರಡರಿಂದಲೂ ನ್ಯಾಯಾಲಯದಿಂದ ದಂಡಿತನಾಗಬೇಕಾಗುತ್ತದೆ. ಯಾವುದೇ ವರ್ಗಕ್ಕೆ ಸೇರಿದ ವ್ಯಕ್ತಿಗಳ ಧರ್ಮವನ್ನು ಅಥವಾ ಅವರ ಮತೀಯ ನಂಬಿಕೆಗಳನ್ನು ಅಪಮಾನಗೊಳಿಸಿ ಅವರ ಮತೀಯ ಭಾವನೆಗಳಿಗೆ ಧಕ್ಕೆ ಅಥವಾ ಆಘಾತಗಳನ್ನುಂಟು ಮಾಡುವ ದುರುದ್ದೇಶದಿಂದ ಬುದ್ಧಿಪೂರ್ವಕವಾಗಿ ಮತ್ತು ದ್ವೇಷ ಭಾವನೆಯಿಂದ ಮಾಡಿದ ಕೃತ್ಯಗಳು ಅಂದರೆ ಮೌಖಿಕವಾಗಿ ಅಥವಾ ಲಿಖಿತ ಶಬ್ಧಗಳಿಂದ ಅಥವಾ ಚಿಹ್ನೆಗಳಿಂದ ಅಥವಾ ದೃಶ್ಯ ನಿರೂಪಣೆಗಳಿಂದ ಅಥವಾ ಬೇರೆ ವಿಧದಿಂದ ಆ ವರ್ಗದ ಧರ್ಮಕ್ಕೆ ಅಥವಾ ಮತೀಯ ನಂಬಿಕೆಗಳಿಗೆ ಅಪಮಾನ ಮಾಡಿದರೆ ಅಥವಾ
ಅಪಮಾನ ಮಾಡಲು ಪ್ರಯತ್ನಿಸಿದರೆ, ನೇರವಾಗಿ ಮತ್ತು ಪರೋಕ್ಷವಾಗಿ ಅಪರಾಧಗೈದ ವ್ಯಕ್ತಿಯು ಮೂರು ವರ್ಷಗಳವರೆಗಿನ ಅವಧಿಯ ಜೈಲು ಶಿಕ್ಷೆ ಅಥವಾ ಜುಲ್ಮಾನೆಯಿಂದ ಅಥವಾ ಎರಡರಲ್ಲೊಂದರ ಪೈಕಿ ಜೈಲು ಶಿಕ್ಷೆಯಿಂದ ಅಥವಾ
ಜುಲ್ಮಾನೆಯಿಂದ ಅಥವಾ ಅವೆರಡರಿಂದಲೂ ನ್ಯಾಯಾಲಯದಿಂದ ದಂಡಿತನಾಗಬೇಕಾಗುತ್ತದೆ. ಯಾವುದೇ ಧರ್ಮಕ್ಕೆ ಸಂಬಂಧಪಟ್ಟ ಮತೀಯ ಪೂಜೆಯಲ್ಲಿ ಅಥವಾ ಧಾರ್ಮಿಕ ಕಾರ್ಯದಲ್ಲಿ ವಿಧಿಬದ್ಧವಾಗಿ ನಿರತವಾದ ಯಾವುದೇ
ಕೂಟಕ್ಕೆ, ಯಾವುದೇ ವ್ಯಕ್ತಿಯು ಸ್ವಯಿಚ್ಛೆಯಿಂದ ದುರುದ್ದೇಶ ಪೂರ್ವಕವಾಗಿ ಅಡ್ಡಿ ಆತಂಕ ಅಥವಾ ತೊಂದರೆ ಉಂಟುಮಾಡಿದರೆ ಈ ಬಗ್ಗೆ ನೇರವಾಗಿ ಮತ್ತು ಪರೋಕ್ಷವಾಗಿ ಅಪರಾಧಗೈದ ವ್ಯಕ್ತಿಯು ಒಂದು ವರ್ಷದವರೆಗಿನ ಅವಧಿಯ ಜೈಲು ಶಿಕ್ಷೆ ಅಥವಾ ಜುಲ್ಮಾನೆಯಿಂದ ಅಥವಾ ಎರಡರಲ್ಲೊಂದರ ಪೈಕಿ ಜೈಲು ಶಿಕ್ಷೆಯಿಂದ ಅಥವಾ ಜುಲ್ಮಾನೆಯಿಂದ ಅಥವಾ ಅವೆರಡರಿಂದಲೂ ನ್ಯಾಯಾಲಯದಿಂದ ದಂಡಿತನಾಗಬೇಕಾಗುತ್ತದೆ. ಯಾವುದೇ ವ್ಯಕ್ತಿಯ ಧಾರ್ಮಿಕ ಭಾವನೆಯನ್ನು ನೋಯಿಸುವ, ಅಥವಾ ಯಾವನೇ ವ್ಯಕ್ತಿಯ ಮತವನ್ನು ಅಪಮಾನಗೊಳಿಸುವ ಉದ್ದೇಶದಿಂದ ಅಥವಾ ಆ ಮೂಲಕ ಯಾವನೇ ವ್ಯಕ್ತಿಯ ಭಾವನೆಗಳಿಗೆ ನೋವುಂಟಾಗುವ ಅಥವಾ ಯಾವುದೇ ವ್ಯಕ್ತಿಯ ಮತಕ್ಕೆ ಅಪಮಾನವಾಗುವ ಸಂಭವವಿದೆಯೆಂದು ತಿಳಿದಾಗಿಯೂ ಯಾವುದೇ ಪೂಜಾ ಸ್ಥಳದಲ್ಲಿ ಅಥವಾ ಸ್ಮಶಾನದಲ್ಲಿ ಅಥವಾ ಶವ ಸಂಸ್ಕಾರಗಳಿಗಾಗಿ ಅಥವಾ ಮೃತನ ಅವಶೇಷಗಳನ್ನು ಇಡುವುದಕ್ಕಾಗಿ ಪ್ರತ್ಯೇಕವಾಗಿಟ್ಟ ಯಾವುದೇ ಸ್ಥಳದಲ್ಲಿ
ಅತಿಕ್ರಮ ಪ್ರವೇಶ ಮಾಡಿದರೆ, ಅಥವಾ ಮಾನವ ಮೃತದೇಹಕ್ಕೆ ಅವಮರ್ಯಾದೆ ಮಾಡಿದರೆ ಅಥವಾ ಶವ ಸಂಸ್ಕಾರಗಳನ್ನು ಮಾಡಲು ಸೇರಿದ ವ್ಯಕ್ತಿಗಳಿಗೆ ತೊಂದರೆಯುನ್ನುಂಟುಮಾಡಿದರೆ ಈ ರೀತಿಯಾಗಿ ಅಪರಾಧ ಉಂಟುಮಾಡಿರುವ ವ್ಯಕ್ತಿಯು ಒಂದು ವರ್ಷಗಳವರೆಗಿನ ಅವಧಿಯ ಜೈಲು ಶಿಕ್ಷೆ ಅಥವಾ ಜುಲ್ಮಾನೆಯಿಂದ ಅಥವಾ ಎರಡರಲ್ಲೊಂದರ ಪೈಕಿ ಜೈಲು ಶಿಕ್ಷೆಯಿಂದ ಅಥವಾ ಜುಲ್ಮಾನೆಯಿಂದ ಅಥವಾ ಅವೆರಡರಿಂದಲೂ ನ್ಯಾಯಾಲಯದಿಂದ ದಂಡಿತನಾಗಬೇಕಾಗುತ್ತದೆ. ಯಾವನೇ ವ್ಯಕ್ತಿಯ ಮತೀಯ ಭಾವನೆಗಳಿಗೆ ನೋವುಂಟುಮಾಡುವ ಉದ್ದೇಶದಿಂದ ಆ ವ್ಯಕ್ತಿಗೆ ಕೇಳಿಸುವ ಹಾಗೆ, ಯಾವುದೇ ಪದವನ್ನು ಉಚ್ಚರಿಸಿದರೆ ಅಥವಾ ಯಾವುದೇ ಶಬ್ಧವನ್ನು ಮಾಡಿದರೆ, ಅಥವಾ ಅವನಿಗೆ ಕಾಣುವಂತೆ ಯಾವುದೇ ಅಂಗ ಸಂಜ್ಞೆಯನ್ನು ಮಾಡಿದರೆ ಅಥವಾ ಅವನಿಗೆ ಕಾಣುವಂತೆ ಯಾವುದೇ ವಸ್ತುವನ್ನು ಇಟ್ಟರೆ ಈ ರೀತಿಯಾಗಿ ಅಪರಾಧ ಉಂಟುಮಾಡಿರುವ ವ್ಯಕ್ತಿಯು ಒಂದು ವರ್ಷಗಳವರೆಗಿನ ಅವಧಿಯ ಜೈಲು ಶಿಕ್ಷೆ
ಅಥವಾ ಜುಲ್ಮಾನೆಯಿಂದ ಅಥವಾ ಎರಡರಲ್ಲೊಂದರ ಪೈಕಿ ಜೈಲು ಶಿಕ್ಷೆಯಿಂದ ಅಥವಾ ಜುಲ್ಮಾನೆಯಿಂದ ಅಥವಾ ಅವೆರಡರಿಂದಲೂ ನ್ಯಾಯಾಲಯದಿಂದ ದಂಡಿತನಾಗಬೇಕಾಗುತ್ತದೆ.

ಕೆ. ವಿಜೇಂದ್ರ ಕುಮಾರ್, ಹಿರಿಯ ನ್ಯಾಯವಾದಿ, ಕಾರ್ಕಳ.
ಮೊ: 98452 32490/96116 82681











































error: Content is protected !!
Scroll to Top