ಶೋಷಿತರ ಬದುಕಿನ ಬೆಳಕು ನಾರಾಯಣ ಗುರು

ಜಾತೀಯತೆ, ಅಸ್ಪೃಶ್ಯತೆ, ಜೀತ ಪದ್ಧತಿ, ಗುಲಾಮಗಿರಿ ಮೂಢನಂಬಿಕೆ ಹಾಗೂ ಜಮೀನ್ದಾರಿ ಪದ್ಧತಿ ಎಂಬ ಅನಿಷ್ಟಗಳು 19ನೇ ಶತಮಾನದಲ್ಲಿ ವ್ಯಾಪಕವಾಗಿ ಹರಡಿ ಕೆಳವರ್ಗದ ಜನ ಸಮೂಹವನ್ನು ಬೆಂಬಿಡದೆ ಕಾಡುತ್ತಿತ್ತು. ಅದರಲ್ಲೂ ನೆರೆಯ ಕೇರಳದಲ್ಲಿ ಇಡೀ ಭಾರತದಲ್ಲೇ ಕಂಡರಿಯದ ಅಮಾನುಷ ವರ್ತನೆ ಜನ ಸಮೂಹದ ಮೇಲೆ ಹೇರಲಟ್ಟಿದ್ದು, ಅಸ್ಪಶ್ಯರ ಮಕ್ಕಳು ಹೂ ಮುಡಿಯುವಂತಿರಲಿಲ್ಲ. ತೊಡುವಂತಿರಲಿಲ್ಲ. ಮೇಲ್ವರ್ಗದವರ ಮುಂದೆ ಅರೆ ನಗ್ನವಾಗಿ ನಿಲ್ಲುವುದರ ಜತೆಗೆ ತಮ್ಮ ನೆರಳು ಕೂಡ ಅವರ ಮೇಲೆ ಬೀಳದಂತೆ ನಡೆಯಬೇಕಾಗಿತ್ತು. ದೇವಾಲಯಕ್ಕೆ ಪ್ರವೇಶ ಇರಲಿಲ್ಲ. ಸಾರ್ವಜನಿಕವಾಗಿ ನೀರು ಕುಡಿಯುವಂತಿರಲಿಲ್ಲ. ಹೊಟ್ಟೆಗೆ ಹಿಟ್ಟಿಲ್ಲದೆ ಬಡತನದಿಂದ ಸಾಯುತ್ತಿದ್ದವರಿಗೆ ವಿವಿಧ ತೆರಿಗೆಗಳನ್ನು ವಿಧಿಸಿ ಬದುಕುವ ಹಕ್ಕನ್ನು ಕಸಿದುಕೊಳ್ಳಲಾಗಿತ್ತು. ಅದರಲ್ಲೂ ಕೆಳವರ್ಗದ ಸ್ತ್ರೀಯರ ಮೇಲೆ ವಿಧಿಸುತ್ತಿದ್ದ ಮುಳಕರಂ ಎನ್ನುವ ತೆರಿಗೆ ಅಂದಿನ ವ್ಯವಸ್ಥೆಯ ಕ್ರೌರ್ಯವನ್ನು ತಿಳಿಸುತ್ತದೆ. ಸ್ತ್ರೀಯರು ತಮ್ಮ ಎದೆಯ ಗಾತ್ರಕ್ಕೆ ಸರಿಯಾಗಿ ತೆರಿಗೆ ಕಟ್ಟಬೇಕಾದ ಹೀನಾಯ ಪರಿಸ್ಥಿತಿ ಇದಾಗಿತ್ತು. ಇಂತಹ ಕ್ರೌರ್ಯದ ವ್ಯವಸ್ಥೆಯಲ್ಲಿ ಅವತಾರ ಪುರುಷರಂತೆ 1856, ಸೆ.10 ರಂದು ಕೇರಳದ ತಿರುವನಂತಪುರದ ಚಂಬಳತಿ ಎಂಬಲ್ಲಿ ಕುಟ್ಟಿ ಅಮ್ಮಾಳ್ ಎಂಬವರ ಗರ್ಭದಲ್ಲಿ ನಾರಾಯಣ ಗುರುಗಳು ಜನ್ಮ ತಾಳುತ್ತಾರೆ. ತಂದೆ ಕೃಷಿಕರಾಗಿದ್ದು ಖಗೋಳ ಶಾಸ್ತ್ರ ಹಾಗೂ ಆಯುರ್ವೇದದಲ್ಲಿ ತಜ್ಞರಾಗಿದ್ದರು. ಇದು ನಾರಾಯಣ ಗುರುಗಳಿಗೆ ಜ್ಞಾನ ಸಂಪಾದಿಸಲು ಅನುಕೂಲವಾಗುತ್ತದೆ. ಬಾಲ್ಯದಿಂದಲೇ ಕೆಳವರ್ಗದವರನ್ನು ನಡೆಸಿಕೊಳ್ಳುವ ರೀತಿಯನ್ನು ಅರಿತು ನಾರಾಯಣ ಗುರುಗಳು ಇದರ ವಿರುದ್ಧ ಧ್ವನಿ ಎತ್ತಿ ಅವರಿಗೆ ತನ್ನಿಂದಾದ ಸಹಾಯವನ್ನು ಮಾಡುತ್ತಾರೆ. ಸಂಸ್ಕೃತ, ತಮಿಳು, ಮಲೆಯಾಳಂ ಮೂಲ ಗ್ರಂಥಗಳನ್ನು ತೈಕಾಡ್‌ ಅಯ್ಯ ಸ್ವಾಮಿ ಮರ್ಗದರ್ಶನದಲ್ಲಿ ಯೋಗ ಮಾರ್ಗ, ಸಿದ್ದ ಮಾರ್ಗ, ಜ್ಞಾನ ಮಾರ್ಗದ, ಜ್ಞಾನ ಪಡೆದು ಮರುತ್ವಮಲೆ ಗುಡ್ಡೆಯಲ್ಲಿ ಧ್ಯಾನ ಮಾಡಿ ಬ್ರಹ್ಮದರ್ಶನ ಪಡೆದು ಬ್ರಹ್ಮಶ್ರೀ ಆಗುತ್ತಾರೆ.
ಜಾತಿ ಎಂಬ ಬಂಧನದ ಸಂಕೋಲೆಯನ್ನು ಶಾಂತಿ ಎಂಬ ಸೂತ್ರದಿಂದ ಬಿಡಿಸಲು ಪ್ರಯತ್ನಿಸುತ್ತಾರೆ. ಮನುಷ್ಯ ಮನುಷ್ಯನ ನಡುವೆ ಸಮಾನತೆ, ನ್ಯಾಯ ಹಾಗೂ ಸ್ವಾತಂತ್ರ್ಯವನ್ನು ತರಲು ತನ್ನದೇ ಆದ ರಕ್ತ ರಹಿತ ಕ್ರಾಂತಿಗೆ ಮುನ್ನುಡಿ ಬರೆದರು. ದೇವಸ್ಥಾನಗಳ ಪ್ರವೇಶ ನಿರಾಕರಿಸಲ್ಪಟ್ಟ ಕೆಳವರ್ಗದ ಜನರಿಗಾಗಿ ನೆಯ್ಯಾರ್ ನದಿದಂಡೆಯಲ್ಲಿ ಶಿವರಾತ್ರಿಯಂದು ತಿರುವನಂತಪುರದಲ್ಲಿ ಶಿವನ ಮೊದಲ ದೇವಾಲಯವನ್ನು ನಾರಾಯಣ ಗುರುಗಳು ಸ್ಥಾಪಿಸಿ ಶಿವಲಿಂಗವನ್ನು ಸ್ವತಃ ಪ್ರತಿಷ್ಠಾಪಿಸಿದರು. ಈ ಬಗ್ಗೆ ನಂಬೂದರಿ ಬ್ರಾಹ್ಮಣರು ನಿನಗೆ ಮೂರ್ತಿ ಪ್ರತಿಷ್ಠಾಪನೆ ಮಾಡಲು ಯಾವ ಹಕ್ಕಿದೆ ಎಂದು ಪ್ರಶ್ನಿಸಿದಾಗ ನಾನು ಪ್ರತಿಷ್ಠೆ ಮಾಡಿದ್ದು ಮೇಲ್ಜಾತಿಯ ಶಿವನನ್ನು ಅಲ್ಲ ಸ್ಮಶಾನ ವಾಸಿ, ಚಿತೆಯ ಭಸ್ಮವನ್ನು ಧಾರಣೆ ಮಾಡಿ, ಮೃಗದ ಚರ್ಮವನ್ನು ಧರಿಸಿದ ಈಳವ ಈಸರ ದೇವರನ್ನು. ಬ್ರಹ್ಮ ಜ್ಞಾನ ಪಡೆದ ಯಾರು ಕೂಡ ಅವರ ದೇವರನ್ನು ಪ್ರತಿಷ್ಠೆ ಮಾಡಲು ಯೋಗ್ಯರಾಗುತ್ತಾರೆ ಎಂದು ದಿಟ್ಟತನದಿಂದ ಉತ್ತರಿಸುತ್ತಾರೆ. ಇನ್ನೊಂದು ದೇವಸ್ಥಾನ ಸ್ಥಾಪಿಸಿ ಅದರಲ್ಲಿ ವಿಗ್ರಹದ ಬದಲು ಕನ್ನಡಿಯನ್ನು ಪ್ರತಿಷ್ಠಾಪಿಸಿ ಕನ್ನಡಿಯಲ್ಲಿ ತಮ್ಮನ್ನೇ ತಾವು ನೋಡಿಕೊಳ್ಳುವ ಜನರಿಗೆ ಇಲ್ಲಿ ಯಾರೂ ಮೇಲಲ್ಲ ಯಾರೂ ಕೀಳಲ್ಲ ಎಲ್ಲರೂ ಸಮಾನರು. ದೇವರನ್ನು ಹುಡುಕಬೇಡ ಆತ ನಿನ್ನಲ್ಲಿಯೇ ಇದ್ದಾನೆ ಎಂಬ ಸತ್ಯದ ಅರಿವು ಮೂಡಿಸಲು ಪ್ರಯತ್ನ ಮಾಡಿದರು. ಕೆಳವರ್ಗದವರಿಗಾಗಿಯೇ ಹಲವಾರು ದೇವಸ್ಥಾನ ಸ್ಥಾಪಿಸಿದರು.
ತಿಳಿವಳಿಕೆಯೇ ಜ್ಞಾನ, ಜ್ಞಾನದ ಅನುಭವವೇ ದೇವರು. ವಿದ್ಯೆಯಿಂದ ಸ್ವತಂತ್ರರಾಗಿ ಸಂಘಟನೆಯಿಂದ ಬಲಯುತರಾಗಿ ಇರುವುದೊಂದೆ ಆತ್ಮ ಅದು ಎಲ್ಲಾ ಜೀವಿಗಳಲ್ಲಿ ಹಂಚಿಹೋಗಿದೆ. ನಿನ್ನ ಆತ್ಮಕ್ಕೂ ಪರರ ಆತ್ಮಕ್ಕೂ ವ್ಯತ್ಯಾಸವಿಲ್ಲ. ಒಂದೇ ಜಾತಿ, ಒಂದೇ ಧರ್ಮ, ಒಂದೇ ದೇವರು ಎಂಬ ವಿಶ್ವ ಸಂದೇಶವನ್ನು ಸಾರಿದರು. ಶೋಷಿತರ ಪರವಾಗಿ ನಿಲ್ಲುವುದರೊಂದಿಗೆ ಮೂಢನಂಬಿಕೆಗಳು ಅರ್ಥವಿಲ್ಲದ ಆಚರಣೆಗಳನ್ನು ತೊಡೆದು ಹಾಕಿ ಶೋಷಿತರನ್ನು ಶೈಕ್ಷಣಿಕವಾಗಿ ಬಲಗೊಳಿಸುವ ಪ್ರಯತ್ನ ಮಾಡಿದರು. ದುಶ್ಚಟಗಳನ್ನು ಬಿಟ್ಟು ಶುದ್ಧ ಬದುಕು ನಡೆಸುವಂತೆ ಸಮಾಜಕ್ಕೆ ಕರೆ ಕೊಟ್ಟರು. ಸಮಾಜದ ವರ್ಗಗಳನ್ನು ಒಂದೆಡೆ ಸೇರಿಸಿ ಮಿಶ್ರ ಭೋಜನ ಎಂಬ ಉತ್ತಮ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತಂದು ವೀರ ಸಂತ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಹಿಂದು ಧರ್ಮದ ಮೇಲ್ವರ್ಗದವರ ದಬ್ಬಾಳಿಕೆಗೆ ರೋಸಿ ಹೋಗಿ ಬೇರೆ ಧರ್ಮಕ್ಕೆ ಮತಾಂತರವಾಗುವುದನ್ನು ತನ್ನ ಕಾರ್ಯಕ್ರಮಗಳ ಮೂಲಕ ತಡೆಯುವ ಪ್ರಯತ್ನ ಮಾಡಿದರು. ಇವರು ಮುಂಚೂಣಿಯಲ್ಲಿ ನಿಂತು ನಡೆಸಿದ ಚಳವಳಿ ಹಿಂದುಳಿದವರಿಗೆ ಮೇಲ್ಮುಖವಾಗಿ ಸಾಮಾಜಿಕ ಚಲನೆಯನ್ನು ಒದಗಿಸಿಕೊಟ್ಟಿತು ಹಾಗೂ ಅನ್ಯಾಯದ ವಿರುದ್ಧ ನಡೆದ ಚಳವಳಿಯಾಗಿ ಸಮಾಜ ವಿಜ್ಞಾನದಿಂದ ಬಣ್ಣಿಸಲ್ಪಟ್ಟಿತು.
1922 ನವೆಂಬರ್‌ನಲ್ಲಿ ಶಿವಗಿರಿಯ ಗುರುಗಳ ಆಶ್ರಮಕ್ಕೆ ಭೇಟಿ ನೀಡಿದ ರವೀಂದ್ರನಾಥ್ ಠಾಗೂರ್ ಸ್ವಾಮಿ ನಾರಾಯಣ ಗುರುಗಳ ಆಧ್ಯಾತ್ಮಿಕ ಸಾಧನೆಯೊಂದಿಗೆ ಅವರೊಂದಿಗೆ ಸಮಾನವಾಗಿರುವ ಇನ್ನೊಬ್ಬ ವ್ಯಕ್ತಿಯನ್ನು ನಾನು ಎಂದಿಗೂ ಕಾಣಲಿಲ್ಲ ಎಂಬ ಹೇಳಿಕೆ ಗುರುಗಳ ಜ್ಞಾನದ ಪ್ರಭಾವವನ್ನು ಸೂಚಿಸುತ್ತದೆ. ಶೋಷಿತರ ಹಿಂದುಳಿದ ವರ್ಗದವರ ಪಾಲಿಗೆ ಗುರುವಾಗಿ ಅಪಾರ ಸಾಧನೆ ಮಾಡಿದ ಮಹಾನ್ ಚೇತನ ಕೇರಳದ ಶಿವಗಿರಿಯಲ್ಲಿ 1928ರ, ಸೆ.20ರಂದು ಶಿವಗಿರಿಯಲ್ಲಿ ಅನಂತ ಲೀನವಾದರು.ಬ್ರಹ್ಮಶ್ರೀ ನಾರಾಯಣ ಗುರುಗಳ 169ನೇ ಜನ್ಮ ದಿನಾಚರಣೆಯ ಈ ಶುಭ ಸಂದರ್ಭದಲ್ಲಿ ಅವರ ಜಯಂತಿಯನ್ನು ಆಚರಿಸುವುದರೊಂದಿಗೆ ಸಮಾಜಕ್ಕೆ ಸಾರಿದ ಸಂದೇಶಗಳನ್ನು ಎಲ್ಲರೂ ತಿಳಿದುಕೊಳ್ಳಬೇಕಾಗಿದೆ. ಧರ್ಮ ಧರ್ಮಗಳ ಹಾಗೂ ಜಾತಿ ಜಾತಿಗಳ ನಡುವೆ ಸಾಮರಸ್ಯ ಸೌಹಾರ್ದತೆ ಹದಗೆಡುತ್ತಿರುವ ಇಂದಿನ ದಿನಗಳಲ್ಲಿ ಗುರುಗಳ ಮನುಷ್ಯ ಧರ್ಮದ ಸಂದೇಶ ಮಹತ್ವ ಪಡೆದಿದೆ.

ಅರುಣ್‌ ಪೂಜಾರಿ ಮಾಂಜ









































error: Content is protected !!
Scroll to Top