ಬೆಂಗಳೂರು : ಸರ್ಕಾರಕ್ಕೆ ಕೆಟ್ಟ ಹೆಸರು ತರಬೇಕು ಎನ್ನುವ ಉದ್ದೇಶದಿಂದ ಸುಖಾಸುಮ್ಮನೆ ಆರೋಪಗಳನ್ನು ಮಾಡಲಾಗುತ್ತಿದೆ ಎಂದು ಕೋಲಾರ ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ಹೇಳಿದರು. ಆರೋಪ ಮಾಡೋದು ದೊಡ್ಡ ಸಂಗತಿಯಲ್ಲ ಆದರೆ ಅದನ್ನು ಪ್ರೂವ್ ಮಾಡಬೇಕಾಗುತ್ತದೆ, ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣನವರು ತಾವು ಮಾಡಿರುವ ಅರೋಪಗಳಿಗೆ ಪುರಾವೆ ಒದಗಿಸದಿದ್ದರೆ ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ ಎಂದು ಸಚಿವ ವಿ. ಮುನಿರತ್ನ ಸುದ್ದಿವಾಹಿನಿಯೊಂದಿಗೆ ಮಾತನಾಡುತ್ತ ಹೇಳಿದರು.
ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಸರ್ಕಾರದ ಸಂಪೂರ್ಣ ವ್ಯವಸ್ಥೆಯೇ ಭ್ರಷ್ಟಾಚಾರದಲ್ಲಿ ಮುಳುಗಿದೆ. ಇಲ್ಲಿ ಮುಖ್ಯಮಂತ್ರಿಯಿಂದ ಹಿಡಿದು ಸಚಿವರುಗಳು, ಶಾಸಕರು ಪ್ರತಿಯೊಂದು ಇಲಾಖೆಯಲ್ಲಿಯೂ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಸರ್ಕಾರದ ಆಡಳಿತ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಈ ಬಗ್ಗೆ ಮತ್ತೊಮ್ಮೆ ಪ್ರಧಾನಿ ಮೋದಿಗೆ ಪತ್ರ ಬರೆಯುವುದಾಗಿ ಕೆಂಪಣ್ಣ ಗುಡಿಗಿದ್ದಾರೆ. ಕೋಲಾರ ಜಿಲ್ಲೆ ಉಸ್ತುವಾರಿ ಸಚಿವ ಮುನಿರತ್ನ ಅವರ ಹೆಸರನ್ನು ಮಾಧ್ಯಮಗಳ ಮುಂದೆ ಪ್ರಸ್ತಾಪಿಸಿರುವ ಗುತ್ತಿಗೆದಾರರ ಕೆಲಸ ಮಂಜೂರು ಆಗಬೇಕೆಂದರೆ ಲಂಚ ಕೊಡಬೇಕು, ಇಲ್ಲದಿದ್ದರೆ ಗುತ್ತಿಗೆ ರದ್ದು ಮಾಡಲಾಗುವುದು, ಹಣ ಕಲೆಕ್ಟ್ ಮಾಡಿ ತನ್ನಿ ಎಂದು ತೋಟಗಾರಿಕೆ ಸಚಿವ ಮುನಿರತ್ನ ನೇರವಾಗಿ ಬೆದರಿಕೆ ಹಾಕುತ್ತಾರೆ ಎಂದು ಕೆಂಪಣ್ಣ ದೂರಿದ್ದಾರೆ.
ಆರೋಪಗಳಿಗೆ ದಾಖಲೆಗಳನ್ನು ಒದಗಿಸದಿದ್ದರೆ ಕೆಂಪಣ್ಣ ವಿರುದ್ಧ ಮಾನನಷ್ಟ ಮೊಕದ್ದಮೆ : ವಿ. ಮುನಿರತ್ನ






















