ಕಾರ್ಕಳ : ಕಾರ್ಕಳ ಕಟ್ಟಿದ ಭೈರವ ಅರಸರು ಸಾಹಿತ್ಯಕ್ಕೂ ರಾಜಾಶ್ರಯ ನೀಡಿದ್ದರು. ಹೀಗಾಗಿ ರತ್ನಾಕರ ವರ್ಣಿಯಂತಹ ಮಹಾಕವಿ ಸಾಹಿತ್ಯ ರಚನೆ ಮಾಡುವಂತಾಯಿತು. ರತ್ನಾಕರ ವರ್ಣಿ 16 ನೇ ಶತಮಾನದಲ್ಲಿ ರಚಿಸಿದ ಕಾವ್ಯ ಇಂದಿಗೂ ಪ್ರಸ್ತುತ ಎಂದು ಕನ್ನಡ ಮತ್ತು ಸಂಸ್ಕೃತಿ, ಇಂಧನ ಸಚಿವ ವಿ. ಸುನೀಲ್ ಕುಮಾರ್ ಹೇಳಿದರು.
ಅವರು ಭಾನುವಾರ ದಾನಶಾಲೆ ಬಾಹುವಲಿ ಪ್ರವಚನ ಮಂದಿರದಲ್ಲಿ ಕಾರ್ಕಳದ ಜೈನಧರ್ಮ ಜೀರ್ಣೋದ್ಧಾರಕ ಸಂಘ, ಭಾರತೀಯ ಜೈನ್ ಮಿಲನ್ ಸಹಯೋಗದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಮಹಾಕವಿ ರತ್ನಾಕರವರ್ಣಿ ಅಧ್ಯಯನ ಪೀಠ ಆಶ್ರಯದಲ್ಲಿ ನಡೆದ ಮಹಾಕವಿ ರತ್ನಾಕರವರ್ಣಿ ವಿರಚಿತ ಮಹಾಕಾವ್ಯ ‘ಭರತೇಶ ವೈಭವ’ದ ವಾಚನ – ವ್ಯಾಖ್ಯಾನ ಸಪ್ತಾಹದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಾಹಿತ್ಯದ ಮೇಲೆ ನಮ್ಮ ಸಮಾಜ ವಿಶೇಷ ಒಲವು ಹೊಂದಿದ್ದು, ಸಾಕಷ್ಟು ಪ್ರಭಾವ ಬೀರುತ್ತಿದೆ. ಕಾರ್ಕಳ ನೆಲದಲ್ಲಿ ಸಾಹಿತ್ಯದ ಬೇರುಗಳು ಗಟ್ಟಿಯಾಗಿ ಬೇರೂರಿದೆ. ಭರತೇಶ ಕಾವ್ಯದಲ್ಲಿ ರತ್ನಾಕರ ವರ್ಣಿ ಶಾಂತಿಯನ್ನೇ ಸಾರಿದ್ದು, ತುಳುನಾಡಿನ ಯಕ್ಷಗಾನ, ಭೂತಕೋಲಗಳನ್ನೂ ವರ್ಣಿಸಿರುವುದು ನಮ್ಮಲ್ಲಿ ಅಭಿಮಾನ ಮೂಡಿಸುತ್ತಿದೆ ಎಂದು ಸುನೀಲ್ ಕುಮಾರ್ ಹೇಳಿದರು. ಭರತೇಶ ವೈಭವದಂತಹ ವಾಚನ – ವ್ಯಾಖ್ಯಾನ ಪ್ರತಿವರ್ಷ ನಾಡಿನ ಬೇರೆ ಬೇರೆ ಕಡೆಗಳಲ್ಲಿ ನಡೆಯಲಿ ಎಂದು ಸುನೀಲ್ ಕುಮಾರ್ ಆಶಿಸಿದರು.
ಮಂಗಳೂರು ವಿಶ್ವವಿದ್ಯಾನಿಲಯದ ಕುಲಸಚಿವ ಡಾ. ಸಿ.ಕೆ. ಕಿಶೋರ್ ಕುಮಾರ್, ವಕೀಲ ಎಂ. ಕೆ. ಸುವೃತ್ ಕುಮಾರ್, ಮಂಗಳೂರು ವಿವಿ ಕುಲಸಚಿವ ಪ್ರೊ. ಪಿ. ಎಲ್. ಧರ್ಮ, ಕಾರ್ಕಳ ಜೈನ್ ಮಿಲನ್ ಅಧ್ಯಕ್ಷೆ ಮಾಲತಿ ವಸಂತ್‌ರಾಜ್ ಮಾತನಾಡಿದರು.
ಸನ್ಮಾನ
ಕಾವ್ಯ ವಾಚನ ನಡೆಸಿದ ಭಾಗವತ ಪಟ್ಲ ಸತೀಶ್ ಶೆಟ್ಟಿ, ವಾಖ್ಯಾನ ಮಾಡಿದ ವಿದ್ವಾಂಸ ಮುನಿರಾಜ ರೆಂಜಾಳ, ಹಿಮ್ಮೇಳದಲ್ಲಿ ಸಹಕರಿಸಿದ ಚಂದ್ರಶೇಖರ ಆಚಾರ್ಯ ಅವರನ್ನು ಸಚಿವ ಸುನೀಲ್ ಕುಮಾರ್ ಸನ್ಮಾನಿಸಿದರು.

ಪುಸ್ತಕ ಬಿಡುಗಡೆ ಪ್ರೊ. ಸೋಮಣ್ಣ ಸಂಪಾದಿತ ಕೃತಿ ಭರತೇಶ ವೈಭವ ಜಿಜ್ಞಾಸೆ ಪುಸ್ತಕವನ್ನು ಇದೇ ಸಂದರ್ಭದಲ್ಲಿ ಬಿಡುಗಡೆಗೊಳಿಸಲಾಯಿತು.
ಮಂಗಳೂರು ವಿವಿ ಸಿಂಡಿಕೇಟ್ ಸದಸ್ಯ ಮೋಹನ್ ಪಡಿವಾಳ್ ಸ್ವಾಗತಿಸಿದರು. ಪೀಠದ ಸಂಯೋಜಕ ಪ್ರೊ. ಸೋಮಣ್ಣ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶಿಕ್ಷಕ ಗಣೇಶ್ ಜಾಲ್ಸೂರು ನಿರೂಪಿಸಿ, ಅಂಡಾರು ಕೆ. ಮಹಾವೀರ ಹೆಗ್ಡೆ ವಂದಿಸಿದರು. ಕಸಾಪ ತಾಲೂಕು ಘಟಕದ ಅಧ್ಯಕ್ಷ ಕೊಂಡಳ್ಳಿ ಪ್ರಭಾಕರ ಶೆಟ್ಟಿ ಸಹಕರಿಸಿದರು.






































































