ಕಾರ್ಕಳ: ಈಗಾಗಲೇ ಕಳೆದೆರಡು ವರ್ಷಗಳಿಂದ ಕಾರ್ಕಳ ಕಜೆ ಹಾಗೂ ಕಾರ್ಕಳದ ಬಿಳಿಬೆಂಡೆ ಬ್ರಾಂಡ್ ಮಾಡಿದ್ದೇವೆ. ಇದರೊಂದಿಗೆ ಕಾರ್ಕಳ ಕ್ಷೇತ್ರವನ್ನೂ ಬ್ರಾಂಡ್ ಮಾಡುವ ಪ್ರಯತ್ನ ಸಾಗುತ್ತಿದೆ ಎಂದು ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖಾ ಸಚಿವ ವಿ. ಸುನಿಲ್ ಕುಮಾರ್ ಹೇಳಿದರು.
ಅವರು ಭಾನುವಾರ ತೋಟಗಾರಿಕಾ ಇಲಾಖೆ, ಕಾರ್ಕಳ ಕಾರ್ಯನಿರತ ಪತ್ರಕರ್ತರ ಸಂಘ, ರೈತ ಉತ್ಪಾದಕ ಕಂಪೆನಿ ಹಾಗೂ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ ಇವುಗಳ ಸಂಯುಕ್ತ ಆಶ್ರಯದಲ್ಲಿ ಕಾರ್ಕಳ ಎಪಿಎಂಸಿ ಆವರಣದಲ್ಲಿ ಆಯೋಜಿಸಿದ ‘ನಮ್ಮ ಬೆಳೆ ನಮ್ಮ ಬ್ರಾಂಡ್- ಕಾರ್ಕಳ ಬಿಳಿ ಬೆಂಡೆ’ ಬೀಜ ವಿತರಣೆ ಹಾಗೂ ವಿಚಾರ ವಿನಿಮಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ರಾಜ್ಯದಲ್ಲಿ ಅತೀ ಹೆಚ್ಚು ಕಿಂಡಿ ಅಣೆಕಟ್ಟುಗಳು ಕಾರ್ಕಳ ತಾಲ್ಲೂಕಿನಲ್ಲಾಗಿವೆ. ಕಾರ್ಕಳದಲ್ಲಿ 9 ದಿನ ನಡೆದ ಕಾರ್ಕಳ ಉತ್ಸವ ರಾಜ್ಯದಲ್ಲಿ ಈತನಕ ಎಲ್ಲೂ ನಡೆದಿಲ್ಲ. ಕಾರ್ಕಳ ರಾಜ್ಯದ ಗಮನ ಸೆಳೆದಿದೆ. ಮೂಲಸೌಕರ್ಯ ಒದಗಿಸಿಕೊಡಲಾಗಿದೆ. ಸ್ವರ್ಣ ಕಾರ್ಕಳದ ಪರಿಕಲ್ಪನೆಯಲ್ಲಿ ಪ್ರಧಾನಿ ಮೋದಿ ಆಶಯದಂತೆ ರೈತರ ಆದಾಯ ದ್ವಿಗುಣಗೊಳಿಸುವ ಪ್ರಯತ್ನಕ್ಕೆ ಎಲ್ಲರ ಸಹಕಾರ ಅಗತ್ಯವಾಗಿದೆ. ಪ್ರವಾಸೋದ್ಯಮ ದೃಷ್ಟಿಯಿಂದಲೂ ಕಾರ್ಕಳ ಬೆಳೆಯುತ್ತಿದ್ದು ಬೈಲೂರಿನಲ್ಲಿ ಪರಶುರಾಮ ಥೀಂ ಪಾರ್ಕ್‌ನ ಅರ್ಧದಷ್ಟು ಕಾಮಗಾರಿ ಆಗಿದೆ. ಇದು ಕಾರ್ಕಳದ ಮತ್ತೊಂದು ಹೆಗ್ಗಳಿಕೆಯಾಗಬೇಕು ಎಂದರು.
ಕಾರ್ಕಳ ಪತ್ರಕರ್ತರ ಸಂಘದ ಅಧ್ಯಕ್ಷ ಮೊಹಮ್ಮದ್ ಶರೀಫ್, ತೋಟಗಾರಿಕಾ ರೈತ ಉತ್ಪಾದಕ ಕಂಪೆನಿಯ ಅಧ್ಯಕ್ಷ ಅಂತೋನಿ ಡಿ ಸೋಜಾ ಮಾತನಾಡಿದರು. ಕಾರ್ಕಳ ಪುರಸಭಾಧ್ಯಕ್ಷೆ ಸುಮಾ ಕೇಶವ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪುರಸಭಾ ಉಪಾಧ್ಯಕ್ಷೆ ಪಲ್ಲವಿ ಪ್ರವೀಣ್, ರೈತ ಉತ್ಪಾದಕ ಕಂಪೆನಿಯ ಉಪಾಧ್ಯಕ್ಷ ಹರಿಶ್ಚಂದ್ರ ತೆಂಡೂಲ್ಕರ್, ಬ್ರಹ್ಮಾವರ ಕೃಷಿ ಸಂಶೋಧನಾ ಕೇಂದ್ರದ ವಿಜ್ಞಾನಿಗಳಾದ ಡಾ. ಲಕ್ಷಣ್ ಹಾಗೂ ಡಾ. ಧನಂಜಯ ಬಿ, ನಿರ್ದೇಶಕ ಹರೀಶ್ ಅಂಚನ್ ಮುಂತಾದವರು ಉಪಸ್ಥಿತರಿದ್ದರು. ಕಾರ್ಕಳ ಪತ್ರಕರ್ತರ ಸಂಘದ ಕೋಶಾಧಿಕಾರಿ ಬಾಲಕೃಷ್ಣ ಭೀಮಗುಳಿ ಸ್ವಾಗತಿಸಿದರು. ತೋಟಗಾರಿಕಾ ಇಲಾಖೆಯ ಜಿಲ್ಲಾ ಉಪನಿರ್ದೇಶಕಿ ಭುವನೇಶ್ವರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರೈತ ಉತ್ಪಾದಕ ಸಂಸ್ಥೆಯ ಸಿಇಓ ಪ್ರಮಿತ್ ಸುವರ್ಣ ನಿರೂಪಿಸಿದರು. ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಶ್ರೀನಿವಾಸ ರಾವ್ ವಂದಿಸಿದರು.
ಕಾರ್ಕಳವನ್ನೇ ಬ್ರಾಂಡ್ ಮಾಡುವ ಪ್ರಯತ್ನ – ಸುನೀಲ್ ಕುಮಾರ್




















