ಕಾರ್ಕಳ : ಸಚಿವ ಸುನೀಲ್ ಕುಮಾರ್ ಅವರು ಸರಕಾರದ ಮಟ್ಟದಲ್ಲಿ ನಡೆಸಿದ ಪ್ರಯತ್ನದ ಫಲವಾಗಿ ಇಂದು ಹಂತ ಹಂತವಾಗಿ ಡೀಮ್ಡ್ ಫಾರೆಸ್ಟ್ ವ್ಯಾಪ್ತಿಯಲ್ಲಿ ಮನೆ ಕಟ್ಟಿಕೊಂಡಿರುವ ಕುಟುಂಬಗಳಿಗೆ ಹಕ್ಕು ಪತ್ರ ದೊರೆಯುವಂತಾಗಿದೆ. ಆದರೆ, ಇಂತಹ ಗಂಭೀರ ವಿಷಯವನ್ನು ಕೇವಲವಾಗಿ ತೆಗೆದುಕೊಂಡಿರುವ ಕಾಂಗ್ರೆಸ್ ಪಕ್ಷ ಇಂದು ಪರೋಕ್ಷವಾಗಿ ಅಧಿಕಾರಿಗಳನ್ನು ಗುರಿಯಾಗಿಸಿ ಹಕ್ಕುಪತ್ರ ದೊರೆಯದಂತಹ ಪರಿಸ್ಥಿತಿ ನಿರ್ಮಾಣ ಮಾಡುತ್ತಿದೆ ಎಂದು ದುರ್ಗಾ ಗ್ರಾ.ಪಂ. ಅಧ್ಯಕ್ಷ ಸತೀಶ್ ನಾಯಕ್ ಆರೋಪಿಸಿದರು.
ನಾಚಿಕೆಗೇಡಿನ ಸಂಗತಿ
ಹಕ್ಕುಪತ್ರ ದೊರಕದಂತೆ ಮಾಡುವ ಕಾಂಗ್ರೆಸ್‌ನ ಈ ಹುನ್ನಾರ ನಿಜಕ್ಕೂ ನಾಚಿಕೆಗೇಡಿನ ಸಂಗತಿ. ಕಾಂಗ್ರೆಸ್ ತನ್ನ ಆಡಳಿತಾವಧಿಯಲ್ಲಿ ಈ ಸಮಸ್ಯೆಯನ್ನು ಪರಿಹರಿಸಲು ಯಾವೊಂದು ಪ್ರಯತ್ನ ನಡೆಸಿಲ್ಲ. ಈ ಬಗ್ಗೆ ಕಾಂಗ್ರೆಸ್‌ನವರು ಆತ್ಮಾವಲೋಕನ ಮಾಡಿಕೊಳ್ಳಲಿ. ಅದನ್ನು ಬಿಟ್ಟು ಅಧಿಕಾರಿಗಳ ದಿಕ್ಕು ತಪ್ಪಿಸುವ ಮೂಲಕ ಬಡವರ ಜೀವನದ ಜೊತೆ ಚೆಲ್ಲಾಟವಾಡುವ ಕಾರ್ಯವಾಗಬಾರದು ಎಂದು ಸತೀಶ್ ನಾಯಕ್ ಅಭಿಪ್ರಾಯಪಟ್ಟರು.
ಡೀಮ್ಡ್ ಸಮಸ್ಯೆ ಪರಿಹಾರವಾಗಿ 94 ಸಿ, 94 ಸಿಸಿ ನಮೂನೆಗಳ ಅಡಿಯಲ್ಲಿ ಹಕ್ಕುಪತ್ರ ದೊರಕುತ್ತಿರುವುದು ಮತ್ತು ಮುಂದಿನ ಹಂತವಾಗಿ ನಮೂನೆ 57 ರಲ್ಲಿ ಅರ್ಜಿ ಸ್ವೀಕಾರ ಪ್ರಕ್ರಿಯೆಯು ಪ್ರಾರಂಭವಾಗಿರುವುದನ್ನು ಸಹಿಸದ ಕಾಂಗ್ರೆಸ್ ಪಕ್ಷ ತನ್ನ ರಾಜಕೀಯ ಲಾಭಕ್ಕೋಸ್ಕರ ಗೊಂದಲವನ್ನುಂಟು ಮಾಡಿದೆ ಎಂದು ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.