ಮಾಧ್ಯಮದ ಮೂಲ ತಿರುಳು ಇಂದಿಗೂ ಉಳಿದಿದೆ – ಸುಚಿತ್ ಕೋಟ್ಯಾನ್
ಪತ್ರಕರ್ತರ ಸೇವೆ ಅನನ್ಯ – ಡಾ. ಪೀಟರ್ ಫೆರ್ನಾಂಡಿಸ್
ಕಾರ್ಕಳ : ಕಾಲಕಾಲಕ್ಕೆ ಮಾಧ್ಯಮದ ಸ್ವರೂಪ ಬದಲಾಗುತ್ತಿದ್ದಾರೂ ಮೂಲ ತಿರುಳು ಇಂದಿಗೂ ಉಳಿದಿದೆ ಎಂದು ಉಡುಪಿ ಎಂ.ಜಿ.ಎಂ. ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಪ್ರಾಧ್ಯಾಪಕ ಸುಚಿತ್ ಕೋಟ್ಯಾನ್ ಹೇಳಿದರು.
ಅವರು ಮಂಗಳವಾರ ಕ್ರೈಸ್ಟ್‌ಕಿಂಗ್ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಪತ್ರಕರ್ತರು ಸೂಕ್ಷ್ಮತೆಯನ್ನು ಗಮನಿಸಿ ವರದಿ ಮಾಡುತ್ತಾರೆ. ಅದರಂತೆ ವಿದ್ಯಾರ್ಥಿಗಳು ಕಲಿಕೆಯನ್ನು ಸೂಕ್ಷ್ಮವಾಗಿ ಗ್ರಹಿಸಬೇಕೆಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕ್ರೈಸ್ಟ್‌ಕಿಂಗ್ ಎಜುಕೇಶನ್ ಟ್ರಸ್ಟ್ ಸದಸ್ಯ ಡಾ. ಪೀಟರ್ ಫೆರ್ನಾಂಡಿಸ್, ಪತ್ರಕರ್ತರ ಮೇಲೆ ಸಮಾಜ ವಿಶೇಷ ಭರವಸೆ ಹೊಂದಿದೆ. ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ಹಿರಿದಾದ ಸೇವೆ ಸಲ್ಲಿಸುವ ಪತ್ರಕರ್ತರ ಪಾತ್ರ ಅನನ್ಯವಾದುದು ಎಂದರು.
ಇಂದಿನ ಡಿಜಿಟಲ್ ಮಾಧ್ಯಮದಲ್ಲಿ ಸುದ್ದಿಗಳು ಕ್ಷಣಾರ್ಧದಲ್ಲಿ ವಿಶ್ವದಾದ್ಯಂತ ಪಸರಿಸುತ್ತಿದೆ. ಪತ್ರಕರ್ತರ ಆತ್ಮಸ್ಥೈರ್ಯ ಕುಗ್ಗಿಸುವ ಕೆಲಸ ಸಮಾಜದಿಂದ ಆಗಬಾರದು ಎಂದರು.

ಸನ್ಮಾನ
ಪ್ರಜಾವಾಣಿ ಪತ್ರಿಕೆಯ ಹಿರಿಯ ವರದಿಗಾರ ಸಿದ್ಧಾಪುರ ವಾಸುದೇವ ಭಟ್ ಅವರನ್ನು ಇದೇ ಸಂದರ್ಭ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಪತ್ರಕರ್ತರಲ್ಲಿ ಸತ್ಯ, ಪ್ರಾಮಾಣಿಕತೆ, ವೃತ್ತಿ ನಿಷ್ಠೆಯಿರಬೇಕು. ಯಾರ ಹಂಗಿಗೂ ಒಳಗಾಗದೆ ಪತ್ರಕರ್ತರು ನಿರ್ಭೀತಿಯಿಂದ ಕಾರ್ಯನಿರ್ವಹಿಸಬೇಕೆಂದರು. ಕಾರ್ಕಳ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಮಹಮ್ಮದ್ ಶರೀಫ್ ಸಂದರ್ಭೋಚಿತವಾಗಿ ಮಾತನಾಡಿದರು. ಸಂಸ್ಥೆಯ ಉಪಪ್ರಾಚಾರ್ಯ ಡಾ. ಪ್ರಕಾಶ್ ಭಟ್ ಪ್ರಸ್ತಾವನೆಗೈದರು. ಸಂಸ್ಥೆಯ ಪ್ರಾಚಾರ್ಯ ಲಕ್ಷ್ಮೀ ನಾರಾಯಣ ಕಾಮತ್, ಮುಖ್ಯ ಶಿಕ್ಷಕರಾದ ಪ್ರೌಢಶಾಲಾ ವಿಭಾಗದ ಡೊಮಿನಿಕ್ ಅಂದ್ರಾದೆ, ಪ್ರಾಥಮಿಕ ವಿಭಾಗದ ಮೇರಿಯನ್ ಡಿ’ಸೋಜಾ ಮುಂತಾದವರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ವಿವಿಧ ಪತ್ರಿಕೆಗಳ ಪತ್ರಕರ್ತರು, ದೃಶ್ಯಮಾಧ್ಯಮಗಳ ವರದಿಗಾರರು ಹಾಗೂ ಛಾಯಾಗ್ರಾಹಕರನ್ನು ಸಂಸ್ಥೆಯ ವತಿಯಿಂದ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಸ್ತುತಿ ಜೈನ್ ಸ್ವಾಗತಿಸಿ, ಸಾನಿಯಾ ವಂದಿಸಿದರು. ಉಪನ್ಯಾಸಕ ಉಮೇಶ್ ಬೆಳ್ಳಿಪ್ಪಾಡಿ ಕಾರ್ಯಕ್ರಮ ನಿರೂಪಿಸಿದರು.