Wednesday, August 17, 2022
spot_img
Homeರಾಜ್ಯಕೊಡಗು : ಮಳೆಪೀಡಿತ ಪ್ರದೇಶಗಳಿಗೆ ಬೊಮ್ಮಾಯಿ ಭೇಟಿ : ಸಂಬಂಧಿಕರ ಮನೆಯಲ್ಲಿರುವ ಸಂತ್ರಸ್ತರಿಗೂ ಪಡಿತರ ವಿತರಣೆಗೆ...

ಕೊಡಗು : ಮಳೆಪೀಡಿತ ಪ್ರದೇಶಗಳಿಗೆ ಬೊಮ್ಮಾಯಿ ಭೇಟಿ : ಸಂಬಂಧಿಕರ ಮನೆಯಲ್ಲಿರುವ ಸಂತ್ರಸ್ತರಿಗೂ ಪಡಿತರ ವಿತರಣೆಗೆ ಸೂಚನೆ

ಕೊಡಗು : ಜಿಲ್ಲೆಯಲ್ಲಿ ಅಪಾಯದಲ್ಲಿದ್ದ ಕೆಲವು ಮನೆಯವರನ್ನು ಸ್ಥಳಾಂತರಿಸಲಾಗಿದ್ದು, ಕೆಲವರು ಸಂತ್ರಸ್ತ ಕೇಂದ್ರದಲ್ಲಿ ಮತ್ತು ಕೆಲವರು ಸಂಬಂಧಿಕರ ಮನೆಗಳಲ್ಲಿದ್ದಾರೆ. ಸಂಬಂಧಿಕರ ಮನೆಗಳಲ್ಲಿರುವವರಿಗೂ ಕೂಡ ಅಕ್ಕಿ, ಎಣ್ಣೆ, ಬೇಳೆ, ವಿತರಣೆಗೆ ಸೂಚಿಸಲಾಗಿದೆ. ಸಂತ್ರಸ್ತ ಕೇಂದ್ರದಿಂದ ಮನೆಗೆ ತೆರಳುವ ಸಂದರ್ಭದಲ್ಲಿಯೂ ಅವರಿಗೆ ಪಡಿತರವನ್ನು ಕೊಟ್ಟು ಕಳುಹಿಸಲು ಸೂಚಿಸಲಾಗಿದೆ ಎಂದು ಮುಖ್ಯ ಮಂತ್ರಿಗಳು ತಿಳಿಸಿದ್ದಾರೆ. ಮಡಿಕೇರಿಗೆ ಭೇಟಿಮಾಡಿದ ಸಿಎಂ ಮಳೆಯಿಂದ ಹಾನಿ ಕುರಿತು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಗ್ರಾಮೀಣ ಪ್ರದೇಶದಲ್ಲಿ ಟಾಸ್ಕ್ ಫೋರ್ಸ್ ರಚಿಸಬೇಕು. ಕೂಡಲೇ ಅಧಿಕಾರಿಗಳು ಎಚ್ಚೆತ್ತು ಕೆಲಸ ಮಾಡಬೇಕು. ವಿದ್ಯುತ್ ಸಂಪರ್ಕಕ್ಕೆ ಸಂಬಂಧಿಸಿದಂತೆ ಕಂಟ್ರೋಲ್ ರೂಂನ್ನು ಸ್ಥಾಪಿಸಲು ಆದೇಶಿಸಲಾಗಿದೆ. ಜಿಲ್ಲಾಧಿಕಾರಿಗಳ ಬಳಿ ಸಾಕಷ್ಟು ಅನುದಾನ ಲಭ್ಯವಿದ್ದು, ಅಗತ್ಯ ಬಿದ್ದರೆ ಇನ್ನಷ್ಟು ಅನುದಾನವನ್ನು ಒದಗಿಸಲಾಗುವುದು ಎಂದರು.

ನದಿಪಾತ್ರದ ಹೂಳು ತೆಗೆಯಲು ಕ್ರಮ
ಕೊಡಗು ಜಿಲ್ಲೆಯ ನಾಲ್ಕು ತಹಶೀಲ್ದಾರರ ಖಾತೆಗಳಲಿ ತಲಾ 25 ಲಕ್ಷ ರೂ.ಗಳು ಲಭ್ಯವಿದ್ದು, ಪ್ರತಿ ಗ್ರಾಮ ಪಂಚಾಯಿತಿಗೆ 50 ಸಾವಿರ ರೂ.ಗಳನ್ನು ಈಗಾಗಲೇ ಒದಗಿಸಲಾಗಿದೆ. ಕಾವೇರಿ ಮತ್ತು ಹಾರಂಗಿ ನದಿ ಪಾತ್ರದಲ್ಲಿ ಹೂಳು ತುಂಬಿದೆ. ಅದರ ಜೊತೆಗೆ ನೀರಿನ ಹರಿವಿನಿಂದ ನೀರು ಹೊರಗೆ ಹರಿಯುತ್ತಿದೆ. ಇದನ್ನು ತಪ್ಪಿಸಲು ಹಾರಂಗಿ ಜಲಾಶಯದ ಹಿಂದಿನ ಪ್ರದೇಶಕ್ಕೆ ಈಗಾಗಲೇ 40 ಕೋಟಿ ರೂ.ಗಳ ಮಂಜೂರಾತಿ ನೀಡಿದ್ದು, ಕೆಲಸ ಕೂಡಲೇ ಪ್ರಾರಂಭವಾಗುತ್ತದೆ ಎಂದರು. ಈ ಬಾರಿಯ ಮುಂಗಾರಿನಲ್ಲಿ ಹತ್ತು ದಿನಗಳೊಳಗೆ ಶೇ. 114% ಮಳೆಯಾಗಿದ್ದು, ಸಂಪೂರ್ಣ ಹಾನಿಗೊಳಗಾಗಿರುವ ಮನೆಗಳಿಗೆ 5 ಲಕ್ಷ ರೂ.ಗಳು, ತೀವ್ರ ಹಾನಿಯಾದ ಮನೆಗಳಿಗೆ 3 ಲಕ್ಷ ರೂ.ಗಳು ಹಾಗೂ ಭಾಗಶ: ಹಾನಿಗೊಳಗಾದ ಮನೆಗಳಿಗೆ 50 ಸಾವಿರ ರೂ.ಗಳ ಪರಿಹಾರವನ್ನು ಕೂಡಲೇ ನೀಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಬಿದ್ದುಹೋಗಿರುವ ಮನೆಗಳಿಗೆ ತುರ್ತು ವ್ಯವಸ್ಥೆಗಾಗಿ ಈಗಾಗಲೇ 10 ಸಾವಿರ ರೂ.ಗಳನ್ನು ನೀಡಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.

ಭೂಕುಸಿತ, ಭೂಕಂಪನಗಳ ಅಧ್ಯಯನ
ಜಿಲ್ಲೆಯಲ್ಲಿ ಆಗಾಗ್ಗೆ ಸಂಭವಿಸುತ್ತಿರುವ ಭೂಕುಸಿತ ಮತ್ತು ಭೂಕಂಪನಗಳ ಅಧ್ಯಯನ ನಡೆಸಲು ತಜ್ಞರ ತಂಡಗಳು ಕೊಡಗಿಗೆ ಭೇಟಿ ನೀಡಲಿವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಈ ಸಂದರ್ಭದಲ್ಲಿ ಖಚಿತಪಡಿಸಿದರು. ಜಿಲ್ಲೆಯಲ್ಲಿ ನಿರ್ದಿಷ್ಟ ವಲಯಗಳಿವೆ, ಅವು ಭೂಕುಸಿತಕ್ಕೆ ಗುರಿಯಾಗುತ್ತವೆ ಮತ್ತು ಆಗಾಗ್ಗೆ ಭೂಕಂಪನಗಳನ್ನು ದಾಖಲಿಸುತ್ತವೆ. ನ್ಯಾಷನಲ್ ಜಿಯಾಗ್ರಫಿಕ್ ಇನ್‌ಸ್ಟಿಟ್ಯೂಟ್, ನ್ಯಾಷನಲ್ ಇನ್‌ಸ್ಟಿಟ್ಯೂಟ್ ಫಾರ್ ಮೆಟೀರಿಯಲ್ಸ್ ಸೈನ್ಸ್, ಮೈಸೂರು ಮತ್ತು ಬೆಂಗಳೂರು ವಿಶ್ವವಿದ್ಯಾನಿಲಯಗಳ ಭೂವಿಜ್ಞಾನ ವಿಭಾಗಗಳು ಮತ್ತು ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾ ಸೇರಿದಂತೆ ಹಲವಾರು ಪ್ರಮುಖ ಸಂಸ್ಥೆಗಳಿಗೆ ಪತ್ರ ಬರೆದಿದ್ದೇನೆ. ಸಂಸ್ಥೆಗಳ ತಜ್ಞರು ಭೂಪ್ರದೇಶವನ್ನು ಅಧ್ಯಯನ ಮಾಡುತ್ತಾರೆ ಮತ್ತು ಅಧ್ಯಯನ ವರದಿಯನ್ನು ಅನುಸರಿಸಿ ಶಾಶ್ವತ ಪರಿಹಾರ ರೂಪಿಸಲು ಕ್ರಮ ತೆಗೆದುಕೊಳ್ಳಲಾಗುವುದು ಎಂದರು. ದುರ್ಬಲ ಪ್ರದೇಶಗಳಲ್ಲಿ ನೆಲೆಗೊಂಡಿರುವ ಮನೆಗಳನ್ನು ಮರುಹೊಂದಿಸಿ ಭದ್ರಗೊಳಿಸಲು ಕ್ರಮಗಳನ್ನು ರೂಪಿಸಲಾಗುವುದು. ವಿಪತ್ತು ನಿಯಂತ್ರಣಕ್ಕೆ ಅಧ್ಯಯನದ ಶಿಫಾರಸುಗಳ ಪ್ರಕಾರ ನಾವು ತಾಂತ್ರಿಕ ಬೆಂಬಲವನ್ನು ಬಳಸಿಕೊಳ್ಳುತ್ತೇವೆ ಎಂದು ಬೊಮ್ಮಾಯಿ ವಿವರಿಸಿದರು.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!