ತಿರುವನಂತಪುರಂ: ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ 66 ವರ್ಷದ ವೃದ್ಧನಿಗೆ ಕೇರಳದ ನ್ಯಾಯಾಲಯ 81 ವರ್ಷ ಜೈಲು ಶಿಕ್ಷೆ ವಿಧಿಸಿದೆ.
ಎರಡು ವರ್ಷದ ಹಿಂದೆ 15 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಪರಿಣಾಮವಾಗಿ ಆಕೆ ಗರ್ಭಿಣಿಯಾಗಿದ್ದಳು. ಪ್ರಕರಣ ಸಂಬಂಧ 66 ವರ್ಷದ ವೃದ್ಧನಿಗೆ ಇಡುಕ್ಕಿ ಜಿಲ್ಲೆಯ ತ್ವರಿತ ಗತಿ ವಿಶೇಷ ನ್ಯಾಯಾಲಯವು ಭಾರಿ ಪ್ರಮಾಣದ ಜೈಲು ಶಿಕ್ಷೆ ವಿಧಿಸಿದೆ. ಪೋಕ್ಸೊ ನ್ಯಾಯಾಲಯದ ನ್ಯಾಯಾಧೀಶ ಟಿ. ಜಿ. ವರ್ಗೀಸ್, ಅಪರಾಧಿ ಯಾವುದೇ ರೀತಿಯ ಕ್ಷಮೆಗೆ ಅರ್ಹನಲ್ಲ ಎಂದು ತೀರ್ಪು ನೀಡುವಾಗ ಉದ್ಘರಿಸಿದ್ದಾರೆ.
ಅಪ್ರಾಪ್ತೆ ಮೇಲಿನ ಲೈಂಗಿಕ ದೌರ್ಜನ್ಯ ಮತ್ತು ಪುನರಾವರ್ತಿತ ಅತ್ಯಾಚಾರದ ಪ್ರತಿ ಅಪರಾಧಕ್ಕೆ 20+20 ವರ್ಷಗಳ ಶಿಕ್ಷೆ ವಿಧಿಸಲಾಗಿದೆ. ಅಪ್ರಾಪ್ತೆಯನ್ನು ಗರ್ಭಿಣಿಯನ್ನಾಗಿ ಮಾಡಿದ್ದಕ್ಕೆ ಹೆಚ್ಚುವರಿ 30 ವರ್ಷ ಜೈಲುಶಿಕ್ಷೆ ನೀಡಲಾಗಿದೆ. ಬಾಲಕಿ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ ಮತ್ತೆ ಐದು ವರ್ಷಗಳ ಶಿಕ್ಷೆಯನ್ನು ನ್ಯಾಯಾಧೀಶರು ಪೋಕ್ಸೊ ಕಾಯ್ದೆಯಡಿ ವಿಧಿಸಿದ್ದಾರೆ.ಇಷ್ಟಕ್ಕೆ ಮುಗಿದಿಲ್ಲ. ಅಕ್ರಮ ಸಂಬಂಧಕ್ಕಾಗಿ ಅಪಹರಿಸಿದ ಅಪರಾಧಕ್ಕಾಗಿ ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಕಿರುಕುಳಕ್ಕಾಗಿ ಹೆಚ್ಚುವರಿ ಒಂದು ವರ್ಷ ಶಿಕ್ಷೆಯನ್ನು ನೀಡಿದೆ. ಹೀಗಾಗಿ ಪ್ರತಿ ಅಪರಾಧಕ್ಕೆ 20+20+30+5+5+1ರಂತೆ ಒಟ್ಟು 81 ವರ್ಷಗಳ ಕಠಿಣ ಜೈಲು ಶಿಕ್ಷೆ ನೀಡಿದೆ. ಇದಲ್ಲದೆ ಅಪರಾಧಿಗೆ 2.50 ಲಕ್ಷ ರೂಪಾಯಿ ದಂಡ ವಿಧಿಸಿದೆ. ಸಂತ್ರಸ್ತೆಗೆ ಎಲ್ಲಾ ಸಹಾಯವನ್ನು ಒದಗಿಸುವಂತೆ ಕಾನೂನು ಸೇವಾ ಪ್ರಾಧಿಕಾರಕ್ಕೆ ನಿರ್ದೇಶನ ನೀಡಿದೆ.
ಪ್ರಕರಣದ ಬಲಿಪಶು ಅಪ್ರಾಪ್ತೆಯೆಂದಾಗಲಿ ಅಥವಾ ಆರೋಪಿ ವೃದ್ಧ ಎಂಬ ಅಂಶವನ್ನು ಪರಿಗಣಿಸಿ, ಶಿಕ್ಷೆಯ ಪ್ರಮಾಣದಲ್ಲಿ ರಿಯಾಯಿತಿ ತೋರಿಸಲು ಅಪರಾಧಿ ಅರ್ಹನಲ್ಲ. ಸಾಬೀತಾದ ಅಪರಾಧಗಳ ಸ್ವರೂಪವನ್ನು ಪರಿಗಣಿಸಿ ಅಪರಾಧಿಗೆ ಸೂಕ್ತ ಶಿಕ್ಷೆಯನ್ನು ಖಚಿತಪಡಿಸುವುದು ಪೋಕ್ಸೊ ಕಾಯ್ದೆಯ ಉದ್ದೇಶಗಳಲ್ಲಿ ಒಂದಾಗಿದೆ ಎಂದು ನ್ಯಾಯಾಲಯ ಹೇಳಿದೆ.
ದೇಶದಲ್ಲೇ ಪೋಕ್ಸೊ ಪ್ರಕರಣದಲ್ಲಿ ನೀಡಿದ ದೀರ್ಘಾವಧಿಯ ಶಿಕ್ಷೆ ಇದು ಎಂದು ಕಾನೂನು ತಜ್ಞರು ಹೇಳಿದ್ದಾರೆ.2020ರ ಅಕ್ಟೋಬರ್‌ನಲ್ಲಿ ಬಾಲಕಿಗೆ ಹೊಟ್ಟೆ ನೋವು ಕಾಣಿಸಿಕೊಂಡಾಗ ಪೋಷಕರು ಆಸ್ಪತ್ರೆಗೆ ದಾಖಲಿಸಿದ್ದರು. ಆಸ್ಪತ್ರೆಯಲ್ಲಿ ಬಾಲಕಿ ಗರ್ಭಿಣಿ ಎಂಬ ವಿಚಾರ ಬೆಳಕಿಗೆ ಬಂದಿದೆ. ಬಳಿಕ ಉಚ್ಚ ನ್ಯಾಯಾಲಯದ ಅನುಮತಿಯೊಂದಿಗೆ ಆಕೆಗೆ ಗರ್ಭಪಾತ ಮಾಡಿಸಲಾಗಿತ್ತು. ವೈದ್ಯಕೀಯ ಪರೀಕ್ಷೆ ಮತ್ತು ಡಿಎನ್‌ಎ ಪರೀಕ್ಷೆಯಲ್ಲಿ ಅಪರಾಧ ಸಾಬೀತಾಗಿತ್ತು. ಹೀಗಾಗಿ ಅಪರಾಧಿಗೆ ನ್ಯಾಯಾಲಯ ಕಠಿಣ ಶಿಕ್ಷೆ ವಿಧಿಸಿದೆ.
ಬಾಲಕಿ ಮೇಲೆ ಅತ್ಯಾಚಾರ ಎಸಗಿದ 66ರ ವೃದ್ಧನಿಗೆ 81 ವರ್ಷ ಜೈಲು ಶಿಕ್ಷೆ
Recent Comments
ಕಗ್ಗದ ಸಂದೇಶ
on