ಒಂದು ʼಅಮರʼ ರಂಗ ಪ್ರಯೋಗದ ಕುರಿತು…

ಕಾರ್ಕಳದ ಯಕ್ಷರಂಗಾಯಣದ ಚೊಚ್ಚಲ ನಾಟಕ
ಅಮರ ಕ್ರಾಂತಿ ಸ್ವಾತಂತ್ರ್ಯ ಹೋರಾಟ – 1837

ಇದು ದೇಶ ಪ್ರೇಮದ ಕಿಚ್ಚು ಹಚ್ಚಿದ ಅದ್ಭುತ ನಾಟಕ!
ಐತಿಹಾಸಿಕ ನಾಟಕಗಳು ನಿಧಾನವಾಗಿ ನೇಪಥ್ಯದ ಕಡೆ ಸರಿಯುತ್ತಿರುವ ಈ ದಿನಗಳಲ್ಲಿ ರಾಷ್ಟ್ರೀಯ ಸಂವೇದನೆ ಇರುವ ಪ್ರೇಕ್ಷಕರಿಗೆ ಒಂದು ನೈಜ ಐತಿಹಾಸಿಕ ನಾಟಕವನ್ನು ಈ ರೀತಿ ಕಟ್ಟಿ ಕೊಡಲು ಕೂಡ ಸಾಧ್ಯ ಎಂದು ನಮಗೆಲ್ಲ ತೋರಿಸಿಕೊಟ್ಟ ನಾಟಕವೇ ‘ಅಮರ ಕ್ರಾಂತಿಯ ಸ್ವಾತಂತ್ರ್ಯ ಹೋರಾಟ 1837’

ಒಂದು ಕತೆ ನೂರಾರು ಸಾರ್ಥಕತೆಗಳು!
ತುಂಬ ವರ್ಷಗಳ ಮೈಮರೆತು ನೋಡಿದ ಒಂದು ತಾಸಿನ ನಾಟಕ ಇದು! ಕುತೂಹಲದಿಂದ ಸೇರಿದ್ದ ಅಷ್ಟೂ ಜನರು ನಾಟಕದ ಪ್ರತಿ ಕ್ಷಣವನ್ನು ಒಂದೇ ರೀತಿ ಆಸ್ವಾದನೆ ಮಾಡಿದ್ದು, ಕಣ್ಣೀರು ಸುರಿಸಿದ್ದು, ಒಂದು ಕ್ಷಣ ತಾವು ಕಣ್ಣು ಮುಚ್ಚಿದರೆ ಏನನ್ನೋ ಕಳೆದುಕೊಳ್ಳುತ್ತೇವೆ ಎಂಬ ಭಾವದಿಂದ ಎವೆಯಿಕ್ಕದೆ ನಾಟಕವನ್ನು ನೋಡಿದ್ದು, ಕೊನೆಯಲ್ಲಿ ಅಷ್ಟೂ ಸಭಾಸದರು ಎದ್ದು ನಿಂತು ‘ಭಾರತ ಮಾತಾ ಕೀ ಜೈ’ ಎಂಬ ಜಯಘೋಷ ಹಾಕಿದ್ದು… ಇವೆಲ್ಲವೂ ಸಂಭವಿಸಿದ್ದು ಕಾರ್ಕಳದ ಶ್ರೀ ಭುವನೇಂದ್ರ ಕಾಲೇಜಿನ ಸಭಾಂಗಣದಲ್ಲಿ, ಕಳೆದ ಭಾನುವಾರ ಸಂಜೆ!

ನಾಟಕದ ಅನಾವರಣ!
ನಾಟಕದ ಯಶಸ್ಸು ಅಡಗಿದ್ದದ್ದು ಕತೆಯ ಆಯ್ಕೆಯಲ್ಲಿ. ಕನ್ನಡ ಮತ್ತು ಸಂಸ್ಕೃತಿ ಸಚಿವರಾದ ವಿ. ಸುನಿಲ್ ಕುಮಾರ್ ಅವರ ಆಶಯದಂತೆ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಆರಿಸಿಕೊಂಡ ಈ ವಸ್ತುವೇ ರೋಮಾಂಚನ ಉಂಟು ಮಾಡುವಂಥದ್ದು.

1837ರ ಅಮರ ಕ್ರಾಂತಿಯ ದಂಗೆ
ಪ್ರಥಮ ಸ್ವಾತಂತ್ರ್ಯದ ಹೋರಾಟದ (1857) ಇಪ್ಪತ್ತು ವರ್ಷಗಳ ಹಿಂದೆ ಮಡಿಕೇರಿ ಮತ್ತು ದಕ್ಷಿಣ ಕನ್ನಡ (ಕೆನರಾ) ಜಿಲ್ಲೆಯಲ್ಲಿ 1200 ರೈತರು ನಡೆಸಿದ ಹೋರಾಟ ಈ ನಾಟಕದ ವಸ್ತು. ನಾಟಕ ಬರೆದವರು ಖ್ಯಾತ ಸಾಹಿತಿ ಡಾ. ಪ್ರಭಾಕರ ಶಿಶಿಲ ಅವರು.
1834ರಲ್ಲಿ ಕೊಡಗಿನ ದಕ್ಷ ಅರಸರ ಪದಚ್ಯುತಿ, ಕೊಡಗಿನ 110 ಗ್ರಾಮಗಳನ್ನು ಅಲ್ಲಿಂದ ಕತ್ತರಿಸಿ ಆಗಿನ ಕೆನರಾ ಜಿಲ್ಲೆಗೆ ಸೇರಿಸಿದ್ದು, ರೈತರ ಕಂದಾಯವನ್ನು 10% ದಿಂದ 50% ಕ್ಕೆ ಏರಿಸಿದ್ದು, ಹೊಗೆಸೊಪ್ಪು ಮತ್ತು ಉಪ್ಪಿನ ಏಕಸ್ವಾಮ್ಯವನ್ನು ಬ್ರಿಟಿಷ್ ಸರಕಾರವೇ ಇಟ್ಟುಕೊಂಡದ್ದು ಆ ರೈತರ ದಂಗೆಗೆ ಕಾರಣವಾಗಿತ್ತು.

ಹೋರಾಟದ ನಿಜವಾದ ಹೀರೋಗಳು
ಕೆದಂಬಾಡಿ ರಾಮ ಗೌಡ ಎಂಬ ಮಹಾನ್ ರಾಷ್ಟ್ರಪ್ರೇಮಿ ಹೋರಾಟದ ಮಾಸ್ಟರ್ ಮೈಂಡ್. ಹುಲಿ ಕಡಿದ ನಂಜಯ್ಯ ಎಂಬ ಸಮರ ಪ್ರವೀಣ, ಈ ದಂಗೆಗೆ ದಿಟ್ಟ ನೇತೃತ್ವವನ್ನು ನೀಡಿದ ಕಲ್ಯಾಣ ಸ್ವಾಮಿ (ಪುಟ್ಟ ಬಸವ) ಈ ಹೋರಾಟಗಾರರು ರೈತರನ್ನು ಸಂಘಟನೆ ಮಾಡಿ ಹೋರಾಟದ ಮೂಲಕ ಆಗಿನ ಕಲೆಕ್ಟರ್ ಲುವಿನ್ ನೇತೃತ್ವದ ಬ್ರಿಟಿಷರ ಸೈನ್ಯವನ್ನು ಸೋಲಿಸಿದ್ದು ಮತ್ತು 1837ರ ಎಪ್ರಿಲ್ 05ರಂದು ಬ್ರಿಟಿಷ್ ಧ್ವಜವನ್ನು ಕೆಳಗೆ ಇಳಿಸಿ ಸುಟ್ಟು ಹಾಕಿದ್ದು ಮಾತ್ರವಲ್ಲ ಹಾಲೇರಿ ವಂಶದ ವಿಜಯಧ್ವಜವನ್ನು ಹಾರಿಸಿದ್ದು ಭಾರಿ ದೊಡ್ಡ ಸಾಧನೆ.
ಕೇಂದ್ರ ಕತೆಯ ಸುತ್ತ ಸುತ್ತುವ ಸಣ್ಣ ಸಣ್ಣ ಪಾತ್ರಗಳು ಕೂಡ ಮೇರು ಸ್ವಾಭಿಮಾನ, ರಾಷ್ಟ್ರಪ್ರೇಮ ಮತ್ತು ಬಲಿದಾನದ ಸಂಕೇತವಾಗಿ ಮೂಡಿಬಂದು ಇಡೀ ನಾಟಕಕ್ಕೆ ಒಂದು ಅಮರತ್ವವನ್ನು ಕೊಟ್ಟದ್ದು ನಿಜಕ್ಕೂ ಪ್ರಶಂಸನೀಯ.

ನಾಟಕದ ಹಿಂದಿನ ಶಕ್ತಿಗಳು
ರಂಗ ಮಾಂತ್ರಿಕ ಜೀವನ್ ರಾಂ ಸುಳ್ಯ ಅವರು ನಿರ್ದೇಶಕರಾಗಿ, ನಿರೂಪಕರಾಗಿ… ಎಲ್ಲವೂ ಆಗಿ ಈ ನಾಟಕಕ್ಕೆ ಸರ್ವಸ್ವ ಧಾರೆ ಎರೆದಿದ್ದಾರೆ. ಸಂಗೀತ ಸಹಕಾರ ನೀಡಿದ ಜೀವನ ರಾಂ ಸರ್ ಮತ್ತು ಮಾಸ್ಟರ್ ಮನುಜ ನೇಹಿಗ, ಬೆಳಕಿನ ವಿನ್ಯಾಸವನ್ನು ನೀಡಿದ ಶಿಶಿರ ಕೂರಾಡಿ, ಕಲೆಯನ್ನು ಧಾರೆ ಎರೆದ ಖ್ಯಾತ ಕಲಾವಿದ ಚಂದ್ರನಾಥ್ ಬಜೆಗೋಳಿ, ಪ್ರಸಾಧನ ನೀಡಿದ ಸೋಮನಾಥ್ ಉಡುಪಿ… ಹೀಗೆ ಪ್ರತಿಯೊಬ್ಬರೂ ಇದು ನಮ್ಮೆಲ್ಲರ ನಾಟಕ ಎಂಬ ಭಾವನೆಯಿಂದ ದುಡಿದು ನಾಟಕವನ್ನು ಗೆಲ್ಲಿಸಿದ್ದಾರೆ.

ಅಭಿನಯದಲ್ಲಿ ಮಿಂಚು ಹರಿಸಿದ ಕಲಾವಿದರು
ಕೇವಲ ಒಂದು ಡಜನ್ ಕಲಾವಿದರು ಸುಮಾರು 40ರಷ್ಟು ಪಾತ್ರಗಳನ್ನು ನಿರ್ವಹಣೆ ಮಾಡಿದ್ದು ವಿಶೇಷ. ಹುಲಿ ಕಡಿದ ನಂಜಪ್ಪ ಪಾತ್ರ ನಿರ್ವಹಣೆ ಮಾಡಿದ ಭುವನ್ ಮಣಿಪಾಲ್, ಕೆದಂಬಾಡಿ ರಾಮ ಗೌಡ ಆಗಿ ಮಿಂಚಿದ ಉಜ್ವಲ್ ಯು. ವಿ., ಕಲ್ಯಾಣ ಸ್ವಾಮಿಯಾಗಿ ಇಡೀ ನಾಟಕವನ್ನು ಆವರಿಸಿರುವ ಹಾರಂಬಿ ಯತೀನ್ ವೆಂಕಪ್ಪ ಇವರು ಕತೆಯನ್ನು ಸಮರ್ಥವಾಗಿ ಮುನ್ನಡೆಸಿದ್ದಾರೆ.
ಅವರೊಂದಿಗೆ ಇತರ ಕಲಾವಿದರಾದ ಕೋಟ ಪ್ರಶಾಂತ್ ಶೆಟ್ಟಿ, ನವೀನ್ ಕಾಂಚನ್, ಮೆಹಬೂಬ್ ಗುಲ್ಬರ್ಗ, ಸಂಗೀತ ಭಿಡೆ ಧರ್ಮಸ್ಥಳ, ಭಾವನಾ ವಿಷ್ಣುಮೂರ್ತಿ ಕೆರೆಮಠ, ಸಂದೇಶ ಕೋಟ್ಯಾನ್, ಕಾರ್ಕಳ ಸುಖೇಶ್, ಕುಮಾರಿ ಹರ್ಷಿತಾ ಶಿರೂರು, ಹೇಮಂತ್ ಕಾರ್ಲ ಹೀಗೆ ಎಲ್ಲರೂ ಈ ನಾಟಕದ ಯಶಸ್ಸಿಗೆ ತಮ್ಮ ನಿರ್ಣಾಯಕ ಕೊಡುಗೆಗಳನ್ನು ನೀಡಿದ್ದಾರೆ.
ಹಲವು ವೃತ್ತಿಪರ ಕಲಾವಿದರ ಜೊತೆ ಹೊಸ ಕಲಾವಿದರೂ ಸೇರಿ ಒಂದು ತಿಂಗಳ ಅವಧಿಯಲ್ಲಿ ಕಠಿಣ ತರಬೇತಿಯನ್ನು ಪಡೆದು ಕೇವಲ ತಮ್ಮ ಪಾತ್ರಗಳ ಬಗ್ಗೆ ಮಾತ್ರ ಯೋಚನೆ ಮಾಡದೆ ಇಡೀ ಥೀಮನ್ನು ಬೆನ್ನಿನ ಮೇಲೆ ಹೊತ್ತುಕೊಂಡು ಗೆದ್ದಿದ್ದಾರೆ. ನಾಟಕ ಮುಗಿಸಿ ಹೊರಬಂದ ತುಂಬ ಹೊತ್ತಿನ ನಂತರವೂ ಪ್ರತಿ ಪಾತ್ರ ಮನಸ್ಸಿನ ಭಿತ್ತಿಯಲ್ಲಿ ಭದ್ರವಾಗಿದೆ ಅಂದರೆ ಅದು ಕಲಾವಿದರ ಅಭಿನಯದ ಶಕ್ತಿ.
ರಂಗದ ಕಲ್ಪನೆಗೆ ಮಾಂತ್ರಿಕ ಸ್ಪರ್ಶ
ಸರಳ ರಂಗಸಜ್ಜಿಕೆ ಮತ್ತು ವೇಷಭೂಷಣ ನಾಟಕದ ಶಕ್ತಿ. ಎಲ್ಲೂ ಜಗಮಗ ಇಲ್ಲ. ಯಾವ ಉತ್ಪ್ರೇಕ್ಷೆಯ ಹಂಗು ಇಲ್ಲ. ವೈಭವೀಕರಣ ಇಲ್ಲ. ಭಾರಿ ಶ್ರೀಮಂತರಾಗಿದ್ದ ಕೆದಂಬಾಡಿ ರಾಮ ಗೌಡ ಎಂಬ ಪಾತ್ರವನ್ನು ಕೂಡ ಅತ್ಯಂತ ಸರಳವಾದ ಪೋಷಾಕಿನಲ್ಲಿ ತೋರಿಸಿದ್ದು, ಕಲ್ಯಾಣ ಸ್ವಾಮಿ ಈ ಹೆಸರಿನ ಸ್ವಾಮೀಜಿಯನ್ನು ಕೂಡ ಸಾಮಾನ್ಯ ಜನತೆಯ ನಡುವಿನ ಪಾತ್ರವಾಗಿಯೇ ತೋರಿಸಿದ್ದು ನಾಟಕದ ಕತೆಗೆ ಪೂರಕವೇ ಆಗಿತ್ತು. ಪ್ರತಿಯೊಂದು ದೃಶ್ಯವೂ ನೈಜ ಮತ್ತು ಸಹಜ. ಒಂದು ಸಂಭಾಷಣೆ ಕೂಡ ಕತೆಯಿಂದ ಹೊರಗೆ ಇದೆ ಎಂದು ಅನ್ನಿಸುವುದಿಲ್ಲ.

ಭಾವನಾತ್ಮಕ ದೃಶ್ಯಗಳು ಜೀವಾಳ
ಆರಂಭದಿಂದ ಕೊನೆಯವರೆಗೂ ಗುಪ್ತಗಾಮಿನಿಯಾಗಿಯೇ ಇರುವ ಭಾವನಾತ್ಮಕ ದೃಶ್ಯಗಳು ನಾಟಕದ ಜೀವಾಳ. ಮದುವೆಯಾದ ಮರುದಿನವೇ ಯುದ್ಧಕ್ಕೆ ಹೊರಡುವ ಒಬ್ಬ ಸೇನಾನಿ, ಬ್ರಿಟಿಷ್ ಧ್ವಜವನ್ನು ಸಿಟ್ಟಿನಿಂದ ಹರಿದು ಹಾಕುವ ರೈತರು, ಮಧ್ಯರಾತ್ರಿಯ ಹೊತ್ತು ಗಾಳಿಯಲ್ಲಿ ಹಾರುತ್ತಿರುವ ವಿಜಯ ಧ್ವಜವನ್ನು ಸ್ಪರ್ಶ ಮಾಡಿ ಭಾವುಕನಾಗುವ ಪುಟ್ಟ ಬಸವ, ತಲೆ ಮರೆಸಿಕೊಂಡಿದ್ದ ತಮ್ಮ ಅಳಿಯ ರಾತ್ರಿ ಹೊತ್ತು ವೇಷ ಮರೆಸಿ ಮನೆಗೆ ಬಂದಾಗ ಅತ್ತೆ, ಮಾವ ಪಡುವ ಆತಂಕ ಮತ್ತು ಸಂಭ್ರಮ, ತನ್ನನ್ನು ಬ್ರಿಟಿಷರ ವಶಕ್ಕೆ ಒಪ್ಪಿಸಿ ನೀವು ನಗದು ಬಹುಮಾನ ಪಡೆಯಿರಿ ಎನ್ನುವ ಅಳಿಯ, ಕಲೆಕ್ಟರ್ ಮುಂದೆ ತಲೆ ಎತ್ತಿ ಗರ್ಜನೆ ಮಾಡುವ ನಂಜಯ್ಯ, ಕೊನೆಯಲ್ಲಿ ಪುಟ್ಟ ಬಸವನನ್ನು ಬ್ರಿಟಿಷರು ಗಲ್ಲಿಗೇರಿಸುವ ಸಂದರ್ಭದಲ್ಲಿ ಸ್ಫೋಟವಾಗುವ ರಾಷ್ಟ್ರಪ್ರೇಮದ ಮಿಂಚು, ಶೂನ್ಯದಿಂದ ಎದ್ದು ಬರುವ ವಿವಿಧ ರಾಷ್ಟ್ರನಾಯಕರ ಭಾವಚಿತ್ರಗಳು, ಹಿನ್ನೆಲೆಯಲ್ಲಿ ಮೊಳಗುವ ಅದ್ಭುತ ವಂದೇ ಮಾತರಂ ಗೀತೆ ಎಲ್ಲವೂ ನಾಟಕದ ಉದ್ದಕ್ಕೆ ನಮ್ಮನ್ನು ಕೈಹಿಡಿದು ಯಾವುದೋ ಒಂದು ಭಾವನಾ ಲೋಕಕ್ಕೆ ಕರೆದುಕೊಂಡು ಹೋಗುತ್ತದೆ.

ಸ್ವಾತಂತ್ರ್ಯವು ದೇವರಿಗಿಂತ ದೊಡ್ಡದು
ಇದು ಈ ನಾಟಕದಲ್ಲಿ ಹಲವು ಬಾರಿ ಬರುವ ಸಂಭಾಷಣೆ. ಇದು ನಾಟಕದ ಮೂಲ ದ್ರವ್ಯ ಕೂಡ. ಸ್ವಾತಂತ್ರ್ಯದ ಅಮೃತ ಮಹೋತ್ಸವಕ್ಕೆ ಇಂತಹ ನಾಟಕವನ್ನು ಉಡುಗೊರೆಯಾಗಿ ಕೊಟ್ಟ ಎಲ್ಲ ಶಕ್ತಿಗಳಿಗೆ, ಕಲಾವಿದರಿಗೆ, ಕನ್ನಡ ಸಂಸ್ಕೃತಿಯ ಇಲಾಖೆಗೆ ಅಭಿನಂದನೆಗಳು. ಈ ನಾಟಕದ ಘಟನೆಗಳು ನಡೆದ ಕೊಡಗು, ಬೆಳ್ಳಾರೆ, ಸುಳ್ಯ, ಪುತ್ತೂರು ಮೊದಲಾದ ಕಡೆ ಈ ನಾಟಕವು ಮುಂದೆ ಹಲವು ಕಡೆ ವೇದಿಕೆಯನ್ನು ಏರಿದಾಗ ಆಗಬಹುದಾದ ರೋಮಾಂಚನವನ್ನು ನಾವು ಈಗ ಊಹೆ ಮಾಡುವುದು ಕೂಡ ಕಷ್ಟ!
ಇಡೀ ಕರ್ನಾಟಕ ನೋಡಬೇಕಾದ ನಾಟಕ ಇದು!

ರಾಜೇಂದ್ರ ಭಟ್‌ ಕೆ.







































error: Content is protected !!
Scroll to Top