ಬೆಂಗಳೂರು : ಸಬ್ ಅರ್ಬನ್ ರೈಲು ಯೋಜನೆ ಜಾರಿಗೆ 40 ವರ್ಷಗಳಿಂದ ಚರ್ಚೆಯಲ್ಲೇ ಕಾಲ ಕಳೆಯಲಾಯಿತು. ಆದರೆ ನಾವು ಆ ರೀತಿ ಅಲ್ಲ 40 ತಿಂಗಳಲ್ಲಿ ಕಾರ್ಯಕ್ರಮಗಳನ್ನು ಪೂರ್ಣಗೊಳಿಸಿದ್ದೇವೆ. ಕೆಲವೇ ತಿಂಗಳಲ್ಲಿ ನಗರ ರೈಲು ಯೋಜನೆ ಪೂರ್ಣಗೊಳಿಸಲು ಪಣ ತೊಟ್ಟಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ನಗರದ ಕೊಮ್ಮಘಟ್ಟದಲ್ಲಿ 33 ಸಾವಿರ ಕೋಟಿ ರೂಪಾಯಿ ಮೌಲ್ಯದ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿನಲ್ಲಿನ ಯುವ ಶಕ್ತಿ, ಉದ್ಯಮಶೀಲತೆಯನ್ನು ಹಾಡಿ ಹೊಗಳಿದ್ದಾರೆ. ಬೆಂಗಳೂರಿನ ಟ್ರಾಫಿಕ್ ಜಾಮ್‌ಗೆ ಮುಕ್ತಿ ನೀಡಲು ನಗರಾಭಿವೃದ್ಧಿಗೆ ಡಬಲ್ ಇಂಜಿನ್ ಸರಕಾರ ಸದಾ ಬದ್ಧವಾಗಿದೆ.
ಬೆಂಗಳೂರು ಕನಸುಗಳ ನಗರ. ಅಭಿವೃದ್ಧಿಯೇ ಯುವಜನತೆಯ ಕನಸಾಗಿದೆ. ಸರಕಾರದ ನೆರವು ಸಿಕ್ಕರೆ ಯುವಕರು ಏನನ್ನು ಬೇಕಾದರೂ ಸಾಧಿಸುತ್ತಾರೆ. ನಗರ ಆತ್ಮನಿರ್ಭರ್ ಭಾರತ್ ಶಕ್ತಿಗೆ ಪ್ರೇರಣೆ ನೀಡಿದೆ. ಇಂತಹ ನಗರಕ್ಕೆ 40 ವರ್ಷಗಳ ಹಿಂದೆಯೇ ಸಬ್ ಅರ್ಬನ್ ರೈಲು ಸೇರಿದಂತೆ ಪ್ರಯಾಣ ಸಮಯವನ್ನು ಕಡಿಮೆಗೊಳಿಸುವ ಟ್ರಾಫಿಕ್ ಜಾಮ್‌ನಿಂದ ಮುಕ್ತಿ ನೀಡುವ ಇತರ ಯೋಜನೆಗಳು ಲಭ್ಯವಾಗಿದ್ದಿದ್ದರೆ ಕಥೆಯೇ ಬೇರೆ ಇರುತ್ತಿತ್ತು. ನನ್ನ ನಂಬಿ ನೀವು ಜವಾಬ್ದಾರಿ ಕೊಟ್ಟಿದ್ದೀರಿ. ಪ್ರತಿ ಕ್ಷಣವನ್ನೂ ನಿಮ್ಮ ಸೇವೆಗೆ ನನ್ನನ್ನು ಮೀಸಲಿಟ್ಟು, ಸಮಯ ವ್ಯರ್ಥ ಮಾಡಿಲ್ಲ ಎಂದರು.
ರಾಜ್ಯಕ್ಕೆ 5 ರಾಷ್ಟ್ರೀಯ ಹೆದ್ದಾರಿ ಯೋಜನೆ ನೀಡಿದ್ದೇವೆ, 7 ರೈಲು ಯೋಜನೆಗಳಿಗೆ ಚಾಲನೆ ನೀಡಿದ್ದೇವೆ, 8 ವರ್ಷದಿಂದ ನಿರಂತರವಾಗಿ ಅಭಿವೃದ್ಧಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ. 12 ಸಾವಿರ ಕಿ.ಮೀ ರೈಲು ಮಾರ್ಗ ನಿರ್ಮಿಸಿದ್ದೇವೆ. 8 ವರ್ಷಗಳಿಂದ ರೈಲು ಯೋಜನೆಗಳಲ್ಲಿ ಆಮೂಲಾಗ್ರ ಬದಲಾವಣೆ ಮಾಡಿ ಸ್ವಚ್ಛ, ಸುರಕ್ಷಾ, ಜನಸ್ನೇಹಿ ರೈಲು ಸಂಚಾರದ ಸುಧಾರಣೆ ಮಾಡಿದ್ದೇವೆ ಎಂದು ಕೇಂದ್ರ ಸರಕಾರದಿಂದ ನಡೆದ ಅಭಿವೃದ್ಧಿಯ ಬಗ್ಗೆ ತಿಳಿಸಿದರು. ಸಭೆಯ ಬಳಿಕ ಪ್ರಧಾನಿ ಮೋದಿ ಮೈಸೂರಿಗೆ ತೆರಳಿದ್ದು, ಜೂ.22 ರಂದು ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಲಿರುವರು.
40 ವರ್ಷಗಳಲ್ಲಿ ಆಗದ್ದನ್ನು ಕೆಲವೇ ತಿಂಗಳಲ್ಲಿ ಮಾಡುತ್ತೇವೆ : ಪ್ರಧಾನಿ ಮೋದಿ
























