ಕಾರ್ಯಕರ್ತರ ನಂಬಿಕೆಯೇ ಸಂಘಟನೆಯ ಶಕ್ತಿ : ಕೋಟ ಶ್ರೀನಿವಾಸ ಪೂಜಾರಿ

ಕಾರ್ಕಳ : ಭಾರತದ ಹಳ್ಳಿಯಲ್ಲಿರುವ ಪ್ರತೀ ರೈತರ ಪಡಿತರ ಚೀಟಿ ಯಾವುದೇ ಆಗಿದ್ದರೂ ಕಿಸಾನ್ ಸಮ್ಮಾನ್ ಯೋಜನೆಗೆ ಅವರು ಯೋಗ್ಯರಾಗಿರುತ್ತಾರೆ ಎಂದು ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಅವರು ಶುಕ್ರವಾರ ಭಾರತೀಯ ಜನತಾ ಪಾರ್ಟಿ ಮಂಡಲದ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತ, ಅರ್ಜಿಯನ್ನು ಕೊಡದೇ ರೈತರ ಖಾತೆಗೆ ನೇರವಾಗಿ ಸರಕಾರದಿಂದ 10 ಸಾವಿರ ರೂ. ಖಾತೆಗೆ ಜಮಾ ಆಗುತ್ತಿದೆ. ರೈತರ ಮಕ್ಕಳಿಗೆ ನೀಡುವಂತಹ ವಿದ್ಯಾರ್ಥಿ ವೇತನ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಾಧನೆಯಾಗಿದೆ. ಬಡವರ ಕಲ್ಯಾಣ ಯೋಜನೆಯ ಕಲ್ಪನೆಗಳನ್ನು ಕಾರ್ಯಕರ್ತರು ಮನೆ-ಮನೆಗೆ ತಲುಪಿಸುವ ಕಾರ್ಯ ಮಾಡುತ್ತಿದ್ದಾರೆ. ಇದರಿಂದ ಸರಕಾರದ ಯೋಜನೆ ಉಜ್ವಲವಾಗುತ್ತಿದೆ. ಸರಕಾರದ ಮೇಲಿರುವ ಕಾರ್ಯಕರ್ತರ ನಂಬಿಕೆಯೇ ಸಂಘಟನೆಯ ಶಕ್ತಿ ಎಂದವರು ಹೇಳಿದರು.

ಸಮರ್ಥ ನಾಯಕತ್ವದಲ್ಲಿ ಭಾರತ ಸಮೃದ್ಧ
ಭಾರತ ನರೇಂದ್ರ ಮೋದಿ ಅವರ ಸಮರ್ಥ ನಾಯಕತ್ವದಲ್ಲಿ ಸಮೃದ್ಧವಾಗಿದೆ. ಅನೇಕ ದೇಶಗಳು ಆರ್ಥಿಕ ಹಿನ್ನಡೆ, ಭದ್ರತಾ ಲೋಪದಿಂದಾಗಿ ಬಳಲುತ್ತಿದ್ದಾರು ಭಾರತ ಸಶಕ್ತವಾಗಿದೆ. ಮೋದಿ ಆಡಳಿತದಿಂದ ಇದು ಸಾಧ್ಯವಾಗಿದೆ ಎಂದು ಶ್ರೀನಿವಾಸ ಪೂಜಾರಿ ಹೇಳಿದರು.

ರಾಷ್ಟ್ರೀಯತೆಯ ಸಂಕೇತ
ಪಠ್ಯ ಪರಿಷ್ಕರಣೆಯ ಬಗ್ಗೆ ಪ್ರತಿಕ್ರಿಯಿಸಿದ ಅವರು ರೋಹಿತ್ ಚಕ್ರತೀರ್ಥ ನೇತೃತ್ವದಲ್ಲಿ ಪಠ್ಯ ರಚನೆಗಲ್ಲ, ಪರಿಷ್ಕರಣೆಗೆ ಸಮಿತಿ ನೇಮಕವಾಗಿತ್ತು. ಪಠ್ಯಪುಸ್ತಕ ಪರಿಷ್ಕರಣೆಯಲ್ಲಾದ ಎಲ್ಲ ಗೊಂದಲಗಳಿಗೆ ಸರಕಾರ ತೆರೆ ಎಳೆದಿದೆ. ವಿದ್ಯಾರ್ಥಿಗಳಿಗೆ ಪೂರಕವಾದಂತಹ ಪಠ್ಯಗಳನ್ನೇ ಸೇರಿಸಲಾಗಿದೆ. ಆರ್‌ಎಸ್‌ಎಸ್ ಸಂಘಟನೆಯನ್ನು ಕಟ್ಟಿ ಬೆಳೆಸಿದಂತಹ ಹೆಡ್ಗೇವಾರ್ ಅವರ ಪಠ್ಯವನ್ನು ಸೇರಿಸಿದ್ದರ ಬಗ್ಗೆ ನಮಗೆ ಹೆಮ್ಮೆಯಿದೆ. ಏಕೆಂದರೆ ಆರ್‌ಎಸ್‌ಎಸ್‌ ರಾಷ್ಟ್ರೀಯತೆಯ ಸಂಕೇತ ಎಂದವರು ಹೇಳಿದರು.

ಸಿದ್ದು ವಿಕೃತ ಮನಸ್ಸಿನ ಪರಾಕಾಷ್ಠೆ
ಸಿದ್ದರಾಮಯ್ಯ ಚಡ್ಡಿ ಸುಡುವುದಲ್ಲ, ಬದಲಾಗಿ ರಾಷ್ಟ್ರ ಪ್ರೇಮಿಗಳ ಭಾವನೆಗಳನ್ನು ಸುಡುತ್ತಿದ್ದಾರೆ. ಆರ್‌ಎಸ್‌ಎಸ್‌ ಚಡ್ಡಿ ರಾಷ್ಟ್ರ ಪ್ರೇಮದ ಮತ್ತು ಸೇವಾ ಮನೋಭಾವದ ಸಂಕೇತ. ಇದನ್ನು ಸುಡುವ ಮನಸ್ಥಿತಿ ವಿಕೃತ ಮನಸ್ಸಿನ ಪರಾಕಾಷ್ಠತೆ ಎಂದು ಶ್ರೀನಿವಾಸ ಪೂಜಾರಿ ಕಿಡಿ ಕಾರಿದರು.

ಬೋಳ ಗ್ರಾಮದಲ್ಲಿ ನಾಥುರಾಮ್ ಗೋಡ್ಸೆ ನಾಮಫಲಕವನ್ನು ಹಾಕಿದ್ದರ ವಿಚಾರವಾಗಿ ಮಾತನಾಡಿದ ಅವರು ಕಾನೂನು ಬಾಹಿರವಾಗಿ ಹಾಕಿದ ಇಂತಹ ಫಲಕಗಳನ್ನು ತೆಗೆಯುವ ಅಧಿಕಾರವಿರುವ ಗ್ರಾ.ಪಂ. ಫಲಕವನ್ನು ತೆಗಿಸಿದೆ. ಪ್ರಕರಣ ತನಿಖೆಯಾಗುತ್ತಿದೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಕ್ಷೇತ್ರಾಧ್ಯಕ್ಷ ಮಹಾವೀರ ಹೆಗ್ಡೆ, ಹಿರಿಯ ಮುಖಂಡ ಎಂ.ಕೆ. ವಿಜಯ ಕುಮಾರ್‌, ಗೇರು ನಿಗಮದ ಅಧ್ಯಕ್ಷ ಮಣಿರಾಜ್‌ ಶೆಟ್ಟಿ, ಬಿಜೆಪಿ ಜಿಲ್ಲಾ ಕಾರ್ಯದರ್ಶಿಗಳಾದ ರವೀಂದ್ರ ಕುಮಾರ್‌, ರೇಶ್ಮಾ ಉದಯ ಶೆಟ್ಟಿ, ತಾಲೂಕು ಪ್ರಧಾನ ಕಾರ್ಯದರ್ಶಿಗಳಾದ ನವೀನ್‌ ನಾಯಕ್‌, ಜಯರಾಂ ಸಾಲ್ಯಾನ್‌, ಕಾರ್ಕಳ ಬಿಜೆಪಿ ವಕ್ತಾರ ಹರೀಶ್‌ ಶೆಣೈ ಉಪಸ್ಥಿತರಿದ್ದರು.

















































error: Content is protected !!
Scroll to Top