ಚಂಡೀಗಡ: ಪಂಜಾಬಿ ಗಾಯಕ ಸಿಧು ಮೂಸೆ ವಾಲಾ ಅವರ ಹತ್ಯೆಯಿಂದ ಎಚ್ಚೆತ್ತುಕೊಂಡಿರುವ ಪಂಜಾಬ್ ಸರ್ಕಾರ, ಕೆಲವು ದಿನಗಳ ಹಿಂದಷ್ಟೇ ವಾಪಸ್ ತೆಗೆದುಕೊಂಡಿದ್ದ 424 ವಿವಿಐಪಿಗಳ ಭದ್ರತೆಯನ್ನು ಮರಳಿ ನೀಡಿದೆ. ಸಿಧು ಮೂಸೆ ವಾಲಾ ಅವರ ಹತ್ಯೆ ನಡೆದ ಐದು ದಿನಗಳ ಬಳಿಕ ಈ ನಿರ್ಧಾರವನ್ನು ಗುರುವಾರ ಪ್ರಕಟಿಸಲಾಗಿದ್ದು, ಜೂನ್ 7ರಿಂದ ಎಲ್ಲರಿಗೂ ಮತ್ತೆ ಭದ್ರತೆ ಒದಗಿಸಲಾಗುತ್ತದೆ ಎಂದು ಸರ್ಕಾರ ತಿಳಿಸಿದೆ.
ಕಾಂಗ್ರೆಸ್ ನಾಯಕರೂ ಆಗಿದ್ದ ಸಿಧು ಮೂಸೆ ವಾಲಾ ಸೇರಿದಂತೆ 420ಕ್ಕೂ ಹೆಚ್ಚು ವಿವಿಐಪಿಗಳಿಗೆ ಒದಗಿಸಲಾಗಿದ್ದ ಭದ್ರತೆಯನ್ನು ಎಎಪಿ ಸರ್ಕಾರ ವಾಪಸ್ ತೆಗೆದುಕೊಂಡಿತ್ತು. ಅದರ ಮರು ದಿನವೇ ಸಿಧು ಅವರ ಮೇಲೆ ದುಷ್ಕರ್ಮಿಗಳು ಭಯಾನಕ ದಾಳಿ ನಡೆಸಿದ್ದರು.
ಮಾಜಿ ಸಚಿವ ಒಪಿ ಸೋನಿ ಅವರು ಭದ್ರತೆ ರದ್ದತಿ ಸಂಬಂಧ ಸಂಬಂಧ ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ ಮೆಟ್ಟಿಲೇರಿದ್ದರು. ಸರ್ಕಾರದ ವಿರುದ್ಧ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿತ್ತು. ಈಗ ಹೈಕೋರ್ಟ್‌ಗೆ ಮಾಹಿತಿ ನೀಡಿರುವ ಭಗವಂತ್ ಮಾನ್ ನೇತೃತ್ವದ ಎಎಪಿ ಸರ್ಕಾರ, ಸೋನಿ ಸೇರಿದಂತೆ 424 ಮಂದಿಯ ಭದ್ರತೆಯನ್ನು ಮರು ನಿಯೋಜನೆ ಮಾಡುತ್ತಿರುವುದಾಗಿ ತಿಳಿಸಿದೆ.





















