ಶೋಚನೀಯ ಸ್ಥಿತಿಯಲ್ಲಿ ವರಂಗ ಒಂಬತ್ತು ಒಕ್ಕಲು ತೂಗುಸೇತುವೆ

ಹೆಬ್ರಿ : ವರಂಗ ಮತ್ತು ಶಿವಪುರ ಗ್ರಾಮ ಪಂಚಾಯತ್‌ ಸಂಪರ್ಕಿಸುವ ಒಂಬತ್ತು ಒಕ್ಕಲು ತೂಗುಸೇತುವೆ ಶೋಚನೀಯ ಸ್ಥಿತಿಯಲ್ಲಿದ್ದು, ಅಪಾಯವನ್ನು ಆಹ್ವಾನಿಸುವಂತಿದೆ. ವರಂಗ ಸಂಪರ್ಕಿಸಲು ಒಂಬತ್ತು ಒಕ್ಕಲು ಭಾಗದ ಜನತೆ ಈ ತೂಗುಸೇತುವೆಯನ್ನು ಅವಲಂಬಿಸಿದ್ದು, ನಿರ್ವಹಣೆ ಇಲ್ಲದೇ ತೂಗುಸೇತುವೆಯ ಹಲಗೆ ತುಂಡಾಗಿ ಬೀಳುತ್ತಿದೆ.

ಬದಲಿ ರಸ್ತೆ ಮೂಲಕ ವರಂಗ ಸಂಪರ್ಕಿಸುವುದಾದರೆ ಬರೋಬ್ಬರಿ 6 ಕಿ.ಮೀ. ದೂರ ಕ್ರಮಿಸಬೇಕು. ದಶಕಗಳ ಹಿಂದೆ ಈ ತೂಗುಸೇತುವೆ ನಿರ್ಮಾಣವಾಗಿದ್ದು, ಶಾಲಾ ಮಕ್ಕಳು, ಕೆಲಸಕ್ಕೆ ಹೋಗುವವರು ಇದರ ಮೂಲಕವೇ ನಿತ್ಯ ಸಾಗುತ್ತಾರೆ. ಮಳೆಗಾಲದಲ್ಲಿ ಈ ಹೊಳೆಯಲ್ಲಿ ನೀರು ತುಂಬಿ ಹರಿಯುತ್ತಿದ್ದು, ಅನಾಹುತ ಸಂಭವಿಸುವುದಕ್ಕಿಂತ ಮುಂಚೆ ಸಂಬಂಧಪಟ್ಟವರು ಎಚ್ಚೆತ್ತುಕೊಳ್ಳುವುದು ಅಗತ್ಯ. ತೂಗುಸೇತುವೆಯ ಒಂದು ಭಾಗ ವರಂಗ ಹಾಗೂ ಇನ್ನೊಂದು ಭಾಗ ಶಿವಪುರ ಪಂಚಾಯತ್‌ ವ್ಯಾಪ್ತಿಗೆ ಸೇರಿದೆ. ಗ್ರಾಮ ಪಂಚಾಯತ್‌ ಸೇತುವೆ ದುರಸ್ತಿಪಡಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಬೇಕೆಂದು ಸ್ಥಳೀಯರು ಆಗ್ರಹ ವ್ಯಕ್ತಪಡಿಸುತ್ತಿದ್ದಾರೆ.

ವರಂಗ ಸಂಪರ್ಕಿಸಲು ಒಂಬತ್ತು ಒಕ್ಕಲು ಭಾಗದ ಬಹುತೇಕ ಮಂದಿ ಇದೇ ತೂಗುಸೇತುವೆ ಮೂಲಕ ಸಾಗುತ್ತಾರೆ. ಹೀಗಾಗಿ ಸಂಬಂಧಪಟ್ಟವರು ಶಿಥಿಲಾವಸ್ಥೆಯಲ್ಲಿರುವ ಸೇತುವೆ ದುರಸ್ತಿಪಡಿಸುವಂತೆ ಮನವಿ ಮಾಡಿಕೊಳ್ಳುತ್ತಿದ್ದೇವೆ.

ಅರುಣ್‌ ಶೆಟ್ಟಿ
ಒಂಬತ್ತು ಒಕ್ಕಲು

















































error: Content is protected !!
Scroll to Top