ಶಿಕ್ಷಣ ಸಂಸ್ಥೆಗಳ ಸಹಯೋಗದಲ್ಲಿ ‘ಪರಿಸರ ಸ್ನೇಹಿ ಕೃಷಿ ಜಾಗೃತಿ ಅಭಿಯಾನ’ಕ್ಕೆ ಭಾ. ಕಿ. ಸಂ. ಕಾರ್ಕಳ ಚಿಂತನೆ

ಕಾರ್ಕಳ: ತಾಲೂಕು ಭಾರತೀಯ ಕಿಸಾನ್ ಸಂಘದ ಮಾಸಿಕ ಸಭೆ ಸಂಘದ ನೂತನ ಅಧ್ಯಕ್ಷ ಗೋವಿಂದರಾಜ್ ಭಟ್ ಕಡ್ತಲ ಇವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಕಾರ್ಯಲಯದಲ್ಲಿ ನಡೆಯಿತು.
ನಮ್ಮ ಭೂಮಿಯ ಮಣ್ಣು, ನಾವು ಉಸಿರಾಡುವ ಗಾಳಿ, ಕುಡಿಯುವ ನೀರು, ತಿನ್ನುವ ಆಹಾರ ಎಲ್ಲವೂ ವಿಷಮಯವಾಗುತ್ತಿದೆ. ಈ ಬಗ್ಗೆ ನಾವೆಲ್ಲಾ ಈಗಲೇ ಎಚ್ಚೆತ್ತು ಕೊಳ್ಳದಿದ್ದರೆ ನಮ್ಮ ಮತ್ತು ನಮ್ಮ ಮುಂದಿನ ಪೀಳಿಗೆಯ ಜೀವನ ದುರಂತಮಯವಾಗಲಿದೆ. ಈ ನಿಟ್ಟಿನಲ್ಲಿ ನಾವೆಲ್ಲರೂ ಜಾಗೃತರಾಗುವ ಜೊತೆಗೆ ನಮ್ಮ ಮಕ್ಕಳಿಗೂ ಜಾಗೃತಿಯ ಪಾಠ ಕಲಿಸಬೇಕಾಗಿದೆ. ಶಾಲಾ ಶಿಕ್ಷಣದ ಒಟ್ಟಿಗೆ ಜೀವನ ಶಿಕ್ಷಣದ ಅರಿವು ಅಗತ್ಯವಿದೆ. ಭಾರತೀಯ ಕಿಸಾನ್ ಸಂಘ ಜವಾಬ್ದಾರಿಯುತ ರೈತರ ಸಂಘಟನೆಯಾಗಿ ವಿವಿಧ ಶಿಕ್ಷಣ ಸಂಸ್ಥೆಗಳ ಸಹಯೋಗದಲ್ಲಿ “ಪರಿಸರ ಸ್ನೇಹಿ ಕೃಷಿ ಜಾಗೃತಿ ಅಭಿಯಾನ “ವನ್ನು ನಡೆಸಲು ಚಿಂತನೆ ನಡೆಸುತ್ತಿದೆ. ತಕ್ಷಣದಿಂದ ಕಾರ್ಯಪ್ರವೃತ್ತರಾಗಿ ಪ್ರೌಢಶಾಲಾ ಹಂತದಿಂದ ಮೇಲ್ಪಟ್ಟ ಶಿಕ್ಷಣ ಸಂಸ್ಥೆ ಮತ್ತು ವಿದ್ಯಾರ್ಥಿಗಳನ್ನು ರಜಾ ಕಾಲದಲ್ಲಿ ಸಂಯೋಜಸಿಕೊಂಡು, ತಜ್ಞ ಸಂಪನ್ಮೂಲ ವ್ಯಕ್ತಿಗಳನ್ನು ಜೋಡಿಸಿಕೊಂಡು ಸೂಕ್ತ ಮಾಹಿತಿ, ತರಬೇತಿ, ಪ್ರಾತ್ಯಕ್ಷಿಕೆ ಹಾಗೂ ಕ್ಷೇತ್ರ ವೀಕ್ಷಣೆ ಮೂಲಕ ಮಕ್ಕಳಿಗೆ ವಾಸ್ತವ ಸತ್ಯಗಳನ್ನು ತಿಳಿಸಿಕೊಟ್ಟು ಅವರನ್ನು ಜಾಗೃತಿಗೊಳಿಸಿ ಮುಂದೆ ಅವರು ಅವರ ಕುಟುಂಬ, ಸಮಾಜದಲ್ಲಿ ಜಾಗೃತಿ ಮುಟ್ಟಿಸುವ ರಾಯಭಾರಿಗಳಾಗಿಸುವ ಪ್ರಯತ್ನ ನಡೆಸಲಾಗುವುದೆಂದು ತಾಲ್ಲೂಕು ಸಮಿತಿ ಅಧ್ಯಕ್ಷ ಗೋವಿಂದರಾಜ್ ಭಟ್ ಕಡ್ತಲ ತಿಳಿಸಿದರು.
ಜಿಲ್ಲಾಧ್ಯಕ್ಷ ನವೀನಚಂದ್ರ ಜೈನ್‌ ಅವರು ಮಾತನಾಡಿ, ರೈತರ ಹತ್ತು ಹಲವು ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ನಮ್ಮ ಜಿಲ್ಲೆಯನ್ನು ಪ್ರತಿನಿಧಿಸುತ್ತಿರುವ ಶಾಸಕರು, ಸಚಿವರುಗಳ ಘನ ಉಪಸ್ಥಿತಿಯಲ್ಲಿ ಸಂಬಂಧಿಸಿದ ಎಲ್ಲಾ ಇಲಾಖಾಧಿಕಾರಿಗಳನ್ನು ಜೋಡಿಸಿಕೊಂಡು ಉಡುಪಿ ಜಿಲ್ಲಾಮಟ್ಟದ ರೈತರ ಕುಂದು ಕೊರತೆ ಸಭೆಯನ್ನು ನಡೆಸಿ ರೈತರಿಗೆ ಬೆಂಗಾವಲಿರಬೇಕು. ಈ ಹಿನ್ನೆಲೆಯಲ್ಲಿ ಈಗಾಗಲೇ ಕಾರ್ಕಳ ಶಾಸಕ, ಕರ್ನಾಟಕ ಸರಕಾರದ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನೀಲ್ ಕುಮಾರ್ ರವರನ್ನು ಕೇಳಿಕೊಳ್ಳಲಾಗಿದೆ. ಆದಷ್ಟು ಶೀಘ್ರದಲ್ಲಿ ಸಭೆ ನಡೆಸುವಂತೆ ಮತ್ತೊಮ್ಮೆ ಒತ್ತಾಯಿಸುತ್ತೇವೆ ಎಂದರು.
ಭಾ. ಕಿ. ಸಂ. ನ ಪ್ರಾಂತ ಸಮ್ಮೇಳನ ಏಪ್ರಿಲ್ ತಿಂಗಳ 16 ಮತ್ತು 17 ರಂದು ಬೆಂಗಳೂರಿನಲ್ಲಿ ನಡೆಯಲಿದೆ. ಈ ಸಮ್ಮೇಳನದಲ್ಲಿ ನಮ್ಮ ತಾಲ್ಲೂಕಿನ ರೈತ ಪ್ರತಿನಿಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ವಿನಂತಿಸಲಾಯಿತು.
ಸಭೆಯಲ್ಲಿ ಉಪಾಧ್ಯಕ್ಷರುಗಳಾದ ಸುಂದರ ಶೆಟ್ಟಿ ಮುನಿಯಾಲು, ಕೆ. ಪಿ. ಭಂಡಾರಿ ಕೆದಿಂಜೆ, ಶೇಖರ್ ಶೆಟ್ಟಿ ನೀರೆ, ಹಾಗೂ ತಾಲ್ಲೂಕು ಸಮಿತಿ ಮತ್ತು ಗ್ರಾಮ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಚಂದ್ರಹಾಸ ಶೆಟ್ಟಿ ಇನ್ನಾ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.

















































error: Content is protected !!
Scroll to Top