ಆಂಧ್ರಪ್ರದೇಶ: ರಾಜ್ಯದ ಅನಂತಪುರ ಜಿಲ್ಲೆಯ ಲೇಪಾಕ್ಷಿಯಲ್ಲಿರುವ ವಿಜಯನಗರ ಅರಸರ ಕಾಲಕ್ಕೆ ಸೇರಿದ, ಬೃಹತ್ ಏಕಶಿಲಾ ನಂದಿ ವಿಗ್ರಹ ಹೊಂದಿರುವ ವೀರಭದ್ರ ಸ್ವಾಮಿ ದೇವಾಲಯವು ಯುನೆಸ್ಕೋದ ವಿಶ್ವ ಪಾರಂಪರಿಕ ತಾಣಗಳ ತಾತ್ಕಾಲಿಕ ಪಟ್ಟಿಗೆ ಸೇರ್ಪಡೆಗೊಂಡಿದೆ.
ಕ್ರಿ.ಶ. 1538 ರಲ್ಲಿ ವಿಜಯನಗರ ಅರಸರ ಸೇವೆಯಲ್ಲಿದ್ದ ವಿರೂಪಣ್ಣ ಮತ್ತು ವೀರಣ್ಣ ಎಂಬ ಇಬ್ಬರು ಸಹೋದರರು ಈ ದೇವಾಲಯವನ್ನು ನಿರ್ಮಿಸಿದ್ದಾರೆ ಎಂದು ಪ್ರತೀತಿ ಇದೆ. ವಿಜಯನಗರ ಶೈಲಿಯ ಅದ್ಭುತ ವಾಸ್ತುಶಿಲ್ಪ ಹೊಂದಿರುವ ದೇವಾಲಯವು ನೇತಾಡುವ ಕಂಬಗಳಿಗೆ ವಿಶ್ವಪ್ರಸಿದ್ಧಿ ಪಡೆದುಕೊಂಡಿದೆ. ಈ ದೇವಾಲಯವು 70 ಕಂಬಗಳ ಮೇಲೆ ನಿಂತಿದೆ. ಆದರೆ ಈ 70 ಕಂಬಗಳಲ್ಲಿ ಯಾವೊಂದು ಕಂಬವೂ ನೆಲವನ್ನು ಸ್ಪರ್ಶಿಸುವುದಿಲ್ಲ ಎಂಬುದು ಇಲ್ಲಿನ ನಿಗೂಢ ವಿಸ್ಮಯ.
ದೇವಳವಿರುವ ಸ್ಥಳ ಪುರಾಣ ಪ್ರಸಿದ್ಧವಾಗಿದ್ದು, ತ್ರೇತಾಯುಗದಲ್ಲಿ ಲಂಕೆಯ ರಾಜ ರಾವಣ ಸೀತೆಯನ್ನು ಪುಷ್ಪಕ ವಿಮಾನದಲ್ಲಿ ಕರೆದೊಯ್ಯುತ್ತಿದ್ದಾಗ ಆತನೊಡನೆ ಹೋರಾಟ ನಡೆಸಿ ಗಾಯಗೊಂಡ ಜಟಾಯು ಪಕ್ಷಿಯು ಈ ಸ್ಥಳದಲ್ಲೇ ಬಿದ್ದಿತ್ತು ಎಂದು ಹೇಳಲಾಗುತ್ತದೆ. ರಾಮನು ಪಕ್ಷಿಯನ್ನು ನೋಡಿ ಕನಿಕರದಿಂದ “ಲೇ ಪಕ್ಷಿ” (ತೆಲುಗಿನಲ್ಲಿ- ಎದ್ದೇಳು ಪಕ್ಷಿ) ಎಂದಿರುವುದರಿಂದ ಲೇಪಾಕ್ಷಿ ಎಂಬ ಹೆಸರು ಬಂದಿದೆ ಎಂಬ ಸ್ಥಳ ಮಹಾತ್ಮೆಯಿದೆ. ದೇವಾಲಯದ ಎದುರಿಗಿರುವ ಆರು ಮೀಟರ್ ಎತ್ತರವಿರುವ ಬೃಹತ್ ಏಕಶಿಲಾ ನಂದಿ ವಿಗ್ರಹವೂ ಸಾಕಷ್ಟು ಪ್ರಸಿದ್ಧಿ ಪಡೆದಿದೆ.































