ಹಲವು ದಿನಗಳ ರಾಜಕೀಯ ಅನಿಶ್ಚಿತತೆ ಸರಿದು ಹೊಸ ಮುಖ್ಯಮಂತ್ರಿ ಆಯ್ಕೆ ಆಗಿದ್ದಾರೆ. ಲಿಂಗಾಯತ ಸಮುದಾಯವನ್ನು ಮತ್ತು ಯಡಿಯೂರಪ್ಪ ಅವರನ್ನು ಖುಷಿ ಪಡಿಸುವ ಪ್ರಯತ್ನದಲ್ಲಿ ಬಿಜೆಪಿ ಹೈಕಮಾಂಡ್ ಸದ್ಯಕ್ಕಂತೂ ಗೆದ್ದಿದೆ. ಬಸವರಾಜ ಬೊಮ್ಮಾಯಿ ನೂತನ ಸಿಎಂ ಆಗಿ ಅಧಿಕಾರ ಸ್ವೀಕಾರ ಮಾಡಿದ್ದಾರೆ. ಅಲ್ಲಿಗೆ ಎಲ್ಲಾ ಸಮಸ್ಯೆಗಳು ಬಗೆಹರಿದವು ಎಂದು ನೆಮ್ಮದಿ ತಾಳುವಂತೆ ಇಲ್ಲ. ಬೆಟ್ಟದಷ್ಟು ಸವಾಲುಗಳು ನೂತನ ಸಿಎಂ ಮುಂದೆ ಇದೆ.
ಮೇಲ್ನೋಟಕ್ಕೆ ಎಲ್ಲವೂ ಚೆನ್ನಾಗಿದೆ ಎಂದು ಕಾಣುತ್ತಿದ್ದರೂ ಹಲವು ಸೀನಿಯರ್ ಬಿಜೆಪಿ ನಾಯಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಮಾಜಿ ಸಿಎಂ ಜಗದೀಶ್ ಶೆಟ್ಟರ್ ತಾನು ಈ ಬಾರಿ ಮಂತ್ರಿ ಆಗುವುದಿಲ್ಲ ಅಂದಿದ್ದಾರೆ. ಅದಕ್ಕೆ ಕಾರಣ ಬಸವರಾಜ ಬೊಮ್ಮಾಯಿ ಅವರು 2008ರವರೆಗೆ ಜೆಡಿಎಸ್ ಪಾರ್ಟಿಯಲ್ಲಿ ಇದ್ದದ್ದು. ಅಲ್ಲಿ ಅವರು ಎರಡು ಬಾರಿ ಶಾಸಕರು ಕೂಡ ಆಗಿದ್ದವರು. ನಂತರ ಬಿಜೆಪಿಗೆ ಬಂದರು. ಮಂತ್ರಿ ಕೂಡ ಆದರು. ಇದನ್ನು ಹಲವು ಸೀನಿಯರ್ ಹಾಗೂ ಮೂಲ ಬಿಜೆಪಿಗರಿಗೆ ಸಹಿಸಲು ತುಂಬಾ ಕಷ್ಟ ಆಗ್ತಾ ಇದೆ. ಇದುವರೆಗೂ ಶಿಸ್ತಿನ ಪಕ್ಷ ಎಂದು ತನ್ನನ್ನು ತಾನೇ ಕರೆಸಿಕೊಳ್ಳುವ ಬಿಜೆಪಿಯಲ್ಲಿ ಹೊರಗಿಂದ ಪಕ್ಷಕ್ಕೆ ಬಂದವರಿಗೆ ಅಧಿಕಾರದ ಸ್ಥಾನ ಕೊಡುತ್ತಿರಲಿಲ್ಲ. ಯಡಿಯೂರಪ್ಪ ಅಂಥವರೆ ಪಕ್ಷ ಒಡೆದು ಕೆಜೆಪಿ ಕಟ್ಟಿದವರು ಎಂಬ ಆಪಾದನೆ ಎದುರಿಸುತ್ತಾ ಇದ್ದವರು. ಹಾಗಿರುವಾಗ ಹಿರಿಯ ಬಿಜೆಪಿ ನಾಯಕರಾದ ಜಗದೀಶ್ ಶೆಟ್ಟರ್, ಈಶ್ವರಪ್ಪ ಅಂತವರಿಗೆ ಇದು ನುಂಗಲಾರದ ಬಿಸಿ ತುಪ್ಪ ಆಗುವುದು ಖಂಡಿತ. ಮುಂದೆ ಮಂತ್ರಿ ಆಗಿ ಆಯ್ಕೆ ಆಗುವ ಅನೇಕರಿಗೆ ಪಕ್ಷದಲ್ಲಿ ತಮಗಿಂತ ಕಿರಿಯರಾದ ಬೊಮ್ಮಾಯಿ ಅವರ ನೇತೃತ್ವದಲ್ಲಿ ಕೆಲಸ ಮಾಡಲು ಸ್ವಲ್ಪ ಕಷ್ಟ ಆಗಬಹುದು.
ಇನ್ನು ಕೆಲವು ಸ್ವಾಭಿಮಾನಿ ಸಚಿವರಿಗೆ ಯಡಿಯೂರಪ್ಪ ಪವರ್ ಸಿಎಂ ಆಗಿ ಎಲ್ಲದರಲ್ಲೂ ಮೂಗು ತೂರಿಸುವುದು, ಎರಡೆರಡು ಸಿಎಂಗಳಿಗೆ ಜೀ ಹೂಜೂರ್ ಅನ್ನುವುದು ಕಷ್ಟ ಆಗಬಹುದು. ಅದರಲ್ಲಿ ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವ ಶಶಿಕಲಾ ಜೊಲ್ಲೆ ಅಂತವರು, ಎಲ್ಲವನ್ನೂ ತನ್ನ ಮೂಗಿನ ನೇರಕ್ಕೆ ಯೋಚಿಸಿ ಮಾತಾಡುವ ಯತ್ನಾಳ್ ಅಂತವರು, ಅಧಿಕಾರಕ್ಕೆ ಸದಾ ಕಾಲ ಹಪಹಪಿಸುವ ಯೋಗೇಶ್ವರ್, ನಿರಾಣಿ ಅಂತವರು ಸುಮ್ಮನೆ ಕೂರುವವರು ಅಲ್ಲ. ಅದರಲ್ಲೂ ಬೊಮ್ಮಾಯಿ ಅವರು ಹಿಂದುತ್ವದ ಉಗ್ರ ಪ್ರತಿಪಾದಕರಲ್ಲ. ಆರ್ ಎಸ್ ಎಸ್ ಹಿನ್ನೆಲೆಯಿಂದ ಬಂದವರಲ್ಲ. ಇದೆಲ್ಲವೂ ಅವರನ್ನು ಟೀಕಿಸುವ ನಾಯಕರಿಗೆ ದೊರೆಯುವ ಅಸ್ತ್ರಗಳು. ಗೃಹ ಮಂತ್ರಿಗಳಾಗಿ ಅವರು ಕಠಿಣ ನಿರ್ಧಾರ ತೆಗೆದುಕೊಂಡ ಉದಾಹರಣೆ ಇದೆಯಾ ಎಂದು ಅನೇಕರು ಪ್ರಶ್ನೆ ಮಾಡುತ್ತಾರೆ.
ಕೊರೋನ, ಲಾಕ್ ಡೌನ್ ಇತ್ಯಾದಿಗಳಿಂದ ಈಗಲೇ ಸಂತ್ರಸ್ತರಾಗಿರುವ ಜನತೆ ಸರಕಾರದಿಂದ ಹೆಚ್ಚು ನಿರೀಕ್ಷೆ ಮಾಡುತ್ತಿದ್ದಾರೆ. ಸಂಪನ್ಮೂಲ ಕ್ರೋಢೀಕರಣ ಹೇಳಿದಷ್ಟು ಸುಲಭ ಅಲ್ಲ. ಲಕ್ಷಾಂತರ ಮಂದಿ ಉದ್ಯೋಗ ಕಳೆದುಕೊಂಡವರು ಇದ್ದಾರೆ. ಸರಕಾರದ ಪ್ರತಿ ಒಂದು ತಪ್ಪನ್ನು ಹಿಡಿಯಲು ದುರ್ಬೀನು ಹಿಡಿದುಕೊಂಡು ವಿಪಕ್ಷದ ನಾಯಕರು ಕಾಯುತ್ತಿದ್ದಾರೆ. ಮಾಧ್ಯಮಗಳು ಸ್ಟ್ರಾಂಗ್ ಆಗಿವೆ. ಇಂತಹ ಸನ್ನಿವೇಶ ಹ್ಯಾಂಡಲ್ ಮಾಡಲು ಗಟ್ಟಿ ನಿರ್ಧಾರಗಳು ಬೇಕು. ಖಾತೆ ಹಂಚಿಕೆ, ಹಿರಿಯರನ್ನು ಖುಷಿ ಪಡಿಸುವುದು, ಭಾರಿ ಮಳೆಯ ಪ್ರಕೋಪಗಳು, ಡಿಸೆಂಬರ್ ಒಳಗೆ ಬರುವ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಚುನಾವಣೆಗಳು ನೂತನ ಸಿಎಂ ಅವರಿಗೆ ಎದುರಾಗುವ ಸದ್ಯದ ಸವಾಲುಗಳು. ಅದನ್ನು ಅವರು ಹೇಗೆ ಗೆಲ್ಲುತ್ತಾರೆ? ಯಡಿಯೂರಪ್ಪ ಹೇಗೆ ತನ್ನ ಆಪ್ತನನ್ನು ಮುನ್ನಡೆಸುತ್ತಾರೆ? ಹಿರಿಯ ಬಿಜೆಪಿ ನಾಯಕರು ಏನು ಮಾಡುತ್ತಾರೆ?
ಹೈ ಕಮಾಂಡ್ ಹೇಗೆ ದಾಳ ಉರುಳಿಸುತ್ತದೆ? ಆಪರೇಷನ್ ಕಮಲದ ಮೂಲಕ ಬಿಜೆಪಿಗೆ ಬಂದಿರುವ ಮಂದಿ ಹೇಗೆ ಯೋಚನೆ ಮಾಡುತ್ತಾರೆ? ಇವೆಲ್ಲವೂ ಸದ್ಯಕ್ಕೆ ಇರುವ ಕುತೂಹಲಗಳು. ಅದನ್ನು ಬೊಮ್ಮಾಯಿ ಹೇಗೆ ಗೆಲ್ಲುತ್ತಾರೆ ? ಕಾದು ನೋಡೋಣ. ನೂತನ ಸಿಎಂ ಅವರಿಗೆ ನ್ಯೂಸ್ ಕಾರ್ಕಳ ಶುಭ ಹಾರೈಸುತ್ತದೆ.