“ಹೇರಾಳು ಮೂಟೆಗೂಲಿಯ ಬೇಡಿ ಹೆಗಲೊಡ್ಡಿ|
ಭಾರವನು ನಾಲ್ಕು ಮಾರೊಯ್ದಷ್ಟರೊಳಗೇ|||
ದೂರವಿನ್ನೆಷ್ಟೆನುತಲಾತುರಿಪನ್ ಅದನಿಳಿಸೆ|
ಕಾರುಬಾರುಗಳಷ್ಟೆ-ಮಂಕುತಿಮ್ಮ|
ಮೂಟೆಗಳನ್ನು ಹೊರುವ ಆಳು ತಾನೇ ಆಸಕ್ತಿಯಿಂದ ಮತ್ತು ಕೂಲಿಯ ಆಸೆಯಿಂದ ಮೂಟೆಯನ್ನು ಹೆಗಲಲ್ಲಿ ಹೊತ್ತು ಸ್ವಲ್ಪ ದೂರ ಹೋಗುವಷ್ಟರಲ್ಲಿ ಇನ್ನೆಷ್ಟು ದೂರವಿದೆ ಎಂದು ಕೇಳುತ್ತಾ ಅದನ್ನು ಇಳಿಸಲು ಆತುರ ಪಡುವನು.ನಾವು ಮಾಡುವ ಕೆಲಸಗಳು ಹಾಗೆ ಹಿಡಿದ ಕೆಲಸವನ್ನು ಗುರಿಮಟ್ಟಿಸದೆ ಅದು ಕಷ್ಟಕರವೆಂದು ಅರ್ಧದಲ್ಲಿಯೆ ಕೈಬಿಡುವುದೇ ಹೆಚ್ಚು ಎನ್ನುವುದನ್ನು ಮಾನ್ಯ ಡಿವಿಜಿ ಯವರು ಈ ಮುಕ್ತಕದಲ್ಲಿ ಸೂಚ್ಯವಾಗಿ ಹೇಳಿದ್ದಾರೆ.
ಆತುರ ಮತ್ತು ಚಂಚಲತೆ ಎರಡೂ ಮನುಷ್ಯನ ಸಹಜ ದೌರ್ಬಲ್ಯಗಳು.ಇವೆರಡು ನಾವು ಮಾಡುವ ಕೆಲಸಗಳನ್ನು ಹಾಳು ಮಾಡುತ್ತವೆ.ಮಾಡುವ ಕೆಲಸದಲ್ಲಿ ಶ್ರದ್ಧೆ ಬಹಳ ಮುಖ್ಯವಾಗುತ್ತದೆ.” ಸೋತರದು ಸೋಲಲ್ಲ ಕೈಬಿಟ್ಟರದು ಸೋಲು.ಗುರಿಯೊಂದ ಕಾಣುವುದೆ ಜಯದ ಸಂಕೇತ.ಹಿರಿತನ ಗಳಿಸಲಿಕೆ ಸಾಧಿಸುವ ಚಲ ಬೇಕು.ಇಡು ಶ್ರದ್ಧೆ ದುಡಿಮೆಯಲಿ -ಮುದ್ಧುರಾಮ”ಎಂದು ಕವಿ ಕೆ.ಶಿವಪ್ಪನವರು ಹೇಳುವಂತೆ ನಾವು ಮಾಡುವ ಕೆಲಸದ ಸಾರ್ಥಕತೆಗೆ ಗುರಿನಿಷ್ಠೆ ಅತ್ಯಗತ್ಯ.ಕೆಲಸ ಆರಂಭಿಸುವ ಮೊದಲೇ ಅದರ ಸಾಧಕ ಬಾಧಕಗಳ ಬಗ್ಗೆ ತಿಳಿದಿರಬೇಕು.ನಿರ್ಧಾರ ತೆಗೆದುಕೊಂಡ ಮೇಲೆ ಬದಲಿಸಬಾರದು.ನಾವು ಎಷ್ಷು ಕೆಲಸಗಳನ್ನು ಆರಂಭಿಸಿದ್ದೇವೆ ಎನ್ನುವುದಕ್ಕಿಂತ ಎಷ್ಟು ಕೆಲಸಗಳನ್ನು ಮಾಡಿ ಯಶಸ್ವಿಯಾಗಿ ಕೊನೆ ಮುಟ್ಟಿಸಿದ್ಧೇವೆ ಎನ್ನುವುದು ಸಾಧನೆಯಲ್ಲಿ ನಿರ್ಣಾಯಕವೆನಿಸುವುದು.

“ಹತ್ತೆಡೆಯೊಳು ತೋಡು ಒಂದಡಿಯಷ್ಟನ್ನು ಬರಲಿಲ್ಲ ನೀರೆನ್ನಬೇಡ.ಒಂದೆಡೆಯೊಳು ತೋಡು ಹತ್ತಡಿಯಷ್ಟನ್ನು ಚಿಮ್ಮುವುದುದಕವು ನೋಡ” ಎಂಬ ಕವಿ ಎಸ್.ವಿ.ಪರಮೇಶ್ವರ ಭಟ್ಟರ ಮಾತನ್ನು ಇಲ್ಲಿ ನೆನಪಿಸಿಕೊಳ್ಳಬಹುದು.ಜೀವನದಲ್ಲಿ ಅದು ಭಾರ.ಅದನ್ನು ಹೊರುವುದು ಕಷ್ಟವೆಂದರೆ ಏನೂ ಮಾಡಲಾಗದು.ಕಷ್ಟಪಡದೆ ಸುಖ ಸಿಗದು.ಅತೀ ಸುಲಭ ಅಂತ ಯಾವುದು ಇಲ್ಲ.ಕಷ್ಟವೆಂದು ಕೈ ಬಿಡುತ್ತಾ ಹೋದರೆ ಏನೂ ಮಾಡಲಾಗದು.ನಿರ್ದಿಷ್ಟ ಗುರಿ, ನಿರಂತರ ಪರಿಶ್ರಮ ಹಾಗು ಗುರಿಮುಟ್ಟುವ ದೃಢ ಸಂಕಲ್ಪದಿಂದಲೇ ಜೀವನದಲ್ಲಿ ಯಶಸ್ವಿಯಾಗಲು ಸಾಧ್ಯವೆನ್ನುವ ಈ ಕಗ್ಗದ ಸಂದೇಶವನ್ನುಅರ್ಥೈಸಿಕೊಂಡು ನಡೆದಾಗಲೇ ಜೀವನ ಸಾರ್ಥಕವಾಗುವುದಲ್ಲವೇ?
ಪ್ರಭಾಕರ ಶೆಟ್ಟಿ ಕೊಂಡಳ್ಳಿ
ಅಧ್ಯಕ್ಷರು ಕನ್ನಡ ಸಾಹಿತ್ಯ ಪರಿಷತ್, ಕಾರ್ಕಳ.






























