ಕಾರ್ಕಳ : ಸ್ವಚ್ಛ ಕಾರ್ಕಳ ಬ್ರಿಗೇಡ್‌ನ Save Western Ghats ಅಭಿಯಾನದ ಪ್ರಯುಕ್ತ 71ನೇ ಸ್ವಚ್ಛತಾ ಅಭಿಯಾನವು ವಿವಿಧ ತಂಡಗಳ ಸಹಯೋಗದೊಂದಿಗೆ ಪಾಜೇಗುಡ್ಡೆಯಲ್ಲಿ ನಡೆಯಿತು. ನಲ್ಲೂರು ಹಾಗೂ ನೆಲ್ಲಿಕಾರು ಗ್ರಾಮಗಳ ನಡುವೆ ಹಾದುಹೋಗುವ ಪಶ್ಚಿಮಘಟ್ಟ ಪ್ರದೇಶವಾದ ಪಾಜೇಗುಡ್ಡೆಯಲ್ಲಿ ಭಾನುವಾರ ನಡೆದ ಸ್ವಚ್ಛತಾ ಅಭಿಯಾನದಲ್ಲಿ ಸುಮಾರು 200ಕ್ಕೂ ಮಿಕ್ಕಿದ ಸ್ವಯಂ ಸೇವಕರು ಪಾಲ್ಗೊಂಡಿದ್ದರು. ಈ ಸಂದರ್ಭ ಸುಮಾರು 6 ಟ್ರಕ್ ನಷ್ಟು ಲೋಡ್ ಕಸವನ್ನು ತೆರವುಗೊಳಿಸಲಾಯಿತು. ಸಂಗ್ರಹಿಸಿದ ಕಸವನ್ನು ನಲ್ಲೂರು ಗ್ರಾಮ ಪಂಚಾಯತ್ ಗೆ ಹಸ್ತಾಂತರಿಸಲಾಯಿತು.
ಸಹಯೋಗ ನೀಡಿದ ತಂಡಗಳು
ನಕ್ಸಲ್ ನಿಗ್ರಹ ಪಡೆ ಕಾರ್ಕಳ, ಯುವಸ್ಪಂದನ ತಂಡ ಮುಂಡ್ಲಿ, ಜಿಲ್ಲಾ ಪಂಚಾಯತ್ ಮಾಲಿನ್ಯ ನಿಯಂತ್ರಣ ಮಂಡಳಿ, ಅರಣ್ಯ ಇಲಾಖೆ, ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ, ನಲ್ಲೂರು ಗ್ರಾಮ ಪಂಚಾಯತ್ ಅಭಿಯಾನದಲ್ಲಿ ಪಾಲ್ಗೊಂಡಿತ್ತು. ಮುಂದಿನ ದಿನಗಳಲ್ಲಿ ಆಗುಂಬೆ, ಕುದುರೆಮುಖ ಕಡೆಗೂ ನಮ್ಮ ಅಭಿಯಾನ ಮುಂದುವರಿಯಲಿದೆ ಎಂದು ಸ್ವಚ್ಛ ಕಾರ್ಕಳ ಬ್ರಿಗೇಡ್ ತಿಳಿಸಿದೆ.




























