ಜ. 18 : ಕಾರ್ಲ ಕಜೆ ಬ್ರಾಂಡ್‌ ಬಿಡುಗಡೆ-ಮಾರಾಟ

ಕಾರ್ಕಳ : ಕಾರ್ಕಳದ ಕುಚ್ಚಲಕ್ಕಿಯನ್ನು ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಪ್ರಸಿದ್ಧಿಗೆ ತರುವ ನಿಟ್ಟಿನಲ್ಲಿ ಜ. 18ರಂದು ಕಾರ್ಲ ಕಜೆ ಬ್ರ್ಯಾಂಡ್‌ ಬಿಡುಗಡೆ ಮಾಡಲಾಗುವುದು ಎಂದು ಶಾಸಕ ವಿ. ಸುನಿಲ್‌ ಕುಮಾರ್‌ ಹೇಳಿದರು.

ಶನಿವಾರ ಪತ್ರಿಕಾಗೋಷ್ಠಿ ಆಯೋಜಿಸಿ ಮಾತನಾಡಿದ ಶಾಸಕರು, ನಮ್ಮೂರಿನ ರೈತರಿಗೆ ಅನುಕೂಲವಾಗುವ ಉದ್ದೇಶದಿಂದ ತೋಟಗಾರಿಕಾ ಮತ್ತು ಕೃಷಿ ಇಲಾಖೆ, ತಾಲೂಕಿನ ರೈತ ಪರ ಸಂಘಗಳ ಸಹಕಾರದೊಂದಿಗೆ ಕಾರ್ಲ ಕಜೆ ಹಾಗೂ ಕಾರ್ಕಳದ ಬಿಳಿ ಬೆಂಡೆಯನ್ನು ಬ್ರಾಂಡ್‌ ಮಾಡಲಾಗುತ್ತಿದ್ದು ಅಂದು ಕೃಷಿ ಸಚಿವ ಬಿ.ಸಿ. ಪಾಟೀಲ್‌ ಚಾಲನೆ ನೀಡಲಿರುವರು ಎಂದವರು ತಿಳಿಸಿದರು.

ಆರೋಗ್ಯವರ್ಧಕ, ರುಚಿಕರ ಮತ್ತು ಅಧಿಕ ನಾರಿನಾಂಶ ಹೊಂದಿರುವ ಈ ಅಕ್ಕಿಯಲ್ಲಿ ವಿಟಮಿನ್‌ ಬಿ1 ಮತ್ತು ವಿಟಮಿನ್‌ ಬಿ2 ಹೇರಳವಾಗಿದೆ. ಡಯಾಬಿಟೀಸ್‌ ನಿಯಂತ್ರಣಕ್ಕೂ ಇದರ ಅನ್ನ ಸಹಕಾರಿ. ತಾಲೂಕಿನಾದ್ಯಂತ ಈ ತಳಿಯನ್ನು ವ್ಯಾಪಕವಾಗಿ ಬೆಳೆಸುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಪರಂಪರಾ ಸಹಕಾರಿ ಸಂಘದ ಸಹಕಾರದೊಂದಿಗೆ ಅಭಿಯಾನ ಮಾಡಲಾಗುವುದು ಎಂದು ಸುನಿಲ್‌ ಕುಮಾರ್‌ ಹೇಳಿದರು.

ಕೃಷಿ ವಿಜ್ಞಾನಿಗಳೊಂದಿಗೆ ಸಂವಾದ
ಜ. 18ರಂದು ಕುಕ್ಕುಂದೂರು ಗ್ರಾ.ಪಂ. ಮೈದಾನದಲ್ಲಿ ಕಾರ್ಲ ಕಜೆ ಪ್ರದರ್ಶನ ಕಾರ್ಯಕ್ರಮದಲ್ಲಿ ಕೃಷಿ ವಿಜ್ಞಾನಿಗಳೊಂದಿಗೆ ಸಂವಾದ ಏರ್ಪಡಿಸಲಾಗಿದೆ. ಕೃಷಿಕರು ಇದರ ಪ್ರಯೋಜನ ಪಡೆದುಕೊಳ್ಳುವಂತೆ ಶಾಸಕರು ಮನವಿ ಮಾಡಿಕೊಂಡರು.

ತಾಲೂಕಿನ 900 ಹೆಕ್ಟೇರ್‌ನಲ್ಲಿ ಬೇಸಾಯ
ಪ್ರಧಾನಿ ಮೋದಿಯವರ ಆತ್ಮನಿರ್ಭರ ಕಲ್ಪನೆಯಂತೆ ನಮಗೆ ಬೇಕಾದ ಉತ್ಪನ್ನವನ್ನು ನಾವೇ ಬೆಳೆಯುವ ನಿಟ್ಟಿನಲ್ಲಿ ಪೂರಕ ವಾತಾವರಣ ನಿರ್ಮಿಸಲಾಗುವುದು. ಈಗಾಗಲೇ ಕಾರ್ಕಳ ತಾಲೂಕಿನಲ್ಲಿ 900 ಹೆಕ್ಟೇರ್‌ ಪ್ರದೇಶದಲ್ಲಿ ಭತ್ತ ಬೆಳೆಯಲಾಗುತ್ತಿದ್ದು, 5 ಸಾವಿರ ಕ್ವಿಂಟಾಲ್‌ ಅಕ್ಕಿ ದಾಸ್ತಾನಿದೆ. ಪರಂಪರಾ ಸಹಕಾರಿ ಸಂಘದ ಸಹಕಾರದೊಂದಿಗೆ ಮುಂದಿನ ದಿನಗಳಲ್ಲಿ ತಾಲೂಕಿನಾದ್ಯಂತ ಈ ತಳಿ ಬೇಸಾಯಕ್ಕೆ ಪ್ರೋತ್ಸಾಹ ನೀಡಲಾಗುವುದು. ಕಾರ್ಕಳದ ಜನರು ಪ್ರಥಮವಾಗಿ ಇಂತಹ ಅಕ್ಕಿಯನ್ನು ಖರೀದಿ ಮಾಡುವ ಮೂಲಕ ಪ್ರೋತ್ಸಾಹ ನೀಡಬೇಕೆಂದು ಸುನಿಲ್‌ ಕುಮಾರ ಮನವಿ ಮಾಡಿಕೊಂಡರು.

















































































error: Content is protected !!
Scroll to Top