ಬೆಂಗಳೂರು: ರಾಜ್ಯದಲ್ಲಿ ಹಕ್ಕಿಜ್ವರ ಭೀತಿ ಶುರುವಾಗಿರುವ ಹಿನ್ನೆಲೆಯಲ್ಲಿ ಕೋಳಿ ಹಾಗೂ ಮೊಟ್ಟೆ ಖರೀದಿಗೆ ಜನರು ಹಿಂದೇಟು ಹಾಕುತ್ತಿದ್ದು, ಈ ನಡುವಲ್ಲೇ ಸ್ಪಷ್ಟನೆ ನೀಡಿರುವ ರಾಜ್ಯ ಸರ್ಕಾರ, ಹಕ್ಕಿ ಜ್ವರ ರಾಜ್ಯ ಪ್ರವೇಶಿಸಿಲ್ಲ. ರಾಜ್ಯದಲ್ಲಿ ಕೋಳಿ ಉತ್ಪನ್ನಗಳ ಮೇಲೆ ಯಾವುದೇ ರೀತಿಯ ನಿರ್ಬಂಧಗಳನ್ನೂ ಹೇಲುವುದಿಲ್ಲ ಎಂದು ಹೇಳಿದೆ.
ರಾಜ್ಯದಲ್ಲಿ ಕೋಳಿ ಉತ್ಪನ್ನಗಳ ಮೇಲೆ ಯಾವುದೇ ನಿರ್ಬಂಧಗಳಿಲ್ಲ. ಜನರು ಯಾವುದೇ ಆತಂಕವಿಲ್ಲದೆ ಕೋಳಿ ಹಾಗೂ ಮೊಟ್ಟೆಯನ್ನು ಸೇವನೆ ಮಾಡಬಹುದಾಗಿದೆ ಎಂದು ಸಚಿವ ಪ್ರಭು ಚೌವ್ಹಾಣ್ ಅವರು ಹೇಳಿದ್ದಾರೆ.
ಮಂಗಳೂರಿನಲ್ಲಿ ಕಾಗೆಗಳು ಹಾಗೂ ಚಿಕ್ಕಬಳ್ಳಾಪುರದ ಅಮಾನಿ ಕೆರೆಯಲ್ಲಿ ವಲಸೆ ಹಕ್ಕಿಗಳ ಸಾವಿಗೆ ಹಕ್ಕಿ ಜ್ವರ ಕಾರಣವಲ್ಲ ಎಂದು ಹೆಬ್ಬಾಳದ ಪಶುವೈದ್ಯಕೀಯ ಕಾಲೇಜಿನ ಪ್ರಯೋಗಾಲಯ ವರದಿ ನೀಡಿದ್ದು, ಆಂತಕ ಪಡುವ ಅಗತ್ಯವಿಲ್ಲ. ಶಿವಮೊಗ್ಗದಲ್ಲಿ ಅತಿ ಮಳೆಯಿಂದಾಗಿ ಹಲವು ವಲಸೆ ಹಕ್ಕಿಗಳು ಮೃತಪಟ್ಟಿದ್ದವು. ಆದರೂ ಅವುಗಳ ಅವಶೇಷಗಳನ್ನು ಪ್ರಯೋಗಾಲಯಕ್ಕೆ ರವಾನೆ ಮಾಡಿದ್ದು, ವರದಿ ನಿರೀಕ್ಷಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಹಕ್ಕಿಜ್ವರ ರಾಜ್ಯಕ್ಕೆ ಬರದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ಕೇರಳ ಗಡಿಗಳ ಚೆಕ್’ಪೋಸ್ಟ್ ಗಳಲ್ಲಿ ದಿನದ 24 ತಾಸು ಸಿಬ್ಬಂದಿ ನಿಯೋಜಿಸಲಾಗಿದ್ದು, ಕಟ್ಟೆಚ್ಚರ ವಹಿಸಲಾಗುತ್ತಿದೆ. ಜೊತೆಗೆ ಕೋಳಿ ಮತ್ತು ಕೋಳಿ ಉತ್ಪನ್ನಗಳು ರಾಜ್ಯಕ್ಕೆ ಪ್ರವೇಶ ಮಾಡುವ ಸಂದರ್ಭದಲ್ಲಿ ಸಂಪೂರ್ಣ ಸ್ಯಾನಿಟೈಸ್ ಮಾಡಲಾಗುತ್ತಿದೆ ಎಂದಿದ್ದಾರೆ.
ಕೇರಳ ರಾಜ್ಯದ ಕೋಳಿ ಉತ್ಪನ್ನಗಳನ್ನು ಹೊರತುಪಡಿಸಿ ಯಾವುದೇ ರಾಜ್ಯದ ಉತ್ಪನ್ನಗಳ ಮೇಲೂ ರಾಜ್ಯ ನಿರ್ಬಂಧ ಹೇರಿಲ್ಲ. ಗಡಿ ಪ್ರದೇಶಗಳಲ್ಲಿ ಈಗಾಗಲೇ ಹೈ ಅಲರ್ಟ್ ಘೋಷಿಸಲಾಗಿದೆ ಎಂದು ತಿಳಿಸಿದ್ದಾರೆ.







































