Saturday, October 16, 2021
spot_img
Homeಸ್ಥಳೀಯ ಸುದ್ದಿಅಸಹಾಯಕ- ಅಶಕ್ತ- ಅನಾಥರ ಪಾಲಿನ ಆಶಾಕಿರಣ ಆಯಿಷಾ ಹಿರಿಜೀವಗಳಿಗೆ ಕೈಯರೇ ತುತ್ತು ನೀಡುತ್ತಿರುವ ಅಮ್ಮ

ಅಸಹಾಯಕ- ಅಶಕ್ತ- ಅನಾಥರ ಪಾಲಿನ ಆಶಾಕಿರಣ ಆಯಿಷಾ ಹಿರಿಜೀವಗಳಿಗೆ ಕೈಯರೇ ತುತ್ತು ನೀಡುತ್ತಿರುವ ಅಮ್ಮ

ಕಾರ್ಕಳ : ಅಶಕ್ತರ, ಅನಾಥರ ಪಾಲಿನ ಅಪೂರ್ವ ಅಮ್ಮ ಇವರು. ಹಿರಿಜೀವಗಳ ಆರೈಕೆಯಲ್ಲೇ ನೆಮ್ಮದಿ ಕಾಣುವ ಸಮಾಜ ಸೇವಕಿಯಿವರು. ಸದ್ದು-ಸುದ್ದಿಯಿಲ್ಲದೇ ತನ್ನ ಅತ್ಯಲ್ಪ ಆದಾಯವನ್ನೇ ಹಿರಿಜೀವಗಳ ಸೇವೆಗಾಗಿಯೇ ಮುಡಿಪಾಗಿಸಿಟ್ಟ ಮಾದರಿ ಮಹಿಳೆಯಿವರು.
ಇವರೇ ಕಾರ್ಕಳ ನಗರದ ಜರಿಗುಡ್ಡೆ ನಿವಾಸಿ ಆಯಿಷಾ. ಹೌದು, ಯಾವುದೇ ಪ್ರಚಾರ ಬಯಸದೇ ಹಿರಿ ಜೀವಗಳ ಪಾಲನೆ-ಪೋಷಣೆಯಲ್ಲೇ ತನ್ನ ಪೂರ್ತಿ ಸಮಯ ಕಳೆಯುತ್ತಿದ್ದಾರೆ ಆಯಿಷಾ. ತನ್ನ ಕೈಯರೇ ತುತ್ತು ಅನ್ನ ನೀಡಿ ಸಾರ್ಥಕತೆ ಕಾಣುವ, ಶ್ರೀಮಂತೆಯಲ್ಲದ್ದಿರೂ ಹೃದಯ ಶ್ರೀಮಂತಿಕೆಯಿಂದ ಮನೆಮಾತಾಗಿದ್ದಾರೆ ಆಯಿಷಾ.

ಮನೆ ಪಕ್ಕ ಆಶ್ರಮ
ಕಳೆದ ಮೂರು ವರ್ಷಗಳಿಂದ ತಮ್ಮ ಮನೆ ಪಕ್ಕದಲ್ಲಿ ಅಳಿಯ ಹಾಗೂ ಮಗಳು ಖರೀದಿಸಿದ ಮನೆಯನ್ನು ಆಶ್ರಮವಾಗಿ ಮಾಡಿದ್ದಾರೆ ಆಯಿಷಾ. ಪ್ರಸ್ತುತ 15 ಮಂದಿ ಅನಾಥರ ಸಲಹುತ್ತಿದ್ದಾರೆ. ವಾರಕ್ಕೊಮ್ಮೆ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ, ತಪಾಸಣೆ ಮಾಡಿಸುತ್ತಾರೆ. ಕೆಲವರು ಮಾನಸಿಕ ಸ್ಥಿಮಿತ ಕಳೆದುಕೊಂಡು ವಿಚಿತ್ರವಾಗಿ ವರ್ತಿಸುತ್ತಿದ್ದರೂ ಅವರನ್ನು ಅತ್ಯಂತ ತಾಳ್ಮೆ, ಜಾಣ್ಮೆಯಿಂದ ನಿಭಾಯಿಸುತ್ತಿರುವ ರೀತಿ ಮಾತ್ರ ಮೆಚ್ಚತಕ್ಕ ವಿಚಾರವೇ ಸರಿ.

ಶವ ಸಂಸ್ಕಾರ
ಆಯಿಷಾ ಅವರ ಮಾನವೀಯ, ಸಾಮಾಜಿಕ ಕಾರ್ಯಕ್ಕೆ ಮತ್ತೊಂದು ಉದಾಹರಣೆ ವಾರಿಸುದಾರರಿಲ್ಲದ ಶವ ಅಂತ್ಯಸಂಸ್ಕಾರ ನೆರವೇರಿಸುವುದು. ಪೊಲೀಸ್ ಇಲಾಖಾ ಸಹಕಾರದೊಂದಿಗೆ ಬಡ, ಅನಾಥ, ಕೊಳೆತ ಸ್ಥಿತಿಯಲ್ಲಿದ್ದಂತಹ ದೇಹಗಳನ್ನು ರುದ್ರಭೂಮಿಗೆ ಸಾಗಿಸಿ ಮುಕ್ತಿ ನೀಡುವ ಕಾರ್ಯ ಮಾಡುತ್ತಿದ್ದಾರೆ. ಈ ಮೂಲಕ ಓರ್ವ ಮಹಿಳೆಯಾಗಿ ಅಸಾಧಾರಣ ಸಾಧನೆ ಮೆರೆದಿದ್ದಾರೆ.

ಆಂಬ್ಯುಲನ್ಸ್ ಸೇವೆ
ಕಾರ್ಕಳದ ಖಾಸಗಿ ಆಸ್ಪತ್ರೆಯೊಂದರಲ್ಲಿ 18 ವರ್ಷಗಳ ಕಾಲ ನರ್ಸ್ ಆಗಿ ದುಡಿಯುತ್ತಿದ್ದ ಆಯಿಷಾ ಕಾರ್ಕಳದಲ್ಲಿ ಆಂಬ್ಯುಲನ್ಸ್ ಕೊರತೆಯನ್ನು ಮನಗಂಡು 1998ರಲ್ಲಿ ಬ್ಯಾಂಕ್ ಸಾಲ ಪಡೆದು ಆಂಬ್ಯುಲನ್ಸ್ ಖರೀದಿಸಿದ್ದರು. ಇದೀಗ ಒಟ್ಟು 4 ಆಂಬ್ಯುಲನ್ಸ್ ಹೊಂದಿರುವ ಆಯಿಷಾ ಅದನ್ನೇ ಆದಾಯದ ಮೂಲವನ್ನಾಗಿಸಿದ್ದಾರೆ.

ಹಲವಾರು ಭಾಷಾ ಪರಿಣಿತರು
ಕನ್ನಡ, ಹಿಂದಿ, ತುಳು, ಉರ್ದು, ಮಲೆಯಾಳಿ, ಕೊಂಕಣಿ ಹೀಗೆ ಹಲವಾರು ಭಾಷೆಗಳಲ್ಲಿ ನಿರರ್ಗಳವಾಗಿ ಮಾತನಾಡುವ ಆಯಿಷಾ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ, ಜಾತಿ ಧರ್ಮದ ಭೇದವಿಲ್ಲದೇ ತನ್ನ ಕುಟುಂಬವೆಂಬಂತೆ ಅಸಹಾಯಕರ ಲಾಲನೆ-ಪಾಲನೆಯಲ್ಲಿ ತೊಡಗಿದ್ದಾರೆ. ಪತಿ ಮಹಮ್ಮದ್ ನಾಸಿರ್ ಆಯಿಷಾ ಅವರ ಸೇವಾ ಕೈಂಕರ್ಯಕ್ಕೆ ಕೈ ಜೋಡಿಸುತ್ತಿದ್ದಾರೆ. ಮದುವೆಯಾಗಿ ಮುಂಬೈಯಲ್ಲಿರುವ ಹಿರಿ ಮಗಳು ಶೈನಾ, ಕಿರಿ ಮಗಳು ಪಂಸಿನ್ ಕೂಡ ಸಹಕಾರ ನೀಡುತ್ತಿದ್ದಾರೆ ಎನ್ನುತ್ತಾರೆ ಅವರು.

ಈಗಾಗಲೇ 15 ಮಂದಿ ಅಸಹಾಯಕರು ಇಲ್ಲಿದ್ದು, ಮುಂದಿನ ದಿನಗಳಲ್ಲಿ ಇದರ ಸಂಖ್ಯೆ ಹೆಚ್ಚಾಗುವ ಸಂಭವವಿದೆ. ರಸ್ತೆಯಲ್ಲಿ ಅನಾಥರಾಗಿ ಅಲೆದಾಡುತ್ತಿದ್ದವರನ್ನೂ ಪೊಲೀಸರು ಇಲ್ಲಿಗೆ ತಂದೊಪ್ಪಿಸಿದ್ದಾರೆ. ಇವರ ಜೀವನ ನಿರ್ವಹಣೆಗೆ ಕನಿಷ್ಠ ಪಕ್ಷ ವೃದ್ಧಾಪ್ಯ ವೇತನ, ಸುಸಜ್ಜಿತ ಆಶ್ರಮ ಕಟ್ಟಲು ಸರಕಾರದಿಂದ ಸೂಕ್ತ ನಿವೇಶನ, ದಾನಿಗಳ ನೆರವು ಬೇಕಾಗಿದೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!