ಜಿಲ್ಲೆಯಲ್ಲಿ 130 ಗ್ರಾ.ಪಂ. ಬಿಜೆಪಿ ಬೆಂಬಲಿತರ ಪಾಲು- ಸುರೇಶ್‌ ನಾಯಕ್‌

ಜಿಲ್ಲೆಯ 154 ಗ್ರಾ.ಪಂ.ಗಳಲ್ಲಿ 130 ಬಿಜೆಪಿ ಬೆಂಬಲಿತರ ಪಾಲಾಗಲಿದೆ-ಕುಯಿಲಾಡಿ ಸುರೇಶ್‌ ನಾಯಕ್‌
ಕಾರ್ಕಳ : ಕೇಂದ್ರ ಹಾಗೂ ರಾಜ್ಯ ಸರಕಾರದ ಅಭಿವೃದ್ಧಿ ಕಾರ್ಯಗಳ ಫಲವಾಗಿ ಉಡುಪಿ ಜಿಲ್ಲೆಯ 154 ಗ್ರಾ.ಪಂ.ಗಳ ಪೈಕಿ 130 ಗ್ರಾ.ಪಂ. ಬಿಜೆಪಿ ಬೆಂಬಲಿತರ ಪಾಲಾಗಲಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್‌ ನಾಯಕ್‌ ಅಭಿಪ್ರಾಯಪಟ್ಟರು.
ಅವರು ಡಿ. 21ರಂದು ಕಾರ್ಕಳ ಮಂಜುನಾಥ ಪೈ ಸ್ಮಾರಕ ಸಭಾಭವನದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದರು. ಕಾರ್ಕಳ ಕ್ಷೇತ್ರವನ್ನು ಶಾಸಕ ವಿ. ಸುನಿಲ್‌ ಮಾದರಿ ಎಂಬಂತೆ ಅಭಿವೃದ್ಧಿಪಡಿಸಿದ್ದಾರೆ. ದಾಖಲೆ ಪ್ರಮಾಣದಲ್ಲಿ ಇಲ್ಲಿ ಕಿಂಡಿ ಅಣೆಕಟ್ಟು ನಿರ್ಮಾಣವಾಗಿದೆ. ಸ್ಪಷ್ಟವಾದ ಯೋಜನೆಯೊಂದಿಗೆ ಸುನಿಲ್‌ ಕುಮಾರ್‌ ಅವರು ಕಾರ್ಕಳವನ್ನು ಸರ್ವಾಂಗೀಣವಾಗಿ ಅಭಿವೃದ್ಧಿಪಡಿಸುತ್ತಿದ್ದು ಪಂಚಾಯತ್‌ ಚುನಾವಣೆಯಲ್ಲಿ ಇದೆಲ್ಲವೂ ಮತಗಳಾಗಿ ಬಿಜೆಪಿ ಬೆಂಬಲಿತರ ಗೆಲುವಿಗೆ ಸಹಕಾರಿಯಾಗಲಿದೆ ಎಂದವರು ಹೇಳಿದರು.

ಡೀಮ್ಡ್‌ ಫಾರೆಸ್ಟ್‌ ಸಮಸ್ಯೆ ಬಗೆಹರಿಯಲಿದೆ-ಸುನಿಲ್‌ ಕುಮಾರ್
ಎಸ್.‌ ಎಂ. ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಅರಣ್ಯ ಪ್ರದೇಶವನ್ನು ಡೀಮ್ಡ್‌ ಫಾರೆಸ್ಟ್‌ ಆಗಿ ಗುರುತಿಸಲಾಗಿತ್ತು. ಅನಂತರ ಅಲ್ಲಿನ ನಿವಾಸಿಗಳಿಗೆ, ಕೃಷಿ ಮಾಡಿಕೊಂಡಿದ್ದವರಿಗೆ ಹಕ್ಕು ದೊರೆಯದಂತಾಯಿತು. ಡೀಮ್ಡ್‌ ಫಾರೆಸ್ಟ್‌ ನಿವಾಸಿಗಳಿಗೆ ಕೆಲ ತಿಂಗಳಲ್ಲೇ ಹಕ್ಕು ಪತ್ರ ದೊರೆಯಲಿದೆ. ಈ ನಿಟ್ಟಿನಲ್ಲಿ ಬಿಜೆಪಿ ಸರಕಾರ ಪೂರಕ ಕ್ರಮ ಕೈಗೊಂಡಿದೆ. ಈ ಕುರಿತು ಕಾರ್ಯಕರ್ತರು ಅಂಜಿಕೆಯಿಲ್ಲದೇ ಧೈರ್ಯವಾಗಿಯೇ ಹೇಳಬಹುದು ಎಂದು ಸರಕಾರದ ಮುಖ್ಯ ಸಚೇತಕ ವಿ. ಸುನಿಲ್‌ ಕುಮಾರ್‌ ಹೇಳಿದರು.

ಸುನಿಲ್‌ ಸವಾಲು
ಕಾರ್ಕಳ ಹೆಬ್ರಿ ತಾಲೂಕಿನಲ್ಲಿ ಪಕ್ಷೇತರ ಎಂಬ ಹೆಸರಲ್ಲಿ ಕಾಂಗ್ರೆಸ್‌ನವರು ಸ್ಪರ್ಧಿಸುತ್ತಿದ್ದಾರೆ. ಇಲ್ಲಿನ 492 ಸ್ಥಾನಗಳಲ್ಲೂ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಿದ್ದಾರೆ ಎನ್ನುವುದನ್ನು ನಾವು ಘೋಷಣೆ ಮಾಡುತ್ತೇವೆ. ಕಾಂಗ್ರೆಸ್‌ ಕೂಡ ತಮ್ಮ ಅಭ್ಯರ್ಥಿಗಳ ಕುರಿತು ಬಹಿರಂಗವಾಗಿ ಹೇಳಲು ಸಿದ್ಧವಿದೆಯೇ ಎಂದು ಸುನಿಲ್‌ ಕುಮಾರ್‌ ಸವಾಲು ಹಾಕಿದರು.

ನಲ್ಲೂರು ಕಾಂಗ್ರೆಸ್‌ ಮುಕ್ತ
ನಲ್ಲೂರು ಗ್ರಾ.ಪಂ.ನ 15 ಸ್ಥಾನಗಳ ಪೈಕಿ ಬಿಜೆಪಿ ಬೆಂಬಲಿತ 9 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದು, ನಲ್ಲೂರು ಇದೀಗ ಕಾಂಗ್ರೆಸ್‌ ಮುಕ್ತವಾಗಲಿದೆ. ಒಟ್ಟು 36 ಸ್ಥಾನಗಳಲ್ಲಿ ಬಿಜೆಪಿ ಬೆಂಬಲಿತರು ಅವಿರೋಧ ಆಯ್ಕೆಯಾಗಿದ್ದು, ಬಂಡಾಯವಾಗಿ ಸ್ಪರ್ಧಿಸುತ್ತಿರುವವರು ನಿವೃತ್ತಿ ಘೋಷಿಸುವ ಸಾಧ್ಯತೆಯಿದೆ ಎಂದು ಶಾಸಕ ವಿ. ಸುನಿಲ್‌ ಕುಮಾರ್‌ ಹೇಳಿದರು. ಕಾರ್ಕಳದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ, ರಾಮಸಮುದ್ರ ಸ್ವಚ್ಛತೆ, ಕೋಟಿ ಚೆನ್ನಯ್ಯ ಥೀಮ್ ಪಾರ್ಕ್ ಅಭಿವೃದ್ಧಿ, ಒಳಾಂಗಣ ಕ್ರೀಡಾಂಗಣ, ಕಾರ್ಕಳವನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಲಿದ್ದೇವೆ ಎಂದವರು ಹೇಳಿದರು.
ಬಿಜೆಪಿ ಹಿರಿಯ ಮುಖಂಡ ಬೋಳ ಪ್ರಭಾಕರ ಕಾಮತ್ ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಸನ್ಮಾನ
ರಾಜ್ಯ ಪ್ರಶಸ್ತಿ ಪುರಸ್ಕೃತ ಎಂ.ಕೆ. ವಿಜಯಕುಮಾರ್, ಗೇರು ನಿಗಮದ ಅಧ್ಯಕ್ಷ ಮಣಿರಾಜ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.
ಬಿಜೆಪಿ ಕ್ಷೇತ್ರಾಧ್ಯಕ್ಷ ಮಹಾವೀರ ಹೆಗ್ಡೆ ಮಾತನಾಡಿದರು. ಬಿಜೆಪಿ ಜಿಲ್ಲಾ ಕಾರ್ಯದರ್ಶಿ ರೇಶ್ಮಾ ಉದಯ ಶೆಟ್ಟಿ, ಕಾರ್ಕಳ ಪ್ರಭಾರಿ ರವಿ ಅಮೀನ್‌, ಯುವ ಮೋರ್ಚಾ ಜಿಲ್ಲಾಧ್ಯಕ್ಷ ವಿಖ್ಯಾತ್ ಶೆಟ್ಟಿ, ಜಯರಾಮ ಸಾಲ್ಯಾನ್, ಕುತ್ಯಾರು ನವೀನ್ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸುಮಾ ಪ್ರಾರ್ಥಿಸಿ, ರವೀಂದ್ರ ಕುಕ್ಕುಂದೂರು ಸ್ವಾಗತಿಸಿದರು. ನವೀನ್ ನಾಯಕ್ ನಿರೂಪಿಸಿ, ಸತೀಶ್ ಮುಟ್ಲುಪ್ಪಾಡಿ ವಂದಿಸಿದರು.





























































































































































































































error: Content is protected !!
Scroll to Top