193 ರಾಷ್ಟ್ರಗಳ ಸದಸ್ಯತ್ವ ಹೊಂದಿರುವ ವಿಶ್ವಸಂಸ್ಥೆಯ ಸ್ಥಾಪನೆ ಆಗಿ 75 ವರ್ಷಗಳು ತುಂಬಿದವು. ಕೊರೊನ ಕಂಟಕ ಇಲ್ಲದಿರುತ್ತಿದ್ದರೆ ಅದೊಂದು ಮಹೋನ್ನತ ಜಾಗತಿಕ ಸಂಭ್ರಮದ ವಿದ್ಯಮಾನ ಆಗಬೇಕಿತ್ತು. ಆದರೂ ಸಂತೋಷದ ಆಚರಣೆಯ ಕೊರತೆ ಆಗಿಲ್ಲ ಎನ್ನುವುದು ವಿಶ್ವಸಂಸ್ಥೆಯ ಹೆಗ್ಗಳಿಕೆ.
ಅಂದು 1945ರ ಸೆಪ್ಟೆಂಬರ್ ತಿಂಗಳ ಎರಡನೆಯ ತಾರೀಕು. ಆಗ ತಾನೇ ಎರಡನೇ ವಿಶ್ವ ಯುದ್ಧ ಮುಕ್ತಾಯ ಕಂಡಿತ್ತು. ಹಿಟ್ಲರ್, ಮುಸೊಲಿನಿ ಮೊದಲಾದ ಸರ್ವಾಧಿಕಾರದ ಮುಖಗಳು ಸೋತು ಹಿನ್ನೆಲೆಗೆ ಸರಿದಿದ್ದವು. ಆರು ವರ್ಷಗಳ ದೀರ್ಘ ಅವಧಿಯಲ್ಲಿ ರಕ್ತಸಿಕ್ತ ಯುದ್ಧ ನಡೆದಿತ್ತು. ಮಡಿದ ಸೈನಿಕರ ಸಂಖ್ಯೆಯೇ ಅಂದಾಜು 2.5 ಕೋಟಿ! ಮಡಿದ ಜನಸಾಮಾನ್ಯರ ಸಂಖ್ಯೆ ಹತ್ತಿರ ಹತ್ತಿರ 3.5 ಕೋಟಿ! ನಾಜಿ ಹತ್ಯಾ ಕಾಂಡ ನಡೆಸಿದ ಕಾನ್ಸೆಂಟ್ರೇಶನ್ ಕ್ಯಾಂಪಗಳಲ್ಲಿ ಉಸಿರು ಕಟ್ಟಿ ಸತ್ತ ಯಹೂದಿ ಜನಗಳ ಸಂಖ್ಯೆಯೇ ಅಂದಾಜು 60 ಲಕ್ಷ! ಪರ್ಲ್ ಹಾರ್ಬರ್ ದಾಳಿ, ಹಿರೋಶಿಮಾ – ನಾಗಸಾಕಿ ದ್ವೀಪಗಳ ಸ್ಫೋಟಗಳು ನಡೆದು ಎರಡನೇ ವಿಶ್ವ ಸಮರವು ಮುಕ್ತಾಯ ಆಗಿತ್ತು. ಯುದ್ಧಕ್ಕೆ ಶತ್ರು ಮತ್ತು ಮಿತ್ರ ದೇಶಗಳು ಸೇರಿ ಖರ್ಚು ಮಾಡಿದ ಹಣ ಅಂದಾಜು 298 ಲಕ್ಷ ಕೋಟಿ ರೂಪಾಯಿ! ಅದೂ ಆ ಕಾಲಕ್ಕೆ.
ಮೊದಲ ವಿಶ್ವ ಸಮರ ಮುಗಿದ ಕೂಡಲೇ ಸ್ಥಾಪನೆ ಆಗಿದ್ದ ಮತ್ತು ಅಂತಾರಾಷ್ಟ್ರೀಯ ಶಾಂತಿಯನ್ನು ಸ್ಥಾಪನೆ ಮಾಡುವ ಉದ್ದೇಶದ ‘ಲೀಗ್ ಆಫ್ ನೇಶನ್’ ಸಂಸ್ಥೆಯು ಸೋತು ಮಕಾಡೆ ಮಲಗಿತ್ತು. ಎರಡನೇ ವಿಶ್ವಯುದ್ಧವನ್ನು ತಡೆಯುವ ಪ್ರಯತ್ನದಲ್ಲಿ ಲೀಗ್ ಸೋತಿದ್ದು ಜಗತ್ತಿಗೆ ಗೊತ್ತಾಗಿ ಹೋಗಿತ್ತು. ಎರಡನೇ ವಿಶ್ವ ಯುದ್ಧ ಮುಗಿದ ನಂತರ ಮತ್ತೆ ವಿಶ್ವ ಶಾಂತಿ ಮತ್ತು ಸೌಹಾರ್ದತೆಯ ಸ್ಥಾಪನೆಯ ಕೂಗು ಪ್ರಬಲವಾಗಿ ಕೇಳಿ ಬಂದಿತು.

ಅದರ ಫಲಶ್ರುತಿಯಾಗಿ ವಿಶ್ವಸಂಸ್ಥೆಯ (UNO) ಉದಯವಾಯಿತು.1945 ಏಪ್ರಿಲ್ 25ರಂದು ಸ್ಯಾನ್ ಫ್ರಾನ್ಸಿಸ್ಕೋ ನಗರದಲ್ಲಿ ಸಮ್ಮೇಳನವು ನಡೆದು ಅದರ ನಿಯಮಗಳ ಕರಡು ಸಿದ್ಧವಾಯಿತು.( ಗಮನಿಸಿ ಆಗ ವಿಶ್ವ ಯುದ್ಧವಿನ್ನೂ ಮುಗಿದಿರಲಿಲ್ಲ). ಯುದ್ಧದ ನಂತರ 1945ರ ಅಕ್ಟೋಬರ್ 24 ರಂದು ವಿಶ್ವಸಂಸ್ಥೆಯ ಸ್ಥಾಪನೆಯ ಪೂರ್ವ ವಿಧಿವಿಧಾನಗಳನ್ನು ಅಂತಿಮ ಗೊಳಿಸಲಾಯಿತು. ಆರಂಭದಲ್ಲಿ ಕೇವಲ 45 ರಾಷ್ಟ್ರಗಳು ಕರಡಿಗೆ ಸಹಿ ಮಾಡಿದ್ದವು. ಮುಂದೆ ಶಾಂತಿಪ್ರಿಯ ರಾಷ್ಟ್ರಗಳ ಸಂಖ್ಯೆ ಜಾಸ್ತಿ ಆಗುತ್ತಾ ಹೋಯಿತು. ಈಗ ಜಗತ್ತಿನ 193 ರಾಷ್ಟ್ರಗಳು ವಿಶ್ವ ಸಂಸ್ಥೆಯ ಸದಸ್ಯತ್ವವನ್ನು ಪಡೆದಿವೆ. ಅದರ ಪ್ರಧಾನ ಕಚೇರಿಯು ನ್ಯೂಯಾರ್ಕ್ ನಗರದಲ್ಲಿ ಇದೆ. ಆಂಟೋನಿಯೊ ಗುಟೆರಸ್ ಈಗ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಗಿದ್ದಾರೆ.
ವಿಶ್ವ ಸಂಸ್ಥೆಯು ನಡೆದು ಬಂದ ಹಾದಿಯನ್ನು ಗಮನಿಸಿದಾಗ ಅದು ಹೂವಿನ ಹಾಸಿಗೆ ಖಂಡಿತ ಆಗಿರಲಿಲ್ಲ. ಅಮೆರಿಕ, ರಷ್ಯಾ, ಚೀನ ಮೊದಲಾದ ರಾಷ್ಟ್ರಗಳ ಮುಸುಕಿನ ಗುದ್ದಾಟದಲ್ಲಿ ವಿಶ್ವ ಸಂಸ್ಥೆಯು ಸಾಕಷ್ಟು ಸವಾಲುಗಳನ್ನು ಎದುರಿಸಬೇಕಾಯಿತು. ಭಾರತದ ಪ್ರಾಬಲ್ಯವನ್ನು ಮುರಿಯಲು ಚೀನದಂತ ರಾಷ್ಟ್ರಗಳು ತೊಡೆ ತಟ್ಟಿ ನಿಂತಿರುವುದು ಕೂಡ ಸುಳ್ಳಲ್ಲ.
ವಿಶ್ವ ಸಂಸ್ಥೆಯು ಆರು ಅಂಗಗಳನ್ನು ಹೊಂದಿದ್ದು ಅವೆಲ್ಲವೂ ಒಂದಕ್ಕೊಂದು ಪೂರಕವಾಗಿ ಕೆಲಸ ಮಾಡುವ ರೀತಿ ಯೋಜಿಸಲಾಗಿದೆ. ಜನರಲ್ ಅಸೆಂಬ್ಲಿ, ಭದ್ರತಾ ಸಮಿತಿ, ಆರ್ಥಿಕ ಮತ್ತು ಸಾಮಾಜಿಕ ಸಮಿತಿ, ಧರ್ಮದರ್ಶಿ ಸಭೆ, ಅಂತಾರಾಷ್ಟ್ರೀಯ ನ್ಯಾಯಾಲಯ ಮತ್ತು ಪ್ರಧಾನ ಕಚೇರಿ ಇವುಗಳು ಆ ಆರು ಅಂಗಗಳು.
ವಿಶ್ವಸಂಸ್ಥೆಯ ಪ್ರಮುಖ ನಿರ್ಧಾರಕ ಅಂಗವಾದ ಭದ್ರತಾ ಸಮಿತಿಯಲ್ಲಿ ಭಾರತಕ್ಕೆ 2021ರಿಂದ ತಾತ್ಕಾಲಿಕ ಸದಸ್ಯತ್ವವು ದೊರೆತಿದ್ದು ಭಾರತಕ್ಕೆ ಸಿಗಬೇಕಾದ ಗೌರವ ದೊರೆತಿದೆ. ರಾಷ್ಟ್ರಗಳ ನಡುವಿನ ವಿವಾದಗಳನ್ನು ಮಾತುಕತೆಯ ಮೂಲಕ ಬಗೆಹರಿಸುವ ವಿಶ್ವಸಂಸ್ಥೆಯ ಮಹಾ ಉದ್ದೇಶಕ್ಕೆ ಅಲ್ಲೊಮ್ಮೆ ಇಲ್ಲೊಮ್ಮೆ ತೊಡಕುಗಳು ಎದುರಾಗಿದೆ. ಹಲವು ಬಾರಿ ಉಭಯ ರಾಷ್ಟ್ರಗಳ ನಡುವಿನ ಯುದ್ಧವನ್ನು ತಡೆಯಲು ಅದಕ್ಕೆ ಸಾಧ್ಯ ಆಗಿಲ್ಲ ಎನ್ನುವುದು ಕೂಡ ಸತ್ಯ. ಇತ್ತೀಚೆಗೆ ಟಿಬೆಟ್ ದೇಶವನ್ನು ಚೀನ ಆಕ್ರಮಣ ಮಾಡಿದಾಗ ವಿಶ್ವ ಸಂಸ್ಥೆ ಏನೂ ಮಾಡಿಲ್ಲ ಎಂದು ಟೀಕೆಗಳು ವ್ಯಕ್ತವಾಗಿವೆ. ಹಾಗೆಯೇ ಕೊವಿಡ್ ವ್ಯಾಪಕವಾಗಿ ಹರಡಲು ಚೀನ ಕಾರಣ ಎಂದು ಅಮೆರಿಕ ವಾದ ಮಾಡಿ ಕಾಲು ಕೆದರಿ ಜಗಳಕ್ಕೆ ಮುಂದಾಯಿತು. ವಿಶ್ವಸಂಸ್ಥೆಯ ತನ್ನ ದೇಣಿಗೆಯನ್ನು ನಿಲ್ಲಿಸುವ ಧಮಕಿ ಕೂಡ ಅಮೆರಿಕ ಹಾಕಿದೆ. ದೇಶಗಳ ನಡುವಿನ ಶತಮಾನಗಳ ಗಡಿಗಳ ಸಮಸ್ಯೆಯನ್ನು ಪರಿಹಾರ ಮಾಡಲು ಕೂಡ ವಿಶ್ವಸಂಸ್ಥೆ ವಿಫಲವಾಗಿದೆ ಎಂದೇ ಹೇಳಬಹುದು.
2004ರ ಹೊತ್ತಿಗೆ ಇರಾಕಿಗೆ ತೈಲ ಮಾರಾಟ ಮಾಡಿ ಆಹಾರ ಪದಾರ್ಥ ಖರೀದಿ ಮಾಡುವ ಕಾರ್ಯಕ್ರಮದಲ್ಲಿ ವಿಶ್ವಸಂಸ್ಥೆಯು ಇರಾಕಿನಿಂದ ಹಣ ಪಡೆದಿದೆ ಎನ್ನುವ ಭ್ರಷ್ಟಾಚಾರದ ಆರೋಪಗಳನ್ನು ಎದುರಿಸಬೇಕಾಯಿತು. ವಿಶ್ವಸಂಸ್ಥೆಯು ಪ್ರಬಲ ರಾಷ್ಟ್ರಗಳ ಕೈಗೊಂಬೆ ಆಗಿದೆ ಎನ್ನುವವರು ಕೂಡ ಇದ್ದಾರೆ. ಆದರೆ ವಿಶ್ವಸಂಸ್ಥೆ ಆರಂಭ ಆದ ನಂತರ ಇನ್ನೊಂದು ಮಹಾ ಯುದ್ಧ ನಡೆದಿಲ್ಲ ಎನ್ನುವುದನ್ನು ನಾವು ಮರೆಯಬಾರದು.
ರಾಜೇಂದ್ರ ಭಟ್ ಕೆ.





















