ಕಾರ್ಕಳದಲ್ಲಿ ಕಳೆಗಟ್ಟಿತು ಶಂಕರ್‌ ನಾಗ್‌ ಸ್ಮರಣೆ “ಶಂಕರಾಭರಣ”

ಕಾರ್ಕಳ : ಕನ್ನಡದ ಖ್ಯಾತ ಸಿನೆಮಾ ನಟ, ನಿರ್ದೇಶಕ, ನಿರ್ಮಾಪಕ ಶಂಕರನಾಗ್ ಅವರನ್ನು ಸ್ಮರಿಸುವ ಮತ್ತು ಶ್ರದ್ಧಾಂಜಲಿ ಅರ್ಪಿಸುವ ಶಂಕರಾಭರಣ- ಇದು ಶಂಕರನಾಗ್ ಸ್ಮರಣೆ ಕಾರ್ಯಕ್ರಮವು ನ. 28ರಂದು ಭುವನೇಂದ್ರ ಪ್ರೌಢಶಾಲೆಯ ಶಾಂತಾರಾಮ ಕಾಮತ್ ಸಭಾಂಗಣದಲ್ಲಿ ನೆರವೇರಿತು. ಭುವನೇಂದ್ರ ವಿದ್ಯಾಸಂಸ್ಥೆಗಳ ಸಂಚಾಲಕ ಎಸ್. ನಿತ್ಯಾನಂದ ಪೈ ಅವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಶಂಕರನಾಗ್ ಕ್ರಿಯಾಶೀಲತೆ ಮತ್ತು ವೇಗ ಅಸಾಧಾರಣ. ಅವರು ಕನ್ನಡ ಸಿನೆಮಾ ರಂಗವನ್ನು ಅತ್ಯಂತ ಶ್ರೀಮಂತಗೊಳಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಅವರು ಚಿತ್ರರಂಗದಲ್ಲಿ ಮಾಡಿದ ಪ್ರಯೋಗ ಅನನ್ಯ ಮತ್ತು ಅನುಪಮ. ಅದ್ಭುತ ನಾಟಕಕಾರರಾಗಿದ ಶಂಕರ್‌ನಾಗ್‌ ಅವರನ್ನು ಚಿತ್ರರಂಗ ಮತ್ತು ನಾಟಕರಂಗ ಮರೆಯಲು ಸಾಧ್ಯವಿಲ್ಲ ಎಂದರು.

ಶಂಕರ್‌ನಾಗ್‌ ಕನ್ನಡದ ಲೆಜೆಂಡ್‌ -ಶಶಿಧರ್‌ ಜಿ.ಎಸ್.‌

ಶಂಕರನಾಗ್ ಬದುಕಿನ ಒಂದೊಂದು ಪುಟವನ್ನು ಹೃದಯಂಗಮವಾಗಿ ಮತ್ತು ಎಳೆಎಳೆಯಾಗಿ ಬಿಚ್ಚಿಟ್ಟ ಕಾರ್ಕಳ ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ್ ಜಿ.ಎಸ್., ಶಂಕರನಾಗ್ ಕೇವಲ ಸಿನೆಮಾ ನಟ ಆದರೆ ನಾವು ಅವರನ್ನು ಈ ರೀತಿ ನೆನಪಿಸುತ್ತಿರಲಿಲ್ಲ. ಅವರು ಒರ್ವ ದಾರ್ಶನಿಕ. ಬೆಂಗಳೂರಿನ ಮೆಟ್ರೋ, ಕಂಟ್ರಿ ಕ್ಲಬ್, ನಂದಿ ಬೆಟ್ಟ ರೋಪ್ ವೇ, ಸಂಕೇತ್ ಸ್ಟುಡಿಯೋ ಮೊದಲಾದ ಹತ್ತಾರು ಕನಸುಗಳನ್ನು ಶಂಕರ್‌ ನಾಗ್‌ ಕಂಡಿದ್ದು ಮಾತ್ರವಲ್ಲ, ಅದನ್ನು ಅನಷ್ಠಾನಗೊಳಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಪಟ್ಟವರು. ಅವರ ಮತ್ತು ಅವರ ಅಣ್ಣ ಅನಂತನಾಗ್ ಅವರ ಸಂಬಂಧಗಳು ಕೂಡ ನಮಗೆ ಮಾದರಿ. ಸಹನಟರ ಬಗ್ಗೆಯೂ ಅಪಾರ ಪ್ರೀತಿ, ಸ್ನೇಹ ಹೊಂದಿದ್ದರು. ಶಂಕರನಾಗ್ ಕನ್ನಡದ ಒಬ್ಬ ಲೆಜಿಂಡ್‌ ಎಂದರು.

ಸನ್ಮಾನ
ರಾಜ್ಯ ಪ್ರಶಸ್ತಿ ವಿಜೇತ ರಾಜಾಪುರ ಸಾರಸ್ವತ ಸೊಸೈಟಿ ಅಧ್ಯಕ್ಷ ಕಡಾರಿ ರವೀಂದ್ರ ಪ್ರಭು, ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ ನಿತ್ಯಾನಂದ ಪೈ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಸ್ಯಾಕ್ಸೋಫೋನ್ ಕಲಾವಿದ ಪ್ರಕಾಶ್ ದೇವಾಡಿಗ ಮತ್ತು ಸಂಗೀತ ನಿರ್ದೇಶಕ ರಾಜೇಶ್ ದೇವಾಡಿಗ ಅವರನ್ನು ಶಾಲು ಹೊದಿಸಿ ಗೌರವಿಸಲಾಯಿತು.

ಮಂಗಳೂರಿನ ಮನಃಶ್ಶಾಸ್ತ್ರಜ್ಞ ಡಾ. ಜಯಪ್ರಕಾಶ್ ಅವರು ಶಂಕರನಾಗ್ ಸ್ಪೂರ್ತಿಯಿಂದ ತಾನು ನಿರ್ಮಿಸಿದ್ದ ಕಿರುಚಿತ್ರ ಮತ್ತು ಸಿನೆಮಾಗಳ ತಿಳಿಸಿದರು. ಭುವನೇಂದ್ರ ವಿದ್ಯಾಸಂಸ್ಥೆಯ ಮುಖ್ಯ ಶಿಕ್ಷಕಿಯರಾದ ವೃಂದಾ ಶೆಣೈ ಮತ್ತು ವಿದ್ಯಾ ಕಿಣಿ, ಹೆಬ್ರಿ ಸರಕಾರಿ ನೌಕರರ ಸಂಘದ ಅಧ್ಯಕ್ಷ ಹರೀಶ್ ಪೂಜಾರಿ ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ಅನಂತರ ಪ್ರಸಿದ್ಧ ಸಂಗೀತ ಕಲಾವಿದರಿಂದ ಶಂಕರನಾಗ್ ಸಿನೆಮಾಗಳ ಪ್ರಸಿದ್ದ ಹಾಡುಗಳ ರಸಮಂಜರಿ ಕಾರ್ಯಕ್ರಮ ನಡೆಯಿತು. ಶಂಕರನಾಗ್ ಅವರ ಸಿನೆಮಾಗಳ ದೃಶ್ಯಗಳು ಬೃಹತ್‌ ಪರದೆಯಲ್ಲಿ ಪ್ರದರ್ಶನಗೊಂಡಿತು.

ಶಿಕ್ಷಕ ಯೋಗೀಶ್ ಕಿಣಿ ಆಶಯ ಗೀತೆ ಹಾಡಿದರು. ತಾಲೂಕು ಕ.ಸಾ.ಪ. ಅಧ್ಯಕ್ಷ ಕೊಂಡಳ್ಳಿ ಪ್ರಭಾಕರ ಶೆಟ್ಟಿ ಸ್ವಾಗತಿಸಿ, ಹೆಬ್ರಿ ಕ. ಸಾ. ಪ. ಅಧ್ಯಕ್ಷ ಪಿ.ವಿ. ಆನಂದ, ತಾಲೂಕು ಸಹ ಶಿಕ್ಷಕರ ಸಂಘದ ಅಧ್ಯಕ್ಷ ನಾರಾಯಣ ಶೆಣೈ ಶುಭಾಶಂಸನೆಗೈದರು. ಶಿಕ್ಷಕ ರಾಜೇಂದ್ರ ಭಟ್‌ ಕೆ. ಕಾರ್ಯಕ್ರಮ ನಿರೂಪಿಸಿ, ಕನ್ನಡ ಶಿಕ್ಷಕ ಗಣೇಶ್ ಜಾಲ್ಸೂರು ವಂದಿಸಿದರು. ಕನ್ನಡ ಸಾಹಿತ್ಯ ಪರಿಷತ್‌ ಕಾರ್ಕಳ ಮತ್ತು ಹೆಬ್ರಿ ಘಟಕ, ಕಾರ್ಕಳದ ಶಂಕರನ ಬಳಗ ಸಂಯುಕ್ತ ಆಶ್ರಯದಲ್ಲಿ ಕರಾವಳಿ ಕರ್ನಾಟಕದಲ್ಲಿ ಮೊದಲ ಬಾರಿಗೆ ನಡೆದ ಶಂಕರನಾಗ್ ಸಂಸ್ಮರಣಾ ಕಾರ್ಯಕ್ರಮವು ಸಾಂಸ್ಕೃತಿಕ ವೈಭವದಿಂದ ಜನಮನ್ನಣೆ ಗಳಿಸಿತು.











































error: Content is protected !!
Scroll to Top