Wednesday, October 27, 2021
spot_img
Homeಸಂಪಾದಕೀಯಸಂಪಾದಕೀಯ - ಕೊರೊನ ಎರಡನೇ ಅಲೆ ಎದುರಿಸಲು ನಮ್ಮ ಸಿದ್ಧತೆ ಸಾಕೇ?

ಸಂಪಾದಕೀಯ – ಕೊರೊನ ಎರಡನೇ ಅಲೆ ಎದುರಿಸಲು ನಮ್ಮ ಸಿದ್ಧತೆ ಸಾಕೇ?

ದಿಲ್ಲಿಯಲ್ಲಿ ಚಳಿ ತೀವ್ರಗೊಳ್ಳುತ್ತಿರುವಂತೆಯೇ ಕೊರೊನ ಪ್ರಕರಣಗಳು ಕೂಡ ಹೆಚ್ಚುತ್ತಿವೆ. ಕೊರೊನ ನಿಯಂತ್ರಿಸಲು ಸಾಧ್ಯವಾಗದೆ ಅಲ್ಲಿನ ಸರಕಾರ ಒದ್ದಾಡುತ್ತಿದೆ. ಕೇಂದ್ರ ಸರಕಾರವೂ ದಿಲ್ಲಿಯ ಪರಿಸ್ಥಿತಿ ನೋಡಿ ಕಂಗಾಲಾಗಿದೆ. ಅಂದ ಹಾಗೇ ದಿಲ್ಲಿಯಲ್ಲೀಗ ಕೊರೊನದ ಎರಡನೇ ಅಲೆಯ ಹಾವಳಿ. ಗುಜರಾತಿನ ಅಹಮದಾಬಾದ್‌ ನಗರದಲ್ಲಿ ಶುಕ್ರವಾರದಿಂದ ಮತ್ತೆ ರಾತ್ರಿ ಕರ್ಫ್ಯೂ ಜಾರಿಗೆ ಬಂದಿದೆ. ಈ ಘೋಷಣೆ ಹೊರಬಿದ್ದದ್ದೇ ತಡ ಜನರು ಗಾಬರಿಯಾಗಿ ಮಾರುಕಟ್ಟೆಗೆ ನುಗ್ಗಿ ಯದ್ವತದ್ವಾ ಖರೀದಿ ಮಾಡಿದ್ದಾರೆ. ಕೇರಳದಲ್ಲೂ ಕೊರೊನ ನಿಯಂತ್ರಣಕ್ಕೆ ಬರುತ್ತಿಲ್ಲ.ಇದೆಲ್ಲ ಕೊರೊನದ ಎರಡನೇ ಅಲೆಯ ಚಿತ್ರಣಗಳು. ಅಂದರೆ ಒಂದು ವಿಷಯ ಸ್ಪಷ್ಟವಾಗುತ್ತದೆ, ಎರಡನೇ ಅಲೆ ಭಾರತಕ್ಕೆ ಅಪ್ಪಳಿಸುತ್ತಿದೆ. ಆದರೆ ಇದನ್ನು ಎದುರಿಸಲು ನಮ್ಮ ತಯಾರಿ ಹೇಗಿದೆ? ಜನರಿಗೆ ಈ ಮಹಾ ಪಿಡುಗಿನ ಅಪಾಯದ ಬಗ್ಗೆ ಇನ್ನಾದರೂ ಅರಿವು ಮೂಡಿದೆಯೇ? ಈ ಪ್ರಶ್ನೆಗಳನ್ನು ಕೇಳಿಕೊಂಡಾಗ ನಿರಾಶದಾಯಕ ಉತ್ತರವೇ ಸಿಗುತ್ತಿದೆ.
ಮುಂದಿನ ವರ್ಷದ ಆರಂಭದಲ್ಲಿ ಕೊರೊನ ಎರಡನೇ ಅಲೆ ಭಾರತಕ್ಕೆ ಅಪ್ಪಳಿಸುವ ಬಗ್ಗೆ ಶಾಕಿಂಗ್ ಸುದ್ದಿಗಳು ಬರುತ್ತಿವೆ. ತಜ್ಞ ವೈದ್ಯರು ಮತ್ತು ಸಂಶೋಧಕರು ಇದನ್ನು ಖಾತರಿಪಡಿಸಿದ್ದಾರೆ. ವಿಶೇಷವಾಗಿ ನಗರ ಮತ್ತು ಮಹಾನಗರಗಳು ಇದಕ್ಕೆ ತುತ್ತಾಗುವ ಸಾಧ್ಯತೆ ಇದೆ ಎನ್ನುತ್ತಿದ್ದಾರೆ ತಜ್ಞರು! ಅದನ್ನು ಎದುರಿಸಲು ನಮ್ಮ ಸಿದ್ಧತೆ ಸಾಕೇ? ಯೋಚನೆ ಮಾಡಿದರೆ ಭಯ ಉಂಟಾಗುತ್ತಿದೆ.
ಕಳೆದ 8-9 ತಿಂಗಳಿಂದ ಆರ್ಥಿಕ ಚಟುವಟಿಕೆಗಳು ಹಳ್ಳ ಹಿಡಿದಿವೆ. ಎಲ್ಲಾ ರಂಗಗಳಲ್ಲೂ ದೇಶಕ್ಕೆ ಹಿನ್ನಡೆ ಆಗಿದೆ. ಶಿಕ್ಷಣ, ಮನರಂಜನೆ, ಸಾರಿಗೆ ಮತ್ತು ಹೊಟೇಲು ಉದ್ಯಮಗಳು ಹೆಚ್ಚು ಪೆಟ್ಟು ತಿಂದಿವೆ. ಈ ಬಾರಿ ಹಬ್ಬಗಳ ಹೊತ್ತಲ್ಲಿ ಬಿಸಿನೆಸ್ ಬಂದೀತು ಎಂದು ಕೂತವರಿಗೆ ನಿರಾಶೆ ಆಗಿದೆ. ಹೂವು, ಹಣ್ಣು, ತರಕಾರಿ, ಜೀನಸು ಬಿಟ್ಟರೆ ಬೇರೆ ಯಾವ ಅಂಗಡಿಯವರು ಕೂಡ ತಲೆ ಎತ್ತಿ ವ್ಯಾಪಾರ ಮಾಡಿಲ್ಲ. ಉದ್ಯೋಗ ಕಳೆದುಕೊಂಡವರ ಸಂಖ್ಯೆ ತುಂಬಾ ಹೆಚ್ಚಿದೆ. ಸಂಬಳ ಇಲ್ಲದ ಖಾಸಗಿ ರಂಗದ ನೌಕರರು, ಶಿಕ್ಷಕರು ಇನ್ನೂ ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.
ಸರಕಾರ ಸಾಕಷ್ಟು ಸಭೆ ನಡೆಸಿ ಕಾಲೇಜು ತೆರೆಯುವ ಪ್ರಯತ್ನ ಮಾಡಿತ್ತು. ಆದರೆ ವಿದ್ಯಾರ್ಥಿಗಳ ಹಾಜರಾತಿ ಇಂದಿಗೂ 10% ಮೀರಿಲ್ಲ. ಕಾಲೇಜು ಸರಿಯಾಗಿ ಆರಂಭವಾಗದೆ PUC, SSLC, Primary ಆರಂಭ ಆಗುವುದು ಕಷ್ಟ. ಸರಕಾರ ಈಗ ಶಾಲೆಯ ಆರಂಭದ ಬಗ್ಗೆ ಇನ್ನೂ ಆತಂಕದಲ್ಲಿ ಇದೆ. ವಿದ್ಯಾಗಮ ಯೋಜನೆಯನ್ನು ಮತ್ತೆ ಮುಂದುವರಿಸುವ ಮಾತನ್ನು ಶಿಕ್ಷಣ ಮಂತ್ರಿ ಹೇಳುತ್ತಿದ್ದಾರೆ.
ಇದು ಶಾಲೆಗಳ ಮಾತಾದರೆ ಬೇರೆ ರಂಗದಲ್ಲಿ ಇನ್ನೂ ಹೆಚ್ಚಿನ ಸಮಸ್ಯೆಗಳಿವೆ. ವಾಣಿಜ್ಯ ಚಟುವಟಿಕೆ ತಲೆಯೆತ್ತಲು ಪೂರಕ ವಾತಾವರಣ ಇನ್ನೂ ನಿರ್ಮಾಣ ಆಗಿಲ್ಲ. ಕೊರೊನ ಸಂಖ್ಯೆ ಇತ್ತೀಚೆಗೆ ಕಡಿಮೆ ಆದಂತೆ ಅನ್ನಿಸಿದೆ. ಕೋವಿಡ್‌ ಆಸ್ಪತ್ರೆಗಳು ಈಗ ಒತ್ತಡ ಇಲ್ಲದೆ ಕೆಲಸ ಮಾಡುತ್ತಿವೆ. ಆರೋಗ್ಯ ವಾರಿಯರ್ಸ್ ಈಗ ಸ್ವಲ್ಪ ರಿಲ್ಯಾಕ್ಸ್ ಆಗಿದ್ದಾರೆ. ಸರಕಾರ ಖಜಾನೆ ತುಂಬಿಸುವ ಪರ್ಯಾಯ ಮೂಲಗಳ ಹುಡುಕಾಟ ಮಾಡುತ್ತಿದೆ. ಇಂಥ ಸಂದರ್ಭದಲ್ಲಿ ಕೊರೊನ ಎರಡನೇ ಅಲೆ ಅಪ್ಪಳಿಸಿದರೆ…?
ಡಿಸೆಂಬರ್, ಜನವರಿ ತಿಂಗಳು ಹೇಳಿ ಕೇಳಿ ಚಳಿಯ ತಿಂಗಳುಗಳು. ವಾತಾವರಣದ ಉಷ್ಣತೆ 20 ಡಿಗ್ರಿಗಿಂತ ಕಡಿಮೆ ಆದರೆ ಕೊರೋನಾ ವೈರಸ್ ಹರಡುವ ಸಾಧ್ಯತೆ ಹೆಚ್ಚುತ್ತದೆ ಎನ್ನುತ್ತದೆ ಸಂಶೋಧನೆಗಳು! ಅಂದರೆ ನಾವು ಇನ್ನೆರಡು ತಿಂಗಳು ಹೆಚ್ಚು ಜಾಗರೂಕತೆ ವಹಿಸಬೇಕು ಎಂದರ್ಥ. ಇವೆರಡು ತಿಂಗಳು ಶಾಲೆ, ಕಾಲೇಜು ತೆರೆಯುವ ರಿಸ್ಕನ್ನು ಸರಕಾರ ತೆಗೆದುಕೊಳ್ಳುವುದು ಬೇಡ ಅಂತ ಅನ್ನಿಸುತ್ತದೆ.
ಓಣಂ ಹಬ್ಬ ಮುಗಿದ ಕೂಡಲೇ ಕೇರಳದಲ್ಲಿ ಕೊರೊನಾ ವ್ಯಾಪಕವಾಗಿ ಹರಡಿತು. ನಮ್ಮಲ್ಲಿ ದೀಪಾವಳಿ ಹೊತ್ತಲ್ಲಿ ನಾವು ಮೈ ಮರೆತಿದ್ದೇವೆ. ಮಾಸ್ಕ್ ಕಿಸೆ ಸೇರಿದೆ. ಸೋಶಿಯಲ್ ಡಿಸ್ಟೆನ್ಸ್ ನಮಗೆ ಮರೆತು ಹೋಗಿದೆ. ಜನ ಜಂಗುಳಿ ಸೇರಿಸುವ ಮದುವೆ ಮುಂತಾದ ಕಾರ್ಯಕ್ರಮಗಳು ನಿರಂತರ ನಡೆಯುತ್ತಿವೆ. ಮುಂದಿನ ತಿಂಗಳು ಪಂಚಾಯತ್ ಚುನಾವಣೆ ಘೋಷಣೆ ಆದರೆ ಹೇಳುವುದೇ ಬೇಡ. ಸರಕಾರ ನಿಗದಿಪಡಿಸುವ ಯಾವ ಸಂಹಿತೆಗಳು ಕೂಡ ಪಾಲನೆ ಆಗುತ್ತಿಲ್ಲ. ಪೇಟೆಗಳಲ್ಲಿ ಜನ ದಟ್ಟಣೆ ಕಡಿಮೆ ಆಗುತ್ತಿಲ್ಲ. ಇಂತಹ ಸಂದರ್ಭದಲ್ಲಿ ಎರಡನೇ ಅಲೆ ಭಾರತಕ್ಕೆ ಅಪ್ಪಳಿಸಿತು ಅಂದರೆ …? ಯೋಚನೆ ಮಾಡಲೂ ಭಯ ಆಗುತ್ತಿದೆ.
ಮೊದಲ ಅಲೆ ಬಂದಾಗ ಭಾರತ ಅದಕ್ಕೆ ಸಿದ್ಧ ಆಗಿರಲಿಲ್ಲ. ಆಸ್ಪತ್ರೆಗಳಲ್ಲಿ ಐಸಿಯು ಮೊದಲಾದ ಸೌಲಭ್ಯಗಳನ್ನು ಒದಗಿಸಲು ಸರಕಾರ ಹರಸಾಹಸ ಪಟ್ಟಿತು. ಆರೋಗ್ಯ ಯೋಧರ ಮೇಲೆ ಅಸಾಧ್ಯ ಒತ್ತಡ ಉಂಟಾಗಿತ್ತು. ನಿದ್ರೆ, ಹಸಿವು ಮರೆತು ಅವರು ಕೆಲಸ ಮಾಡಿದ್ದು ನಮಗಿನ್ನೂ ಮರೆತು ಹೋಗಿಲ್ಲ. ಸರಕಾರವೂ ಹಲವು ಕೋವಿಡ್‌ ಆಸ್ಪತ್ರೆಗಳನ್ನು ವಿಂಗಡಿಸಿ ಇಟ್ಟು ಕಷ್ಟಪಟ್ಟಿತ್ತು. ಈ ಬಾರಿ ಎರಡನೇ ಅಲೆ ಬಲವಾಗಿ ಬೀಸಿದರೆ ನಾವು ಅದಕ್ಕೆ ಮಾನಸಿಕವಾಗಿ ಸಿದ್ಧತೆ ಆದರೂ ಮಾಡಬೇಡವೆ? ಈಗ ಹಲವು ರಾಷ್ಟ್ರಗಳು ಎರಡನೇ ಲಾಕ್ ಡೌನ್ ಘೋಷಣೆ ಮಾಡಿವೆ. ಕೆಲವು ರಾಷ್ಟ್ರಗಳು ರಾತ್ರಿ ಲಾಕ್ ಡೌನ್ ಆದೇಶ ಹೊರಡಿಸಿವೆ. ಅದೇ ಕಠಿಣ ನಿರ್ಧಾರ ಭಾರತ ಸರಕಾರ ತೆಗೆದು ಕೊಳ್ಳಬೇಕಾದ ಪ್ರಸಂಗ ಬಂದರೆ…? ನಿಜಕ್ಕೂ ಗಂಭೀರವಾಗಿ ಯೋಚಿಸಬೇಕಾದ ವಿಷಯ.
ಈ ವರ್ಷಾಂತ್ಯದಲ್ಲಿ ಲಸಿಕೆ ದೊರೆಯುವ ಬಗ್ಗೆ ಸರಕಾರ ಭರವಸೆಯ ಮಾತುಗಳನ್ನು ಜನರ ಮುಂದಿಟ್ಟಿದೆ. ಮೊದಲು ಕೊರೊನ ಯೋಧರಿಗೆ, ಮತ್ತೆ ವೃದ್ಧರಿಗೆ, ಮತ್ತೆ ಸಣ್ಣ ಮಕ್ಕಳಿಗೆ ಹೀಗೆಲ್ಲಾ SOP ರೆಡಿ ಆಗುತ್ತಿದೆ. ನಂತರ ಜನಸಾಮಾನ್ಯರ ಕೈಗೆ ಲಸಿಕೆ ದೊರೆಯಬಹುದು. ನಮ್ಮಂಥ ಭ್ರಷ್ಟಾಚಾರದ, ಸ್ವಜನ ಪಕ್ಷಪಾತದ ದೇಶದಲ್ಲಿ ಲಸಿಕೆ ಉಳ್ಳವರ ಪಾಲಾಗುವುದು, ಮಾರಾಟ ಆಗುವುದು ಅಸಾಧ್ಯ ಏನಲ್ಲ! ಹಾಗಾಗದಿರಲಿ ಎನ್ನುವುದು ನಮ್ಮ ಹಾರೈಕೆ. ಕೊರೊನಕ್ಕೆ ಸರಿಯಾದ ಲಸಿಕೆ ಸಿಗುವ ತನಕ , ಅದು ಎಲ್ಲರಿಗೂ ತಲುಪುವ ತನಕ ನಮ್ಮ ಬದುಕು ಸದಾ ಅಪಾಯದ ಸೆರಗಿನಲ್ಲೇ ನಡೆಯುತ್ತಿರುತ್ತದೆ ಎನ್ನುವ ಅರಿವು ಜನರಲ್ಲಿ ಮೂಡಬೇಕು. ಎಲ್ಲವನ್ನೂ ಸರಕಾರವೇ ಮಾಡಲಿ ಎಂದು ಭಾವಿಸಿ ನಿರಾಳವಾಗಿರಲು ಇದು ಕಾಲವಲ್ಲ. ಸಾಂಕ್ರಾಮಿಕ ರೋಗ ಹರಡದಂತೆ ತಡೆಯಲು ನಮ್ಮಿಂದಾಗುವ ಎಲ್ಲ ಪ್ರಯತ್ನಗಳನ್ನು ಮಾಡಲೇ ಬೇಕು. ಸ್ವ ನಿಯಂತ್ರಣ ಮತ್ತು ಜಾಗೃತಿ ಈ ಕಾಲದಲ್ಲಿ ಅತಿ ಅಗತ್ಯ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!