ಜೀವನದ ಒಂದೊಂದು ಹಂತದಲ್ಲಿ ಒಂದೊಂದು ಹೊಸ ಅನುಭವದೊಂದಿಗೆ ಬದುಕು ಹೆಪ್ಪುಗಟ್ಟುವ ಒಂದು ರಸಪಾಕ. ಭವಿಷ್ಯದ ಕನಸಿನ ಬುತ್ತಿಯೊಳಗಡೆ ನನಸಿನ ರುಚಿಯ ಸವಿಯಲು ಹೊಸ ಅವಕಾಶಗಳಿಗೆ ದಾರಿಯಾಗುವ ಮರೆಯಲಾಗದ ಅನುಭವ ನೀಡುವುದೇ ಅದು ನಮ್ಮ ಕಾಲೇಜು ಜೀವನ.
ಏನೋ ಸಾಧನೆಯ ಅಸ್ಪಷ್ಟ ಗುರಿಯೊಂದಿಗೆ ಕಾಲೇಜಿಗೆ ಅಡ್ಮಿಷನ್ ಆಗ್ತೇವೆ. ಮೊದಲ ಹೆಜ್ಜೆ, ಮೊದಲ ಕ್ಲಾಸು, ಮೊದಲ ದಿನ ಇವೆಲ್ಲವೂ ನಮ್ಮ ಮನಸ್ಸಿನಲ್ಲಿ ಅಳಿಸಲಾಗದ ಹೆಜ್ಜೆ ಗುರುತು. ಇನ್ನು ಕಾಲೇಜು ಶುರು ಆದಾಗ ಹೊಸ ಹೊಸ ಗೆಳೆಯರು, ಹೊಸ ಹೊಸ ಉಪನ್ಯಾಸಕರು. ಅವರ ಪರಿಚಯ ಸರಿಯಾಗಿ ಆಗಲು ಒಂದು ವಾರವಾದರೂ ಬೇಕು. ಇನ್ನು ತರಗತಿಯ ಮೊದಲ ದಿನ ಉಪನ್ಯಾಸಕರಿಗೆ ನಮ್ಮ ಪರಿಚಯ ಹೇಳೋದು ಮೊದಲೇ ಬಾಯಿಪಾಠ ಮಾಡಿಟ್ಟ ಹಾಗೆ. ಎದ್ದು ನಿಂತು ಎರಡು ವಾಕ್ಯ ಹೇಳಿದ ನಂತರ ಸುತ್ತ ಒಮ್ಮೆ ಕ್ಲಾಸನ್ನು ತಿರುಗಿ ನೋಡಿದಾಗ ಒಂದಷ್ಟು ಮೆಚ್ಚುಗೆಯ ನೋಟಗಳು. ಇನ್ನು ಹೊಸ ಹೊಸ ಸ್ನೇಹಿತರ ಪರಿಚಯ, ಸ್ನೇಹಿತರ ಬೇರೆ ಬೇರೆ ಗುಂಪುಗಳು ! ಒಂದು ಕ್ಲಾಸನಲ್ಲಿ ಎಷ್ಟೇ ಗಲಾಟೆಗಳು ಇದ್ರೂ, ಬೇರೆ ತರಗತಿಯವರು ಏನಾದರೂ ತಕರಾರು ಮಾಡಿದ್ರೆ ಆಗ ನಮ್ಮ ಕ್ಲಾಸನಲ್ಲಿ ಎಲ್ಲಿಲ್ಲದ ಒಗ್ಗಟ್ಟು ! ಫಸ್ಟ್ ಇಯರ್ ನ ಸ್ಟೂಡೆಂಟ್ಸ್ ಸೀನಿಯರ್ಸನ್ನು ಇಂಪ್ರೆಸ್ ಮಾಡುವುದರಲ್ಲಿ ಸಮಯ ಕಳೆದರೆ, ಸೆಕೆಂಡ್ ಇಯರ್ ವಿದ್ಯಾರ್ಥಿಗಳಿಗೆ ಒಂದು ಕಡೆ ಜ್ಯೂನಿಯರ್, ಇನ್ನೊಂದೆಡೆ ಸೀನಿಯರ್ಸ್ ಹೀಗೆ ಎರಡೆರಡು ಜವಾಬ್ದಾರಿ!
ಮುಂದೆ ಫೈನಲ್ ಇಯರ್ ಬಂದರೆ ಇಲ್ಲಿ ನಮ್ದೆ ದರ್ಬಾರ್! ಸೀನಿಯಾರಿಟಿಯ ಹಮ್ಮು ಒಂದು ಕಡೆ ಆದ್ರೆ, ಕಾಲೇಜಿಗೆ ವಿದಾಯದ ನೋವು, ಸಂಕಟ ಇನ್ನೊಂದೆಡೆ! ಈ ನಡುವೆ ಮುಂದೇನು…? ಎನ್ನುವ ಕಾಡುವ ಭವಿಷ್ಯದ ಪ್ರಶ್ನೆ!
ಈ ಮೂರು ವರ್ಷದಲ್ಲಿ ಹಲವಾರು ಪರೀಕ್ಷೆಗಳು. ಹೆಚ್ಚು ಮಾರ್ಕ್ಸ್ ಬಂದಾಗ ಖುಷಿ, ರೋಮಾಂಚನ ! ಮಾರ್ಕ್ಸ್ ಕಡಿಮೆಯಾದಾಗ ಸಿಟ್ಟಲ್ಲಿ ವಾಲ್ಯೂವೇಷೆನ್ ಸರಿಯಿಲ್ಲ, ಹಾಗೆ ಹೀಗೆ ಅಂತ ವಾಲ್ಯೂವೇಟರಗೆ ಶಾಪ ಹಾಕಿದ್ದು! ತರಗತಿ ಬಂಕ್ ಮಾಡಿದಾಗ ದೊರೆಯುವ ಕಳ್ಳ ಖುಷಿ. ಆಮೇಲೆ ಬಂಕ್ ಮಾಡಿದ ಪಾಠ ಅರ್ಥ ಆಗದೆ ಅದನ್ನು ಫ್ರೆಂಡ್ಸ್ ಹತ್ರ ಕೇಳಿ ತಿಳಿದುಕೊಳ್ಳುವ ಪರಾದಾಟ! ಗೆಳೆಯರೊಡನೆ ಅಲ್ಪ ಕಾಲದ ಮನಸ್ತಾಪ. ಅವನೇ ಅಥವಾ ಅವಳೇ ಕಾಂಪ್ರಮೈಸ್ ಆಗಲಿ ಎನ್ನುವ ಧಿಮಾಕು ! ಕಾಲೇಜು ಟೂರ್ ಕ್ಯಾಂಪುಗಳಲ್ಲಿ ಮಾಡಿದ ಮೋಜು ಮಸ್ತಿ! ಕಾಲೇಜು ಡೇ, ಸ್ಪೋರ್ಟ್ಸ್ ಡೇ ದಿನಗಳ ಓಡಾಟ, ಬಣ್ಣ ಬಣ್ಣದ ಡ್ರೆಸ್ ತೊಡುವ ಉತ್ಸಾಹ. ಗೂಗಲ್ ಸಹಾಯ ಪಡೆದು ಯಾರ್ಯಾರ ಬರ್ತ್ ಡೇ ವಿಶ್ ಮಾಡುವ ತುಡಿತ. ನಾನೇ ಮೊದಲು ವಿಶ್ ಮಾಡಬೇಕು ಎನ್ನುವ ಹಪಾಹಪಿ ! ಕಾಂಪಿಟಿಷನ್ ಮತ್ತು ಟ್ಯಾಲೆಂಟ್ ಡೇಯಲ್ಲಿ ಭಾಗವಹಿಸುವಿಕೆ, ಕಾಪಿ ಹೊಡೆದು ಅಸೈನ್ಮೆಂಟ್ ಹರಕೆ ತೀರಿಸುವುದು ! ಕೆಲವು ಲೆಕ್ಚರರ್ಸ್ಗಳು ಕೆಲವೊಮ್ಮೆ ಹಿಟ್ಲರ್ ಗಳ ಹಾಗೆ ಕಂಡರೂ ನಂತರ ಅವರು ತೋರಿದ ಪ್ರೀತಿ …ಹೀಗೆ ಬರೀತಾ ಹೋದರೆ ಮುಗಿಯದಷ್ಟು ವಿಚಾರಗಳಿವೆ. ಕಾಲೇಜು ದಿನಗಳು ನಮ್ಮ ಭಾವನೆಗಳಿಗೆ ಕನ್ನಡಿ ಹಿಡಿದದ್ದು ಮಾತ್ರ ಸತ್ಯ. ಕಾಲೇಜಿನಲ್ಲಿ ಕಲಿತ ಪಾಠಗಳು ಜೀವನಕ್ಕೆ ಎಷ್ಟು ಉಪಯೋಗ ಆಗ್ತಾವೋ ಗೊತ್ತಿಲ್ಲ. ಆದರೆ ಕಲಿತ ಮೌಲ್ಯಗಳು, ಗೆಳೆತನದ ಖುಷಿ ಖಂಡಿತವಾಗಿಯೂ ಸ್ಮರಣೀಯ.
ಹೀಗೆ ಕಾಲೇಜು ಜೀವನವು ಮೋಜು ಮಸ್ತಿಯ ಜೊತೆಗೆ ನೀಡಿದ ಜೀವನ ಪಾಠ ಹಾಗೂ ಜೀವನ ಶಿಕ್ಷಣ ನಮ್ಮ ಭಾವ ಕೋಶದಲ್ಲಿ ಸದಾ ಹಸಿರಾಗಿ ಉಳಿಯುವುದು.






















