ಕಾರ್ಕಳ : ಕಾರ್ಕಳದ ಉದ್ಯಮಿ ವಿವೇಕ್ ಕಾಮತ್ – ವಾರಿಜಾ ಕಾಮತ್ ದಂಪತಿಯ ಪುತ್ರ ಮನೋಜ್ ಕಾಮತ್ ಬಹುಮುಖ ಪ್ರತಿಭೆಯ ಬಾಲಕ. ಬಾಲ್ಯದಲ್ಲಿ ದೇವರ ನಾಮ, ಭಜನೆ, ಭಗವದ್ಗೀತೆ, ಸ್ತೋತ್ರಗಳು ಇವುಗಳನ್ನು ಸುಶ್ರಾವ್ಯವಾಗಿ ಹಾಡತೊಡಗಿದನು.
ಬಾಲ್ಯದಲ್ಲಿಯೇ ಯಕ್ಷಗಾನ ಕಲೆಯ ಬಗ್ಗೆ ತೀವ್ರ ಆಸಕ್ತಿ ಮೊಳೆಯಿತು. ಅದೇ ಕುತೂಹಲದಿಂದ “ದೇವಿ ಮಹಾತ್ಮೆ” ಯಕ್ಷಗಾನವನ್ನು 17 ಬಾರಿ ನೋಡಿದ್ದನು. ಮೂರು ವರ್ಷ ಪ್ರಾಯದಲ್ಲಿ ಯಕ್ಷಗಾನದ ಮೊದಲ ವೇಷ ಧರಿಸಿ ಮಿಂಚಿದ್ದ ಹುಡುಗ ಮನೋಜ್. ಯಕ್ಷಗುರು ಸತೀಶ್ ಮಡಿವಾಳ ಅವರ ಬಳಿ ಯಕ್ಷಗಾನ ನೃತ್ಯವನ್ನು ಕಲಿತು ಈಗಾಗಲೇ ಗುರುತಿಸಲ್ಪಡುವ ಪಾತ್ರಗಳನ್ನು ಮಾಡಿದ್ದಾನೆ. ಡಿ. ಮನೋಹರ್ ಕುಮಾರ ವಿರಚಿತ ಯಕ್ಷಗಾನ ” ಕೃಷ್ಣ ಕೃಷ್ಣ ಕೃಷ್ಣ” ಪ್ರಸಂಗದಲ್ಲಿ ಅವರೆದುರು ಬಾಲಕೃಷ್ಣನ ವೇಷವನ್ನು ಧರಿಸಿ ಮಿಂಚಿದ್ದು ಸ್ಮರಣೀಯ.
ವಿವಿಧ ಪ್ರತಿಭಾ ಕಾರಂಜಿಯ ವೇದಿಕೆಗಳಲ್ಲಿ ಮನೋಜನಿಗೆ ಛದ್ಮವೇಷ, ಭಗವದ್ಗೀತೆ ಕಂಠಪಾಠ, ಭಕ್ತಿ ಗೀತೆ, ಚಿತ್ರಕಲೆ ಮೊದಲಾದ ವಿಭಾಗಗಳಲ್ಲಿ ಈಗಾಗಲೇ ಬಹುಮಾನ ದೊರೆತಿವೆ. ಸೂರ್ಯ ಪುರೋಹಿತ್ ಅವರಲ್ಲಿ ಚಿತ್ರಕಲೆ, ನಿನಾದ ನಾಯಕ್ ಅವರಲ್ಲಿ ಕರೋಕೆ ಗಾಯನ, ಶಾರ್ವರಿ ಉಪಾಧ್ಯಾಯ ಅವರಲ್ಲಿ ಕರ್ನಾಟಕ ಸಂಗೀತವನ್ನು ಮನೋಜ್ ಅಭ್ಯಾಸ ಮಾಡುತ್ತಿದ್ದಾನೆ. ಚೆಸ್ ಅವನ ವಿಶೇಷ ಆಸಕ್ತಿಯ ಕ್ಷೇತ್ರ. ದೀಪಕ್ ಪೈ ಅವರು ನಡೆಸುತ್ತಿರುವ ರೋಟರಿ ಚೆಸ್ ಅಕಾಡೆಮಿಯ ವಿದ್ಯಾರ್ಥಿ ಆಗಿ ಕಲಿಯುತ್ತಿರುವ ಮನೋಜ್ ಈಗಾಗಲೇ ಹಲವು ಕಡೆ ಬಹುಮಾನ ಗೆದ್ದಾಗಿದೆ.
ಕತೆಗಳನ್ನು ಬರೆಯುವುದು ಅವನ ವಿಶೇಷವಾದ ಪ್ರತಿಭೆ. ಮೂರನೇ ತರಗತಿಯಲ್ಲಿ ಇರುವಾಗಲೇ ಶಿಕ್ಷಕಿ ವಿಮಲಾ ತಂತ್ರಿ ಅವರ ಪ್ರೇರಣೆಯಿಂದ ಕತೆ ಬರೆಯಲು ಆರಂಭ ಮಾಡಿದ್ದ. ಲಾಕ್ ಡೌನ್ ಸಮಯವನ್ನು ಸದುಪಯೋಗ ಮಾಡಿಕೊಂಡು ಇಂಗ್ಲಿಷ್ ಭಾಷೆಯಲ್ಲಿ ಜೀನಿಯಸ್ ರಾಮನ್, ಆಕಾಶ್, ಅಡ್ವೆಂಚರ್ ಆಫ್ ಅರ್ಜುನ ಇತ್ಯಾದಿ ಕತೆಗಳನ್ನು ಬರೆದು ಮುಗಿಸಿದ್ದಾನೆ. ಆರ್. ಕೆ. ನಾರಾಯಣ್ ಅವರ ಸ್ವಾಮಿ ಆಂಡ್ ಫ್ರೆಂಡ್ಸ್ ಕಥೆಯನ್ನು ಕೊಂಕಣಿ ಭಾಷೆಗೆ ಭಾಷಾಂತರ ಮಾಡಿ ದೇವನಾಗರಿ ಲಿಪಿಯಲ್ಲಿ ಬರೆಯುತ್ತಿದ್ದಾನೆ. ಮನೋಜ್ ಈಗ ಕಾರ್ಕಳ ಕುಕ್ಕುಂದೂರಿನ ಜ್ಞಾನಸುಧಾ ಪ್ರೌಢಶಾಲೆಯ ವಿದ್ಯಾರ್ಥಿ.
ಚಿಗುರು ಪ್ರತಿಭೆ ಮನೋಜ್ ಕಾಮತ್
























